ಬಾಲ ಕಾರ್ಮಿಕರು, ಮಕ್ಕಳ ಹಕ್ಕು, ಮಕ್ಕಳ ಮೇಲಿನ ಅಪರಾಧಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ: ವಾಸುದೇವ್ ಶರ್ಮಾ (ಸಂದರ್ಶನ)

ಬಾಲ ಕಾರ್ಮಿಕರು, ಮಕ್ಕಳ ಹಕ್ಕು, ಮಕ್ಕಳ ಮೇಲೆ ನಡೆಯುತ್ತಿರುವ ಅಪರಾಧಗಳ ತಡೆಯುವತ್ತ ಹೆಚ್ಚಿನ ಗಮನ ಹರಿಸಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ವಾಸುದೇವ್ ಶರ್ಮಾ ಅವರು ಹೇಳಿದ್ದಾರೆ.
ವಾಸುದೇವ್ ಶರ್ಮಾ
ವಾಸುದೇವ್ ಶರ್ಮಾ

ಬಾಲ ಕಾರ್ಮಿಕರು, ಮಕ್ಕಳ ಹಕ್ಕು, ಮಕ್ಕಳ ಮೇಲೆ ನಡೆಯುತ್ತಿರುವ ಅಪರಾಧಗಳ ತಡೆಯುವತ್ತ ಹೆಚ್ಚಿನ ಗಮನ ಹರಿಸಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ವಾಸುದೇವ್ ಶರ್ಮಾ ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಕುರಿತು ಮಾತನಾಡಿದ್ದಾರೆ.

ಬರ ಪರಿಸ್ಥಿತಿ ಎದುರಾದಾಗಲೆಲ್ಲಾ ರಾಜ್ಯದಲ್ಲಿ ಬಾಲ್ಯ ವಿವಾಹ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರಸ್ತುತ ಪರಿಸ್ಥಿತಿ ಯಾವ ರೀತಿ ಇದೆ?
ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಬಾಲ್ಯ ವಿವಾಹಗಳ ಸಂಖ್ಯೆ ಮತ್ತೆ ಹೆಚ್ಚಳವಾಗಿತ್ತು. ಲಾಕ್ಡೌನ್ ಸಮಯದಲ್ಲಿ ಬಾಲ್ಯವಿವಾಹಗಳು ವರದಿಯಾಗುವುದಿಲ್ಲ ಎಂದು ಭಾವಿಸಿದ್ದರಿಂದ ಈ ಸಂಖ್ಯೆ ಹೆಚ್ಚಾಗಿತ್ತು.

ಏಕೆಂದರೆ ಮಾಧ್ಯಮಗಳು ಅವುಗಳನ್ನು ವರದಿ ಮಾಡುವುದಿಲ್ಲ ಎಂದು ಅವರು ಭಾವಿಸಿದ್ದರು. ಅಲ್ಲದೆ, ಲಾಕ್‌ಡೌನ್‌ಗಳಿಂದಾಗಿ ಜನರು ಮನೆಗೆ ತೆರಳಿದರು ಮತ್ತು ಅವರಲ್ಲಿ ಬಹಳಷ್ಟು ಮಂದಿ ಪ್ರಣಯ ಸಂಬಂಧಗಳಿಗೆ ಬಂದರು. ಅಂತೆಯೇ, ಬರಗಾಲದ ಸಮಯದಲ್ಲಿಯೂ ಜನರ ಮನಸ್ಸಿನಲ್ಲಿ ಇಂತಹ ಆಲೋಚನೆಗಳು ಬರುತ್ತಿವೆ. ಬೆಲೆ ಏರಿಕೆಯಾಗಬಹುದು ಎಂದು ಭಾವಿಸಿ ತಮ್ಮ ತಮ್ಮ ಹೆಣ್ಣ ಮಕ್ಕಳಿಗೆ ವಿವಾಹ ಮಾಡಿಸುತ್ತಿದ್ದಾರೆ. 9ನೇ ತರಗತಿ ಹಾಗೂ 10ನೇ ತರಗತಿಯಲ್ಲಿರುವ ಹೆಣ್ಣು ಮಕ್ಕಳಿಗೆ ಮದುವೆ ಮಾಡುತ್ತಿದ್ದಾರೆ. ಇಂತಹ ಬೆಳವಣಿಗೆಯನ್ನು ತಡೆಯಲು ಸರಕಾರ ಮತ್ತು ಎನ್‌ಜಿಒ ಬಳಿ ಉಪಕ್ರಮಗಳಿವೆ. ಬರ ಪರಿಸ್ಥಿತಿಯು ಎಲ್ಲಾ ಹೆಣ್ಣುಮಕ್ಕಳನ್ನು ಬಾಲ್ಯವಿವಾಹಕ್ಕೆ ತಳ್ಳುವುದಿಲ್ಲ ಎಂಬುದು ನನ್ನ ಭಾವನೆ ಎಂದು ಹೇಳಿದ್ದಾರೆ.

