ಬಿವೈ ವಿಜಯೇಂದ್ರ
ಬಿವೈ ವಿಜಯೇಂದ್ರ

ಕಾಂಗ್ರೆಸ್ ಸರ್ಕಾರ ವಾಂಟೆಡ್ ಕ್ರಿಮಿನಲ್‌ಗಳನ್ನು ರಕ್ಷಿಸುತ್ತಿದೆ: ಬಿಜೆಪಿ ಶಾಸಕ ಬಿವೈ ವಿಜಯೇಂದ್ರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಹಗರಣದಲ್ಲಿ ಭಾಗಿಯಾಗಿರುವ ಆಪಾದಿತ ಕ್ರಿಮಿನಲ್ ಆರ್‌ಡಿ ಪಾಟೀಲ್ ಅವರನ್ನು ಕಾಂಗ್ರೆಸ್ ಸರ್ಕಾರ ರಕ್ಷಿಸುತ್ತಿದೆ ಎಂದು ಕರ್ನಾಟಕ ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಮಂಗಳವಾರ ಆರೋಪಿಸಿದ್ದಾರೆ.
Published on

ಕಲಬುರಗಿ/ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಹಗರಣದಲ್ಲಿ ಭಾಗಿಯಾಗಿರುವ ಆಪಾದಿತ ಕ್ರಿಮಿನಲ್ ಆರ್‌ಡಿ ಪಾಟೀಲ್ ಅವರನ್ನು ಕಾಂಗ್ರೆಸ್ ಸರ್ಕಾರ ರಕ್ಷಿಸುತ್ತಿದೆ ಎಂದು ಕರ್ನಾಟಕ ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಮಂಗಳವಾರ ಆರೋಪಿಸಿದ್ದಾರೆ.

ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಾಟೀಲ್ ಅವರನ್ನು ಬಂಧಿಸಲಾಗಿತ್ತು. ಆ ಹಗರಣದಲ್ಲಿ ಜಾಮೀನು ಪಡೆದ ಬಳಿಕ ಕೆಇಎ ಹಗರಣದಲ್ಲಿ ಇವರ ಪಾತ್ರ ಬಯಲಾಗಿದೆ.

ಮಂಗಳವಾರ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಬಿವೈ ವಿಜಯೇಂದ್ರ, ಆಪಾದಿತ ಕ್ರಿಮಿನಲ್ ಆರ್‌ಡಿ ಪಾಟೀಲ್ ಅವರನ್ನು ಕಾಂಗ್ರೆಸ್ ಸರ್ಕಾರ ಮತ್ತು ಸಚಿವರು ರಕ್ಷಿಸುತ್ತಿದ್ದಾರೆ. ಪಾಟೀಲ್ ಮತ್ತು ಅವರ ತಂಡ ಕಾಂಗ್ರೆಸ್ ಸರ್ಕಾರದ ಕೈಗೊಂಬೆಗಳಾಗಿದ್ದಾರೆ ಎಂದು ಆರೋಪಿಸಿದರು.

‘ಸಚಿವರು, ಶಾಸಕರ ಬೆಂಬಲವಿಲ್ಲದ ಹೊರತು ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆರ್‌ಡಿ ಪಾಟೀಲ್ ಸಾಮಾನ್ಯರಲ್ಲ. ಕಾಂಗ್ರೆಸ್ ಸರ್ಕಾರದ ದೊಡ್ಡ ನಾಯಕರ ನೇರ ಸಂಪರ್ಕ ಮತ್ತು ಬೆಂಬಲ ಹೊಂದಿದ್ದಾರೆ. ಎಸ್‌ಪಿ ಶ್ರೇಣಿಯ ಅಧಿಕಾರಿಯಿಂದಲೂ ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಕಾಣದ ಕೈಗಳ ಪಾತ್ರವನ್ನು ಸೂಚಿಸುತ್ತದೆ' ಎಂದು ಅವರು ಹೇಳಿದರು.

