ಡಿಸೆಂಬರ್ ಒಳಗೆ ಇ-ಆಫೀಸ್‌ ತಂತ್ರಾಂಶ ಅಳವಡಿಕೆಗೆ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಗಡುವು

ಡಿಸೆಂಬರ್ ಒಳಗೆ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೂಚನೆ ನೀಡಿದ್ದಾರೆ.
ಸಚಿವ ಕೃಷ್ಣಬೈರೇಗೌಡ
ಸಚಿವ ಕೃಷ್ಣಬೈರೇಗೌಡ

ಬೆಂಗಳೂರು: ಬೆಂಗಳೂರು: ಡಿಸೆಂಬರ್ ಒಳಗೆ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೂಚನೆ ನೀಡಿದ್ದಾರೆ.

ಕಂದಾಯ ಇಲಾಖೆಯ ನಾಲ್ಕೂ ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಡಿಸೆಂಬರ್ ಒಳಗೆ ಕಂದಾಯ ಇಲಾಖೆಗ ಸಂಬಂಧಿಸಿದ ಎಲ್ಲಾ ಕಡತಗಳನ್ನು ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಬೇಕು. ಈ ಪ್ರಕ್ರಿಯೆಗೆ ಸಹಾಯ ಮಾಡಲು ಇಲಾಖೆಯು ಎಲ್ಲಾ ತಾಲೂಕುಗಳಲ್ಲಿ ಇ-ಕಚೇರಿಗಳನ್ನು ಪ್ರಾರಂಭಿಸಲಾಗಿದೆ. ಇದರ ಮೂಲಕ ಪ್ರತಿ ಹಂತದಲ್ಲೂ ಬಾಕಿ ಇರುವ ಕಡತಗಳನ್ನು ಪರಿಶೀಲಿಸಬಹುದು. ಸಮಯಕ್ಕೆ ಸರಿಯಾಗಿ ಕಡತಗಳನ್ನು ತೆರವುಗೊಳಿಸದಿದ್ದರೆ ಅಧಿಕಾರಿಗಳಿಗೆ ನೋಟಿಸ್ ನ್ನೂ ಕೂಡ ನೀಡಬಹುದು. ಪಾರದರ್ಶಕತೆ ಕಾಪಾಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಡಿಸೆಂಬರ್ ಒಳಗೆ ಇ–ಆಫೀಸ್‌ ತಂತ್ರಾಂಶ ಅಳವಡಿಸಿಕೊಳ್ಳಬೇಕೆಂದು ಸೂಚಿಸಿದರು.

ನಿಯಮದ ಪ್ರಕಾರ, ತಹಶೀಲ್ದಾರ್‌ಗಳ ಮುಂದೆ ಕಂದಾಯ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳನ್ನು 90 ದಿನಗಳಲ್ಲಿ ತೆರವುಗೊಳಿಸಬೇಕು. ಆದರೆ, ಐದು ವರ್ಷಗಳಿಂದ ಕಹಲವು ಪ್ರಕರಣಗಳು ಬಾಕಿ ಉಳಿದಿವೆ. ತಹಶೀಲ್ದಾರ್, ಎಸಿ ಸೇರಿದಂತೆ ಕಂದಾಯ ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಇವೆ. ಜನವರಿಯೊಳಗೆ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು. ಇಲ್ಲದಿದ್ದರೆ, ನಿಯಮ ಉಲ್ಲಂಘಿಸಿದವರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಹೇಳಿದರು.