ಕಠಿಣ ಕಾನೂನುಗಳ ಹೊರತಾಗಿಯೂ, ರಾಜ್ಯ ಮತ್ತು ದೇಶದಲ್ಲಿ ಬಾಲಕಾರ್ಮಿಕರ ಪ್ರಕರಣಗಳು ಕಂಡು ಬರುತ್ತಲೇ ಇವೆ...?
ಬೆಂಗಳೂರಿನ ನಗರ ಪ್ರದೇಶಗಳಲ್ಲಿ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗಿಲ್ಲದೇ ಇರಬಹುದು. ಅದರೆ, ಉಪನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಾಲಕಾರ್ಮಿಕರು ಇನ್ನೂ ಇದ್ದಾರೆ. ಈ ಕುರಿತು ಕಣ್ಣುಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಉತ್ತರ ಕರ್ನಾಟಕದಲ್ಲಿ ಕೃಷಿ ಆಧಾರಿತ ಕೆಲಸಗಳಿಗೆ ಬಾಲಕಾರ್ಮಿಕ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ. ಚಿಕ್ಕ ಶೆಡ್ ಗಳಲ್ಲಿ ‘ಚಿಕ್ಕಿ’ಗಳನ್ನು ಮಕ್ಕಳೇ ಸಿದ್ಧಪಡಿಸುತ್ತಿದ್ದಾರೆ. ಇಟ್ಟಿಗೆ ತಯಾರಿಕೆಯಲ್ಲಿ ಬಾಲಕಾರ್ಮಿಕರಿದ್ದಾರೆ. ಕೂಲಿ ಕೆಲಸಕ್ಕೆ ಉತ್ತರ ಕರ್ನಾಟಕದ ಕುಟುಂಬಗಳು ವಲಸೆ ಬರುತ್ತವೆ ಎಂಬ ನಂಬಿಕೆ ಈ ಹಿಂದೆ ಇತ್ತು. ಆದರೆ, ಉತ್ತರ ಭಾರತದಿಂದ ಕೂಲಿಗೆ ಕೆಲಸಗಾರರು ಸಿಗುತ್ತಿರುವುದರಿಂದ ಈ ಸ್ಥಿತಿ ಇದೀಗ ಬದಲಾಗಿದೆ.

ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ವರದಿ ಮಾಡುವ ಕಾರ್ಯವಿಧಾನ ಯಾವುದು? ಅದರಲ್ಲಿರುವ ಸಮಸ್ಯೆಗಳೇನು?
ಈ ಕಾರ್ಯವಿಧಾನಗಳು ಪರಿಣಾಮಕಾರಿಯಾಗಿಲ್ಲ. ನಮ್ಮಲ್ಲಿ 1098 ಸಹಾಯವಾಣಿ ಇದೆ. ಇಲ್ಲಿ ಎನ್‌ಜಿಒಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು (ಡಿಸಿಪಿಗಳು) ಮತ್ತು ಪೊಲೀಸರು ಸೇವೆ ಸಲ್ಲಿಸುತ್ತಿದ್ದಾರೆ. ಭಾರತ ಸರ್ಕಾರವು ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಅಡಿಯಲ್ಲಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಸಿಬ್ಬಂದಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಧನಾತ್ಮಕ ಬೆಳವಣಿಗೆಗಳು ಕಂಡು ಬರುವ ನಿರೀಕ್ಷಿಗಳಿವೆ. ಕೆಲವು ಜಿಲ್ಲೆಗಳಲ್ಲಿ ಈ ಸೇವೆಗಳ ಲಭ್ಯವಿಲ್ಲ. ನಿಧಾನಗತಿಯಲ್ಲಿ ಆರಂಭವಾಗಬಹುದು. ಸಹಾಯವಾಣಿಗೆ ಕರೆ ಮಾಡುವವರಿಗೆ ಬಹು ಆಯ್ಕೆಗಳನ್ನು ನೀಡಲಾಗುತ್ತದೆ. ಸಂಕಷ್ಟದಲ್ಲಿರುವ ಮಕ್ಕಳಿಗೆ ಇದು ಸಾಕಷ್ಟು ಸಮಯ ತೆಗೆದುಕೊಳ್ಳುವಂತೆ ಮಾಡುತ್ತದೆ. ಈ ವೇಳೆ ಮಕ್ಕಳು ದೂರವಾಣಿ ಕರೆಯನ್ನೇ ಕಟ್ ಮಾಡುತ್ತಾರೆ. ಇದರಿಂದ ಅಪರಾಧ ಘಟನೆಗಳು ವರದಿಯಾಗುವುದಿಲ್ಲ. ಸಹಾಯವಾಣಿ ಸಂಖ್ಯೆಗಳು ಕರೆ ಮಾಡಿದ ಕೂಡಲೇ ಸ್ಪಂದಿಸುವಂತೆ ಇರಬೇಕು. ಪೊಲೀಸ್ ಠಾಣೆಗಳೂ ಕೂಡ ಹೆಚ್ಚು ಮಕ್ಕಳ ಸ್ನೇಹಿಯಾಗಿರಬೇಕು.

ಮಕ್ಕಳ ಮೇಲಿನ ಅಪರಾಧಗಳನ್ನು ತಡೆಯಲು ಏನು ಮಾಡಬೇಕು?
ಸರ್ಕಾರವು ಮಕ್ಕಳು ಮತ್ತು ಹದಿಹರೆಯದವರ ವಯಸ್ಸನ್ನು ವ್ಯಾಖ್ಯಾನಿಸಬೇಕಿದೆ, ಕೆಲವು ಕಾಯಿದೆಗಳು 12 ವರ್ಷಗಳು, ಕೆಲವು 14 ವರ್ಷಗಳು ಎಂದು ಹೇಳುತ್ತವೆ. ಕಾರ್ಮಿಕ ನಿಷೇಧ ನಿಯಂತ್ರಣ ಕಾಯಿದೆಯು 14 ವರ್ಷಗಳವರೆಗಿನ ಮಕ್ಕಳನ್ನು ಬಾಲಕಾರ್ಮಿಕರೆಂದು ಪರಿಗಣಿಸುತ್ತದೆ. ಆದರೆ ಬೀದಿ ವ್ಯಾಪಾರಿಗಳ ಕಾಯಿದೆಯು 14 ವರ್ಷ ವಯಸ್ಸಿನವರಿಗೆ ಪರವಾನಗಿಯನ್ನು ಹೊಂದಲು ಅನುಮತಿ ನೀಡುತ್ತದೆ. ಸಾಮಾನ್ಯವಾಗಿ 7 ವರ್ಷದಿಂದ 14 ವರ್ಷಗಳವರೆಗಿನ ಮಕ್ಕಳನ್ನು ನೌಕರಿ ನೀಡುವವರಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ರಾಜ್ಯದಲ್ಲಿ ಬಾಲ್ಯ ವಿವಾಹಗಳನ್ನು ಅಮಾನ್ಯಗೊಳಿಸುವ ಮತ್ತು ಬಾಲಕಾರ್ಮಿಕರಿಗೆ ದಂಡದಂತಹ ಉತ್ತಮ ಕಾಯಿದೆಗಳಿವೆ, ಆದರೆ ಅವುಗಳು ಎಷ್ಟು ಚೆನ್ನಾಗಿ ಅನುಷ್ಠಾನಗೊಂಡಿವೆ ಎಂಬುದನ್ನು ಪರಿಶೀಲಿಸಲಾಗುತ್ತಿಲ್ಲ ನಾವು ಯಾವ ರೀತಿಯಲ್ಲಿ ಜನರಿಗೆ ಶಿಕ್ಷಣ ನೀಡಿದ್ದೇವೆ? ಯಾವ ರೀತಿಯಲ್ಲಿ ಅರ್ಥಗಳನ್ನು ನೀಡಲಾಗುತತಿದೆ? ಎಂಬುದರ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿಲ್ಲ. ತಾಯಂದಿರ ಮರಣ, ಬಾಲ್ಯವಿವಾಹ, ಹೆರಿಗೆ ಮತ್ತು ಅಪೌಷ್ಟಿಕತೆಗೆ ಹೇಗೆ ಸಂಬಂಧವಿದೆ ಎಂಬುದರ ಕುರಿತು ನಾವು ಮಾತನಾಡಬೇಕಾಗಿದೆ, ಇದನ್ನು ಹೆಚ್ಚು ಪ್ರಚಾರ ಮಾಡಬೇಕಾಗಿದೆ.