ಆರ್‌ಡಿಪಿಆರ್ ಮತ್ತು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, ಆರೋಪಿಗಳಿಗೆ ಹಿಂದಿನ ಬಿಜೆಪಿ ಸರ್ಕಾರದ ಜೊತೆಗೆ ನಂಟಿದೆ ಎಂದು ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ಆರೋಪ ಮಾಡಿದ್ದಾರೆ. ಆದರೆ, ಈಗ ಆರೋಪಿಗಳಿಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತಿರುವುದು ಸ್ಪಷ್ಟವಾಗಿದೆ. ಪೊಲೀಸ್ ಅಧಿಕಾರಿಗಳಿಗೆ ಯಾವುದೇ ಗೌರವ ದೊರಕುತ್ತಿಲ್ಲ. ಆರೋಪಿಯನ್ನು ಬೆಂಬಲಿಸುವುದು ದುರದೃಷ್ಟಕರ ಮತ್ತು ಆಡಳಿತದ ವೈಫಲ್ಯ ಎಂದು ಹೇಳಿದ್ದಾರೆ.

ಈ ಬೆಳವಣಿಗೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಬಿಎಸ್ ಬೆಂಗಳೂರಿನ ಯಡಿಯೂರಪ್ಪ, ಸರ್ಕಾರ ಕೂಡಲೇ ಆರೋಪಿಯನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕು. ಆರೋಪಿ ಪರಾರಿಯಾಗಿರುವ ಬಗ್ಗೆ ನನಗೆ ತಿಳಿದು ಬಂದಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುತ್ತೇನೆ. ರುದ್ರ ಪಾಟೀಲರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. 

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ, ಪಾಟೀಲ್ ವಿರುದ್ಧ ಹಲವು ಪ್ರಕರಣಗಳಿವೆ. ಈತನನ್ನು ಶೀಘ್ರವೇ ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ನಮಗೆ ಮಾಹಿತಿ ಇದೆ. ಇಲಾಖೆಗೆ ಇದು ದೊಡ್ಡ ವಿಷಯವಲ್ಲ, ಎಷ್ಟು ದಿನ ತಲೆಮರೆಸಿಕೊಳ್ಳಲು ಸಾಧ್ಯ? ಎಂದರು.

'ಸತ್ಯವನ್ನು ಹೊರತರುವುದು ನಮ್ಮ ಉದ್ದೇಶವಾಗಿದೆ ಮತ್ತು ನಾವು ಆತನನ್ನು ಖಂಡಿತವಾಗಿಯೂ ಆತನನ್ನು ಬಂಧಿಸುತ್ತೇವೆ. ಅವರು ಪಿಎಸ್ಐ ನೇಮಕಾತಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಮತ್ತು ಕೆಇಎ ಹಗರಣದಲ್ಲಿ ನಮಗೆ ಹೆಚ್ಚಿನ ಸಾಕ್ಷ್ಯಗಳು ಸಿಗುತ್ತವೆ. ಅಗತ್ಯವಿದ್ದರೆ, ಕೆಇಎ ಪರೀಕ್ಷೆ ಹಗರಣದ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಹಸ್ತಾಂತರಿಸಲಾಗುವುದು' ಎಂದು ಅವರು ಹೇಳಿದರು.

ರುದ್ರ ಪಾಟೀಲ ಎಲ್ಲಿ ಅಡಗಿದ್ದಾರೆ ಎಂಬ ಬಗ್ಗೆ ಎಸ್‌ಪಿ ಅವರಿಗೆ ಮೊದಲೇ ಮಾಹಿತಿ ಇದ್ದರೂ, ಆರೋಪಿ ಪರಾರಿಯಾಗಿರುವ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಅವರು, ನಿರ್ಲಕ್ಷ್ಯ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೆಇಎ ಹಗರಣದ ಕಿಂಗ್ ಪಿನ್ ಆಗಿರುವ ರುದ್ರ ಪಾಟೀಲರು ಸುಖಾಸುಮ್ಮನೆ ತಿರುಗಾಡುತ್ತಿದ್ದರೂ ಪೊಲೀಸರು ಬಂಧಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದಲ್ಲದೆ ಆತನ ಫ್ಲಾಟ್‌ನಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಉದ್ದೇಶಪೂರ್ವಕವಾಗಿ ಆತನನ್ನು ತಪ್ಪಿಸಿಕೊಳ್ಳಲು ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಸಿಬಿಐ ತನಿಖೆಯ ಬೇಡಿಕೆಯನ್ನು ತಿರಸ್ಕರಿಸಿದ ಅವರು, ತನಿಖೆಯನ್ನು ಸಮರ್ಥವಾಗಿ ನಡೆಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು. 

ಆರೋಪಿ ಆರ್.ಡಿ. ಪಾಟೀಲ್ ಅವರು ಪಿಎಸ್ಐ ಹಗರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕರ್ನಾಟಕದ ಅಫಜಲಪುರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com