ಚಿಕ್ಕಬಳ್ಳಾಪುರ: 27 ರಕ್ತ ಮಾದರಿಗಳಲ್ಲಿ ಝಿಕಾ ವೈರಸ್ ಪತ್ತೆಯಾಗಿಲ್ಲ; ಆರೋಗ್ಯ ಸಚಿವ

ಝಿಕಾ ವೈರಸ್ ಪತ್ತೆಗಾಗಿ ಕಳುಹಿಸಿದ್ದ ಮಾದರಿಗಳಲ್ಲಿ 27 ಮಾದರಿಯ ಫಲಿತಾಂಶ ಬಂದಿದ್ದು, ಅದರಲ್ಲಿ ವೈರಸ್‌ ಇಲ್ಲದಿರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಿಡ್ಲಘಟ್ಟ: ಝಿಕಾ ವೈರಸ್ ಪತ್ತೆಗಾಗಿ ಕಳುಹಿಸಿದ್ದ ಮಾದರಿಗಳಲ್ಲಿ 27 ಮಾದರಿಯ ಫಲಿತಾಂಶ ಬಂದಿದ್ದು, ಅದರಲ್ಲಿ ವೈರಸ್‌ ಇಲ್ಲದಿರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ವೈರಾಲಜಿಯಿಂದ 27 ಮಾದರಿಯ ಫಲಿತಾಂಶ ಬಂದಿದ್ದು, ವರದಿಯಲ್ಲಿ ಝಿಕಾ ವೈರಸ್ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ಭಯಪಡಬಾರದು, ಜಾಗರೂಕರಾಗಿರುವಂತೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ.

ರಾಜ್ಯದಲ್ಲಿಯೇ ಪ್ರಥಮ ಬಾರಿ ಝೀಕಾ ವೈರಸ್ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿನ ಸೊಳ್ಳೆಯೊಂದರಲ್ಲಿ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ತಲಕಾಯಲಬೆಟ್ಟ ಗ್ರಾಮದ ಐದು ಕಿ.ಮೀ ವ್ಯಾಪ್ತಿಯಲ್ಲಿರುವ 5 ಗ್ರಾಮಗಳ 37 ಗರ್ಭಿಣಿಯರು ಹಾಗೂ 11 ಜ್ವರ ಪೀಡಿತರ ಒಟ್ಟು 48 ಮಂದಿಯ ರಕ್ತ ಮಾದರಿಯನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಲಾಗಿತ್ತು.

ಈ ಪೈಕಿ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ವೈರಾಲಜಿಯಿಂದ 27 ಮಾದರಿಯ ಫಲಿತಾಂಶ ಬಂದಿದ್ದು, ಅದರಲ್ಲಿ 23 ಗರ್ಭಿಣಿಯರು ಹಾಗೂ 4 ಜ್ವರಪೀಡಿತರದು ಫಲಿತಾಂಶ ಇದೆ. ಇನ್ನೂ 21 ಮಾದರಿ ಫಲಿತಾಂಶ ಸದ್ಯದಲ್ಲಿಯೇ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಆರೋಗ್ಯ ಇಲಾಖೆಯಿಂದ ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಉತ್ತಮ ಪೋಷಕಾಂಶಯುಕ್ತ ಆಹಾರ ಸೇವನೆಗೆ ಸೂಚನೆ ನೀಡಲಾಗಿದೆ. ಎಲ್ಲರೂ ಸೊಳ್ಳೆ ಪರದೆ ಬಳಸಿಕೊಂಡು ಮಲಗಲು ತಿಳಿಸಲಾಗಿದೆ. ಝೀಕಾ ವೈರಸ್ ಆತಂಕದಿಂದ ದೂರ ಇರಲು ಸಲಹೆ ನೀಡಲಾಗುತ್ತಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರು ಹೇಳಿದ್ದಾರೆ.

ಯಾರೂ ಅನಗತ್ಯವಾಗಿ ಆತಂಕ ಪಡಬೇಕಾಗಿಲ್ಲ. ವಾರಕ್ಕೊಮ್ಮೆ ತೊಟ್ಟಿ ತೊಳೆದು, ಶೇಖರಿಸಿಟ್ಟ ನೀರನ್ನು ಬದಲಿಸಬೇಕು. ಮನೆ ಮುಂದೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com