'ಶೋಲೆ' ಸಿನಿಮಾದಲ್ಲಿ ನನ್ನ ಬೈಕನ್ನು ನೋಡುವ ಕಾರಣಕ್ಕಾಗಿ...: 'ಕೊನೆಯ ಬಿಳಿ ಬೇಟೆಗಾರ' ಪುಸ್ತಕದ ಆಯ್ದ ಅಧ್ಯಾಯ

ಬೇಟೆಗಾರ ಡೊನಾಲ್ಡ್ ಆಂಡರ್ಸನ್ ಮತ್ತು ಲೇಖಕ ಜೋಶುವಾ ಮ್ಯಾಥ್ಯೂ ಅವರ 'ದ ಲಾಸ್ಟ್ ವೈಟ್ ಹಂಟರ್' ಇಂಗ್ಲಿಷ್ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಲಾಗುತ್ತಿದೆ. ಇದನ್ನು ಎಲ್ ಜಿ ಮೀರಾ ಅವರು 'ಕೊನೆಯ ಬಿಳಿ ಬೇಟೆಗಾರ' ಎಂದು ಅನುವಾದಿಸಿದ್ದಾರೆ. ಆಕೃತಿ ಬುಕ್ಸ್ ಈ ಪುಸ್ತಕವನ್ನು ಪ್ರಕಟಿಸಿದೆ.
'ಕೊನೆಯ ಬಿಳಿ ಬೇಟೆಗಾರ' ಪುಸ್ತಕ
'ಕೊನೆಯ ಬಿಳಿ ಬೇಟೆಗಾರ' ಪುಸ್ತಕ

ಬೇಟೆಗಾರ ಡೊನಾಲ್ಡ್ ಆಂಡರ್ಸನ್ ಮತ್ತು ಲೇಖಕ ಜೋಶುವಾ ಮ್ಯಾಥ್ಯೂ ಅವರ ಇಂಗ್ಲಿಷ್ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಲಾಗುತ್ತಿದೆ. ಇದು ಬೆಂಗಳೂರಿನಲ್ಲಿ ಡೊನಾಲ್ಡ್‌ ರವರು ಕಳೆದ ಜೀವನವನ್ನು ವಿವರಿಸುತ್ತದೆ. ಅವರನ್ನು 'ಭಾರತದ ಕೊನೆಯ ವಸಾಹತುಶಾಹಿ ಬೇಟೆಗಾರ' ಎಂದು ಪರಿಗಣಿಸಲಾಗಿದೆ ಮತ್ತು 1934 ರಿಂದ 2014 ರವರೆಗೆ ನಗರದಲ್ಲಿ ವಾಸಿಸುತ್ತಿದ್ದರು.

‘ಕೊನೆಯ ಬಿಳಿ ಬೇಟೆಗಾರ’ ಪುಸ್ತಕದಿಂದ ಆಯ್ದ ಅಧ್ಯಾಯ
“ನನ್ನ ಹಳೆಯ ಮೋಟಾರು ಸೈಕಲ್ಲನ್ನು ದೊಡ್ಡ ಪರದೆಯ ಮೇಲೆ ನೋಡುವ ಒಂದೇ ಕಾರಣಕ್ಕಾಗಿ ಆ ಸಿನಿಮಾ ನೋಡಲು ಕೂಡ ಹೋದೆ”
ಆ ದಿನಗಳಲ್ಲಿ ಬೈಕ್ ಕೊಳ್ಳುವ ಯಾರೇ ಆದರೂ ಮೊದಲು ನೆನಪಿಸಿಕೊಳ್ಳುವ ಅಂಗಡಿಯೆಂದರೆ ಸೌತ್ ಪೆರೇಡ್‌ನ `ಸಿಂಪ್ಸನ್ ಅಂಡ್ ಕೋ’ ಆಗಿತ್ತು. ಆದರೆ ನಾನು ಕೊಂಡ ಬೈಕುಗಳು ಯಾವತ್ತೂ ಹೊಸ ಬೈಕುಗಳಾಗಿರಲಿಲ್ಲ. ನನ್ನ ಮುಂದಿನ ಮೋಟರು ಸೈಕಲ್ ಕೂಡ ಎರಡನೆಯ ಬಳಕೆಯದೇ ಆಗಿತ್ತು. ಅದು ಯುದ್ಧದ ಪಳೆಯುಳಿಕೆಯಾಗಿದ್ದ 1942 500 ಸಿಸಿ ಬಿಎಸ್‌ಎ. ಅದಕ್ಕೆ ಜೋಡಿಸಲ್ಪಟ್ಟಂತಹ ಒಂದು ಪಕ್ಕದ ಡಬ್ಬ(ಸೈಡ್ ಕಾರ್) ಇತ್ತು. ಅದರ ನೋಂದಣಿ ಸಂಖ್ಯೆ ಎಂವೈಬಿ 3047. ಇದು ತುಂಬ ಪರಿಚಿತ ಅನ್ನಿಸುತ್ತದೇನು?

