ಎಸ್ ಸಿ -ಎಸ್ ಟಿ ಸಮುದಾಯದ ಹೆಣ್ಣುಮಕ್ಕಳಿಗೆ ಗುಡ್ ನ್ಯೂಸ್: ಮದುವೆಗೆ ಬಿಬಿಎಂಪಿ 1 ಲಕ್ಷ ರು. ಸಹಾಯಧನ

ದೀಪಾವಳಿ ಹಬ್ಬದಂದು ಬಿಬಿಎಂಪಿ ಪೌರ ಕಾರ್ಮಿಕರ ಕುಟುಂಬಕ್ಕೆ ಬಂಪರ್‌ ಕೊಡುಗೆ ನೀಡಿದೆ. ಹೆಣ್ಣು ಮಕ್ಕಳ ಮದುವೆಗೆ ಪಾಲಿಕೆಯಿಂದ ಒಂದು ಲಕ್ಷ ರೂ. ಸಹಾಯ ಧನ ನೀಡಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದೀಪಾವಳಿ ಹಬ್ಬದಂದು ಬಿಬಿಎಂಪಿ ಪೌರ ಕಾರ್ಮಿಕರ ಕುಟುಂಬಕ್ಕೆ ಬಂಪರ್‌ ಕೊಡುಗೆ ನೀಡಿದೆ. ಹೆಣ್ಣು ಮಕ್ಕಳ ಮದುವೆಗೆ ಪಾಲಿಕೆಯಿಂದ ಒಂದು ಲಕ್ಷ ರೂ. ಸಹಾಯ ಧನ ನೀಡಲಿದೆ.

ಬಿಬಿಎಂಪಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯ ಹಾಗೂ ಪೌರಕಾರ್ಮಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪೌರಕಾರ್ಮಿಕರ ಹೆಣ್ಣುಮಕ್ಕಳ ಸರಳ ವಿವಾಹಕ್ಕೆ 1 ಲಕ್ಷ ರೂ. ಸಹಾಯಧನ ನೀಡುವ ಯೋಜನೆ ಆರಂಭಿಸಲು ಸಿದ್ಧತೆ ನಡೆಸಿದೆ.

ಪೌರ ಕಾರ್ಮಿಕರು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಟುಂಬದ ಓರ್ವ ಹೆಣ್ಣು ಮಗುವಿನ ಸರಳ ವಿವಾಹದ ಖರ್ಚು ವೆಚ್ಚಕ್ಕಾಗಿ ಸಹಾಯಧನ ನೀಡಲಾಗುತ್ತದೆ. ಆದರೆ ಸಹಾಯಧನ ಪಡೆಯಲು ಕೆಲವು ಷರತ್ತುಗಳು ಅನ್ವಯವಾಗಲಿದೆ.

ಅರ್ಜಿದಾರರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು ಮೂರು ವರ್ಷಕ್ಕೂ ಮೇಲ್ಪಟ್ಟು ವಾಸಿಸುತ್ತಿರಬೇಕು. ಪಾಲಿಕೆಯ ಪೌರಕಾರ್ಮಿಕರು ಆಗಿದ್ದಲ್ಲಿ ಸದರಿ ಮಾನದಂಡವು ಅನ್ವಯವಾಗುವುದಿಲ್ಲ
ಸದರಿ ಸೌಲಭ್ಯವನ್ನು ಖಾಯಂ ಹಾಗೂ ನೇರ ವೇತನ ಪೌರಕಾರ್ಮಿಕರು ಪಡೆಯಲು ಅರ್ಹರು
ಸೇವಾ ಪುಸ್ತಕದಲ್ಲಿ ವಿವಾಹ ಆಗುವ ಮಗಳು ನಾಮಿನಿ ಆಗಿರುವುದು ಕಡ್ಡಾಯವಾಗಿರುತ್ತದೆ
ನೇರ ವೇತನ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಮಗಳು ಎಂದು ಖಚಿತಪಡಿಸಲು ಆಧಾರ್ ಹಾಗೂ ಪಡಿತರ ಚೀಟಿಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ
ತಹಸೀಲ್ದಾರ್‌ರವರಿಂದ ಚಾಲ್ತಿಯಲ್ಲಿರುವ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಸಲ್ಲಿಸುವುದು
ಪೌರಕಾರ್ಮಿಕರು ಗುರುತಿನ ಚೀಟಿ ಕಡ್ಡಾಯ
ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದವರಿಗೆ ಸೌಲಭ್ಯವನ್ನು ಪಡೆಯಲು ಕುಟುಂಬದ ವಾರ್ಷಿಕ ವರಮಾನ 3 ಲಕ್ಷ ಮೀರಿರಬಾರದು.
ಆದರೆ ಪೌರಕಾರ್ಮಿಕರಿಗೆ ಆದಾಯ ಮಿತಿ ಅನ್ವಯಿಸುವುದಿಲ್ಲ
ವಿವಾಹ ನಿಶ್ಚಯವಾಗಿರುವ ಬಗ್ಗೆ, ಮದುವೆಯ ಆಮಂತ್ರಣ ಪತ್ರವನ್ನು ಸಲ್ಲಿಸುವುದು
ಸಹಾಯಧನವನ್ನು ವಧುವಿನ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು

ಒಂದು ವೇಳೆ ಸಲ್ಲಿಸಲಾಗಿರುವ ದಾಖಲೆಗಳು ನಕಲಿ ಅಥವಾ ಸುಳ್ಳು ಎಂದು ಕಂಡು ಬಂದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಜತೆಗೆ ಸಹಾಯಧನವನ್ನು ಹಿಂಪಡೆಯಲಾಗುತ್ತದೆ. ಇನ್ನು ಸ್ವೀಕರಿಸಲಾದ ಅರ್ಜಿ ಹಾಗೂ ಅದರೊಂದಿಗೆ ಲಗತ್ತಿಸಿರುವ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ವಲಯ ಮಟ್ಟದ ಸಮಿತಿಯಲ್ಲಿ ಆಯ್ಕೆ ಮಾಡಲು ವಲಯದ ಕಲ್ಯಾಣಾಧಿಕಾರಿಗಳು ಸಮಿತಿ ಮುಂದೆ ಮಂಡಿಸಲಾಗುತ್ತದೆ. ಅರ್ಹ ದಾಖಲೆಗಳನ್ನು ಸೂಕ್ತ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ತದನಂತರ ದಾಖಲೆಗಳನ್ನು ಸಲ್ಲಿಸಿರುವ ಅರ್ಜಿಗಳನ್ನು ವಲಯ ಸಮಿತಿಯಲ್ಲಿ ಮಂಡಿಸಲಾಗುತ್ತದೆ.

ಅರ್ಹ ದಾಖಲೆಗಳನ್ನು ಸಲ್ಲಿಸದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ವಲಯ ಸಮಿತಿಯು ಅನುಮೋದಿಸಿರುವ ಅರ್ಜಿಗಳನ್ನು ಪಾಲಿಕೆಯು ವಾರ್ಡ್ ಮೀಸಲಿರಿಸಿರುವ ವಲಯದ ಅನುದಾನದ ಲಭ್ಯತೆಯನ್ನು ಪರಿಶೀಲಿಸಿ ನಂತರ ಸೌಲಭ್ಯಗಳನ್ನು ವಿತರಿಸಲು ವಲಯ ಆಯುಕ್ತರು/ ವಲಯ ಜಂಟಿ ಆಯುಕ್ತರವರು ಅಗತ್ಯ ಕ್ರಮ ವಹಿಸಲಾಗುತ್ತದೆ. ಅನುದಾನದ ಲಭ್ಯತೆಗಿಂತ ಹೆಚ್ಚುವರಿ ಅರ್ಜಿಗಳು ಸ್ವೀಕೃತವಾದಲ್ಲಿ ಅರ್ಜಿಗಳನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಕಾರ್ಯಕ್ರಮವಿದ್ದರೆ ಆದ್ಯತೆಯ ಮೇಲೆ ಪರಿಗಣಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com