“ನಮ್ಮ ಸರ್ಕಾರ ಅಧಿಕಾರಕ್ಕೇರಿದ ಸಂದರ್ಭದಲ್ಲಿ ಎಸಿ (ಉಪ ವಿಭಾಗಾಧಿಕಾರಿ) ನ್ಯಾಯಾಲಯದಲ್ಲೇ ಒಟ್ಟು 59,339 ಪ್ರಕರಣಗಳು ಬಾಕಿ ಇದ್ದವು. ಆದರೆ, ಕಳೆದ ನಾಲ್ಕು ತಿಂಗಳ ಅವಧಿಯಲ್ಲೇ ಈ ಪ್ರಕರಣಗಳ ಸಂಖ್ಯೆಯನ್ನು 30 ಸಾವಿರಕ್ಕೆ ಇಳಿಸಲಾಗಿದೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ಈ ಎಲ್ಲಾ ಪ್ರಕರಣಗಳನ್ನೂ ಇತ್ಯರ್ಥಗೊಳಿಸಿ ಶೇ.100 ರಷ್ಟು ಸಾಧನೆ ಮಾಡಬೇಕಿದೆ ಎಂದು ಕಾಲಮಿತಿ" ನೀಡಿದರು.

ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಸಾವಿರಾರು ಜನ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಮುಂದಿನ 15 ದಿನಗಳೊಳಗಾಗಿ 100 ತಾಲೂಕುಗಳಲ್ಲಿ ಬಗರ್ ಹುಕುಂ ಸಮಿತಿ ರಚನೆ ಮಾಡಲಾಗುವುದು ಎಂದೂ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಕೆಲವೆಡೆ ಒಂದ್ ಆಧಾರ್ ಸಂಖ್ಯೆಯಲ್ಲಿ 25 ಅರ್ಜಿಗಳನ್ನು ಸಲ್ಲಿಸಲಾಗಿದೆ. ಇಂತಹ ಅರ್ಜಿಗಳನ್ನು ರದ್ದುಪಡಿಸಬೇಕು. ಈ ನಿಟ್ಟಿನಲ್ಲಿನ ಎಲ್ಲಾ ಪ್ರಕರಗಳನ್ನು 6 ತಿಂಗಳಲ್ಲಿ ವಿಲೇವಾರಿ ಮಾಡಬೇಕು. ಅರ್ಹರು ಮಾತ್ರ ದಾಖಲೆಗಳನ್ನು ಪಡೆಯುವಂತೆ ಖಚಿತಪಡಿಸಿಕೊಳ್ಳಲು ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ ಎಂದರು.

ಊರಿನಿಂದ ಹೊರಗಡೆ ಇರುವಂತ ತಾಂಡಾ - ಗೊಲ್ಲರಹಟ್ಟಿ ಸೇರಿದಂತೆ ಸುಮಾರು 3292 ವಸತಿ ಪ್ರದೇಶಗಳಿವೆ. ಆದರೆ, ಈ ಯಾವ ಗ್ರಾಮಗಳೂ ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಇದೇ ಕಾರಣಕ್ಕೆ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ತಾಂಡಾ-ಗೊಲ್ಲರಹಟ್ಟಿ ಸೇರಿದಂತೆ ಹಲವು ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿಕೊಡಲಾಗಿತ್ತು,

"ಸಾರ್ವಜನಿಕರ 30 ವರ್ಷಗಳ ಬೇಡಿಕೆಗೆ ಅನುಗುಣವಾಗಿ 2013ರ ಕಾಂಗ್ರೆಸ್ ಸರ್ಕಾರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ನಿರ್ಧಾರ ತೆಗದುಕೊಂಡಿದ್ದರು. ಆದರೂ, ಕಳೆದ ಐದು ವರ್ಷಗಳ ಅವಧಿಯಲ್ಲಿ 1300 ಕಡೆಗಳಲ್ಲಿ ಮಾತ್ರ ಕಂದಾಯ ಗ್ರಾಮ ಘೋಷಿಸಲಾಗಿದೆ. ಉಳಿದ ತಾಂಡಾ - ಗೊಲ್ಲರಹಟ್ಟಿಗಳು ಹಲವು ಯೋಜನೆಗಳಿಂದ ವಂಚಿತವಾಗುತ್ತಿವೆ. ಹೀಗಾಗಿ ಜನವರಿ ಒಳಗಡೆ 1800 ಕಡೆ ಕಂದಾಯ ಗ್ರಾಮವಾಗಿ ಘೋಷಿಸಿ ಹಕ್ಕು ಪತ್ರ ನೀಡಿ" ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com