ನೀವು ಸುವಿಖ್ಯಾತ ಸಿನಿಮಾ `ಶೋಲೆ’ಯನ್ನು ನೋಡಿದ್ದರೆ ನಿಮಗೆ ಇದು ನೆನಪಾಗುತ್ತೆ. ಆ `ಪಕ್ಕದ ಡಬ್ಬ’ ನನ್ನ ಶೋಕಿ ಗುಣಕ್ಕೆ ತುಸು ಹೊಂದುತ್ತಿರಲಿಲ್ಲವಾದರೂ ಆ ಕಾಲದ ಮಟ್ಟಿಗೆ ಆ ಮೋಟರು ಸೈಕಲ್ಲು ಭಿನ್ನವಾಗಿತ್ತು, ಅಗ್ಗವಾಗಿತ್ತು ಮತ್ತು ಅದರಲ್ಲಿನ ಡಬ್ಬವನ್ನು ಸಾಮಾನು ಇಟ್ಟುಕೊಳ್ಳಲೂ ಸಹ ಬಳಸಬಹುದಿತ್ತು. ನಾನು ಅದನ್ನು ಕೊಂಡಾಗ ಈ ವಾಹನ ತೀರಾ ಕೆಟ್ಟ ಸ್ಥಿತಿಯಲ್ಲಿತ್ತು. ಅದನ್ನು ಸರಿ ಮಾಡಿಸಿ ಚಂದಗೊಳಿಸಲು ನಾನು ಸಾಕಷ್ಟು ಹಣ ಖರ್ಚು ಮಾಡಬೇಕಾಯಿತು. ನಾನು ಅದರಲ್ಲಿದ್ದ `ಪಕ್ಕದ ಡಬ್ಬ’ವನ್ನು ವರ್ಣಿಸುವುದಾದರೆ, ಅದು ಚಕ್ರಗಳ ಮೇಲಿನ ಶವಪೆಟ್ಟಿಗೆಯಂತೆ ಕಾಣುತ್ತಿತ್ತು. ಇದನ್ನು ವಿನ್ಯಾಸಯೋಜನೆ ಮಾಡಿದವನು ಒಬ್ಬ ಉಜ್ಪಲ ಪ್ರತಿಭೆಯ ಯಂತ್ರತಜ್ಞ ಎಂದು ನನಗೆ ಅನ್ನಿಸುವುದಿಲ್ಲ, ಏಕೆಂದರೆ ಅದರೊಳಗೆ ನೀವು ಒಂದು ಸಲ ಹೋದಿರಿ ಎಂದರೆ ಸಾಕು, ಒಂದು ಬಂಧಿತ ಭಾವನೆ ಬರುತ್ತಿತ್ತು.

ಈ ಬೈಕಿನೊಂದಿಗಿನ ಅತ್ಯಂತ ತಮಾಷೆಯ ಘಟನೆಯು ನಾವು ಕನಕಪುರ ರಸ್ತೆಯಲ್ಲಿ ಬಾತುಕೋಳಿ ಶಿಕಾರಿಗೆ ಹೋದಾಗ ನಡೆಯಿತು. ಅನೇಕ ಸುತ್ತುಗಳಲ್ಲಿ ನಾಣ್ಯ ಚಿಮ್ಮಿಸಿದ ಮೇಲೆ ರೋನಿ ಬಟ್‌ಫಾಯ್ ತನ್ನನ್ನು ಚಾಲಕನ ಸ್ಥಾನದಲ್ಲಿ ಸ್ಥಾಪಿಸಿಕೊಂಡ ಮತ್ತು ಹಾಗೂ ನಾವು ಸೋತವರು, ಅಂದರೆ ಸಿಡ್ನಿ ಮತ್ತು ನಾನು ಗತ್ಯಂತರವಿಲ್ಲದೆ, ಡಬ್ಬದಲ್ಲಿ ಕೂರಲು ಒಪ್ಪಬೇಕಾಯಿತು. ನಾನು ನಮ್ಮ ತಂಡದಲ್ಲಿನ ನನ್ನ ಹಿರಿತನದ ದೊಡ್ಡಸ್ತಿಕೆಯನ್ನು ನೆಪ ಮಾಡಿಕೊಂಡು ಸಿಡ್ನಿಯನ್ನು ಡಬ್ಬದ ಹಿಂದಿನ ಪೀಠದಲ್ಲಿ ಕೂರಿಸಿ ನಾನು ಮುಂದೆ ಕೂತಿದ್ದೆ. ರೋನಿ ಅಂದು ತುಂಬ ಎಚ್ಚರಿಕೆಯಿಂದ ಗಾಡಿ ಓಡಿಸುತ್ತಿದ್ದ, ಏರು ತಗ್ಗು, ಹಳ್ಳ ಗುಂಡಿಗಳ ಬಗ್ಗೆ ಸಾಕಷ್ಟು ಜಾಗೃತನಾಗಿದ್ದ. ಹಾಂ, ಕರಾರುವಾಕ್ಕಾಗಿ ಹೇಳಬೇಕೆಂದರೆ ಅವನು ಕುಳಿತಿದ್ದ ಮೋಟಾರು ಸೈಕಲ್ಲಿನ ಭಾಗವು ಹಳ್ಳದಿಣ್ಣೆಗಳನ್ನು ತಪ್ಪಿಸಿಕೊಂಡು ಓಡುತ್ತಿತ್ತು, ಆದರೆ ನಾವು ಇರುಕಿಕೊಂಡಿದ್ದ ಭಾಗವಲ್ಲ. ನಮ್ಮ ಉದ್ಗಾರಗಳು ಮತ್ತು ಕೂಗು, ಒರಲುಗಳು ಅವನು ಓಡಿಸುತ್ತಿದ್ದ ವೇಗಕ್ಕೆ ಸಮಾನುಪಾತದಲ್ಲಿದ್ದವು, ಮತ್ತು ಈ ಗಣಿತದ ಸಮೀಕರಣವು ಸೋಮನಹಳ್ಳಿಯ ಹತ್ತಿರದ ಒಂದು ತಿರುವಿನಲ್ಲಿ ಅನಂತ(ಇನ್ಫಿನಿಟಿ)ವನ್ನು ತಲುಪಿತು.

ಆಗ ನಾವು ಒಂದು ದೊಡ್ಡ ಕೆರೆಯನ್ನು ಎರಡಾಗಿ ವಿಭಾಗಿಸಿದ್ದ ಕಿರಿದಾದ ರಸ್ತೆಯಲ್ಲಿ ಸಾಗುತ್ತಿದ್ದೆವು. ರೋನಿಗೆ ಆಗ ಬೈಕು ಓಡಿಸುವವನು ಮತ್ತು ಬೈಕು ಒಂದರೊಳಗೊಂದು ಲೀನವಾಗುವ ಜಾಗವು ಇದೊಂದೇ ಅನ್ನಿಸಿಬಿಟ್ಟಿತು. ಹೌದು, ನಿಜಕ್ಕೂ ಇದು ಒಂದು ಸ್ಫೂರ್ತಿದಾಯಕ ವಿಚಾರ, ಏಕೆಂದರೆ ಬೈಕು ಓಡಿಸುವವರು ರಸ್ತೆಯ ಮೇಲಿದ್ದಾಗ ಅವರಿಗೆ ಈ ಭಾವನೆ ಬರುತ್ತದೆ. ಆದರೆ ನಾವು ಅವನ ಬೈಕಿಗೆ ತಗುಲಿಕೊಂಡಿದ್ದೆವು ಎಂಬುದನ್ನು ಮರೆಯುವಂಥ ವೇಗವಾಗಲೀ, ರಸ್ತೆಯ ಗತಿಸ್ಥಿತಿಯಾಗಲೀ, ಅಥವಾ ಸಮಯವಾಗಲೀ ಅದಲ್ಲ. ನಾವು ಕೆರೆಯ ರಸ್ತೆಗೆ, ಲೋಕ ಕಿತ್ತುಹೋಗುವಂತಹ ವೇಗದಲ್ಲಿ ಬಂದೆವು, ಆಮೇಲೆ, ಇದ್ದಕ್ಕಿದ್ದಂತೆ ಉಂಟಾದ ಒಂದು ಮೌನ ಹಾಗೂ ಇನ್ನು ರಸ್ತೆಯು ಅಷ್ಟೇನೂ ಕೆಟ್ಟದಾಗಿಲ್ಲ ಎಂದು ಅನ್ನಿಸಿದ್ದು ನನಗೆ ನೆನಪಿದೆ. ಶಾಂತಭಾವವೊಂದು ಕ್ಷಣಕಾಲಮಾತ್ರ ನಮ್ಮ ಸುತ್ತ ಒಂದು ಹೊದಿಕೆಯಂತೆ ಆವರಿಸಿತು. ಡಬ್ಬವು ಮೋಟಾರು ಸೈಕಲ್‌ನಿಂದ ಬೇರ್ಪಟ್ಟು, ಇಳಿಜಾರಿನಲ್ಲಿ ಒಂದು ಹಾಸ್ಯಾಸ್ಪದ ಕೋನದಲ್ಲಿ ನುಗ್ಗಿ, ಕೆಳಗಿದ್ದ ತೇವನೆಲದಲ್ಲಿ ತೇಲಿತು. ಸಿಡ್ನಿಯು `ಅಯ್ಯೋ, ಸತ್ತೆವು, ಸಾಯಿಸಿಬಿಟ್ಟ’ ಎಂದು ಕಿರಿಚುತ್ತಿದ್ದ. ನಾವು ನಮ್ಮ ತಲೆಗಳನ್ನು ಹೊರಗೆ ಚಾಚಿ ನೋಡಿದಾಗ ಒಬ್ಬ ಮನುಷ್ಯ ಸರಿನೇರವಾಗಿ ನಮ್ಮ ದಾರಿಯಲ್ಲೇ ಏನನ್ನೋ ನೆಡುತ್ತಿದ್ದುದು ಕಂಡಿತು. ಇದು ಖಂಡಿತ ನಗುವ ವಿಷಯವಲ್ಲ, ಆದರೆ ಅವನ ಮುಖಭಾವವು ನಿಜಕ್ಕೂ ನಗೆಯುಕ್ಕಿಸುವಂಥದ್ದಾಗಿತ್ತು. ಏಕೆಂದರೆ ಇದ್ದಕ್ಕಿದ್ದಂತೆ ಆಕಾಶದಿಂದ ಉದುರಿತೋ ಎಂಬಂತೆ ಈ ಶವಪೆಟ್ಟಿಗೆಯಂತಹ ಈ ಯಂತ್ರವಿಶಿಷ್ಟವು ಹಾರಿಬಂದದ್ದೂ ಅಲ್ಲದೆ, ಅದರೊಳಗೆ ಹೆದರಿ ಕಿರುಚುತ್ತಿರುವ ಎರಡು ತಲೆಗಳು ಕಂಡರೆ ಹೇಗಾಗಿರಬೇಡ ಅವನಿಗೆ. ಅವನು ತನ್ನ ಕೈಲಿದ್ದ ಎಲ್ಲವನ್ನೂ ಅಲ್ಲಲ್ಲೇ ಬಿಸಾಡಿ ಸತ್ತೆನೋ ಕೆಟ್ಟೆನೋ ಎಂಬಂತೆ ಓಡಿ ಹೋದ.

ಹಾಂ, ನಿಜ, ನಾವು ಮೃದುವಾದ ಮಣ್ಣಿನ ಮೇಲೆ ಬಿದ್ದಿದ್ದರಿಂದ ಅದು ಮೆತ್ತೆಯಂತೆ ಕೆಲಸ ಮಾಡಿತು, ಆದರೂ, ಬಿದ್ದಿದ್ದರಿಂದ ನಮ್ಮ ಕೆಲವು ಮೂಳೆಗಳು ಮುರಿದವು. ಮತ್ತು ಮೈಮೇಲೆ ಸೀಳುಗಾಯ, ಜಜ್ಜುಗಾಯ ಆಗಿದ್ದವು. ನಮಗಾದ ಈ ಹಾನಿಯನ್ನು ಸಮಗೊಳಿಸಲೇನೋ ಎಂಬಂತೆ ರೋನಿಯು (ರಸ್ತೆಯ) ಆ ಬದಿಯಲ್ಲಿದ್ದ ಒಂದು ಸಣ್ಣ ಹೊಂಡದಲ್ಲಿ ಬಿದ್ದಿದ್ದ, ಅವನಿಗೂ ಮೈತುಂಬ ಗಾಯಗಳಾಗಿದ್ದವು. ಇಂತಹ ಘಟನೆಗಳು ನಡೆದಿದ್ದರೂ, ಯಾವಾಗಲೂ, ನನ್ನ ಬೈಕನ್ನು ನಾನು ದುರಸ್ತಿ ಮಾಡಿಸಿ ಚೆನ್ನಾಗಿಯೇ ಇಟ್ಟುಕೊಳ್ಳುತ್ತಿದ್ದೆ. ಆ ದಿನಗಳು ಹೇಗಿದ್ದವೆಂದರೆ ಯಾವುದೇ ವಸ್ತುವಿರಲಿ, ಅದು ಹಾಳಾಗಿ ಚಿಂದಿ ಚೂರಾಗುವ ತನಕ ಅದನ್ನು ಬಿಸಾಡುವ ಪ್ರಶ್ನೆ ಇರಲಿಲ್ಲ. 

ವರ್ಷಗಳು ಕಳೆದವು, ನನಗೆ ತುಸು ಹೊಸದಾದ ಮೋಟರ್‌ಸೈಕಲ್ ಬೇಕು ಅನ್ನಿಸಿತು. ನಾನು ಒಬ್ಬ ವ್ಯಕ್ತಿಗೆ ನನ್ನ ಈ (ಡಬ್ಬವಿದ್ದ) ಮೋಟರು ಸೈಕಲ್ಲನ್ನು ಮಾರಿದೆ. ಅವನು ಅದನ್ನು `ಶೋಲೆ’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ಧಮೇಂದ್ರ ಅವರು ಬಳಸುವ ಸಲುವಾಗಿ ಬಾಡಿಗೆಗೆ ನೀಡಿದ. ನನಗೆ ಇದೆಲ್ಲದರ ಬಗ್ಗೆ ನನ್ನ ಸ್ನೇಹಿತರು ಹೇಳುವ ತನಕ ಗೊತ್ತೇ ಇರಲಿಲ್ಲ. ಹಾಂ, ಹೌದು, ನಾನು ಇದರಿಂದಾಗಿ ತುಸು ವಿಖ್ಯಾತ ವ್ಯಕ್ತಿಯಾದೆ. ಅಷ್ಟೇ ಅಲ್ಲ, ನನ್ನ ಹಳೆಯ ಮೋಟಾರು ಸೈಕಲ್ಲನ್ನು ದೊಡ್ಡ ಪರದೆಯ ಮೇಲೆ ನೋಡುವ ಒಂದೇ ಕಾರಣಕ್ಕಾಗಿ ಆ ಸಿನಿಮಾ ನೋಡಲು ಕೂಡ ಹೋದೆ. 

ಅನುವಾದಿತ ಪುಸ್ತಕವನ್ನು ನವೆಂಬರ್ 11 ರಂದು ಸಂಜೆ 4.30 ಕ್ಕೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಪುಸ್ತಕ ವಾಚನ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು. ಮೂಲ ಪುಸ್ತಕದ ಶೀರ್ಷಿಕೆ, 'ದಿ ಲಾಸ್ಟ್ ವೈಟ್ ಹಂಟರ್'. ಇದನ್ನು ಎಲ್ ಜಿ ಮೀರಾ ಅವರು 'ಕೊನೆಯ ಬಿಳಿ ಬೇಟೆಗಾರ' ಎಂದು ಅನುವಾದಿಸಿದ್ದಾರೆ ಮತ್ತು ಆಕೃತಿ ಬುಕ್ಸ್ ಈ ಪುಸ್ತಕವನ್ನು ಪ್ರಕಟಿಸಿದೆ. ಇದನ್ನು ಖ್ಯಾತ ಪ್ರಾಣಿಶಾಸ್ತ್ರಜ್ಞ ಮತ್ತು ಹುಲಿ ತಜ್ಞ ಕೆ ಉಲ್ಲಾಸ್ ಕಾರಂತ್ ಬಿಡುಗಡೆ ಮಾಡಲಿದ್ದಾರೆ.

ಡೊನಾಲ್ಡ್ ತನ್ನ ತಂದೆಯ (ಲೇಖಕ ಮತ್ತು ಬೇಟೆಗಾರ ಕೆನ್ನೆತ್ ಆಂಡರ್ಸನ್), ಕಾಡಿನಲ್ಲಿ ಅವರದೇ ಆದ ಅನ್ವೇಷಣೆಗಳ ನೆನಪುಗಳನ್ನು ಮತ್ತು ಅವರು ಹೇಗೆ ಬೇಟೆಗಾರನಿಂದ ಪರಿಸರವಾದಿಯಾಗಿ ಬದಲಾದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ ಎಂದು ಆಕೃತಿ ಬುಕ್ಸ್ ಸಂಸ್ಥಾಪಕ ಗುರುಪ್ರಸಾದ್ ಡಿ ಎನ್ ಹೇಳಿದರು. “ಡೊನಾಲ್ಡ್ ರವರ ಕಾಲದಲ್ಲಿ ಕರ್ನಾಟಕದ ಮತ್ತು ಸುತ್ತಮುತ್ತಲಿನ ಕಾಡುಗಳು ಹೇಗಿದ್ದವು ಎಂಬುದರ ಬಗ್ಗೆ ಪುಸ್ತಕವು ಓದುಗರಿಗೆ ಒಂದು ಇಣುಕು ನೋಟ ನೀಡುತ್ತದೆ. ಇದು 1930 ರ ದಶಕದಿಂದ ಬೆಂಗಳೂರು ಮತ್ತು ನಗರವು ಒಳಗಾದ ಬದಲಾವಣೆಗಳನ್ನು ವಿವರಿಸುತ್ತದೆ,” ಎಂದು ಅವರು ತಿಳಿಸಿದರು.

ಕೊನೆಯ ಬಿಳಿ ಬೇಟೆಗಾರ (ವಸಾಹತು ಶಿಕಾರಿಯೊಬ್ಬನ ನೆನಪುಗಳು)
‘ದ ಲಾಸ್ಟ್ ವೈಹ್ಟ್ ಹಂಟರ್’ನ ಅನುವಾದ
ಡೊನಾಲ್ಡ್ ಆಂಡರ್ಸನ್ (ಕೆನ್ನೆತ್ ಆಂಡರ್ಸನ್ ಮಗ)
ಇಂಗ್ಲಿಷ್ ನಿರೂಪಣೆ: ಜೋಷುವಾ ಮ್ಯಾಥ್ಯೂ
ಕನ್ನಡಕ್ಕೆ: ಎಲ್ ಜಿ ಮೀರಾ
ಪ್ರಕಟಣೆ: ಆಕೃತಿ ಪುಸ್ತಕ, ರಾಜಾಜಿನಗರ
ಬೆಲೆ: 395/- ಪುಟಗಳು: 384

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com