ವ್ಯಾಖ್ಯಾನಿಸದ ವಯಸ್ಸಿನ ಅಂಶಗಳಿಂದಾಗಿ ಬಾಲ್ಯ ವಿವಾಹಗಳು ಪ್ರಚಲಿತವಾಗಿದೆಯೇ?
ವ್ಯಾಖ್ಯಾನಿಸದ ವಯಸ್ಸಿನ ಅಂಶಗಳೇ ದೊಡ್ಡ ಗೊಂದಲವನ್ನು ಸೃಷ್ಟಿಸುತ್ತಿದೆ. ಸಾಂಪ್ರದಾಯಿಕ ವಯಸ್ಸು ಮತ್ತು ಕಾನೂನು ವಯಸ್ಸನ್ನು ವಿಭಿನ್ನವಾಗಿ ಪರಿಗಣಿಸಲಾಗುತ್ತದೆ. ಈ ಪೈಕಿ ಧಾರ್ಮಿಕ ಅಪಾರ್ಥಗಳೂ ಇವೆ. ಇಂದಿಗೂ ಸಹ, ಬಾಲ್ಯ ವಿವಾಹ ನಿಷೇಧ ಕಾಯಿದೆ 2006 ಹಿಂದೂಗಳಿಗೆ ಮಾತ್ರ ಎಂದು ಭಾವಿಸುವ ಜನರಿದ್ದಾರೆ. ನಾವು 2023ರ ವರ್ಷದಲ್ಲಿದ್ದರೂ, ಮನಸ್ಥಿತಿ ಇನ್ನೂ 1850 ರ ದಶಕದಲ್ಲಿಯೇ ಇದೆ. ಗ್ರಾಮೀಣ ಪ್ರದೇಶದಲ್ಲಿ ಹುಡುಗಿ ಪ್ರೌಢಾವಸ್ಥೆಗೆ ಬಂದ ಕೂಡಲೇ ಆಕೆಗೆ ಮದುವೆಯಾಗುವ ವಯಸ್ಸು ಬಂದಿದೆ ಎಂದು ಹೇಳುತ್ತಾರೆ. ನಾವು ನಮ್ಮ ಹೆಣ್ಣು ಮಕ್ಕಳಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಕುರಿತು ಸಾಕಷ್ಟು ಶಿಕ್ಷಣ ನೀಡುತ್ತಿಲ್ಲ. ಶಾಲೆಗಳಲ್ಲಿಯೂ ಮುಟ್ಟಿನ ಬಗ್ಗೆ ಹೇಳಿಕೊಡುವಾಗ ಹುಡುಗರನ್ನು ಹೊರಗೆ ಕಳುಹಿಸಲಾಗುತ್ತಿದೆ. ಅವರಿಗೆ ಯಾವುದರ ಬಗ್ಗೆಯೂ ಅರಿವು ಮೂಡಿಸುತ್ತಿಲ್ಲ. ಕನ್ಯತ್ವದ ಬಗ್ಗೆ ದೊಡ್ಡ ತಪ್ಪು ಕಲ್ಪನೆ ಇದೆ. ಹುಡುಗರಿಗೆ ಈ ಬಗ್ಗೆ ಹೆಚ್ಚಾಗಿಯೇ ಅರಿವಿರುತ್ತದೆ.

ಬಾಲ್ಯ ವಿವಾಹ ಕುರಿತು ಪ್ರಕರಣ ದಾಖಲಿಸಿಕೊಳ್ಳುವಾಗ ಅನುಸರಿಸಬೇಕಾದ ವಯಸ್ಸು ಎಷ್ಟು?
ಹುಡುಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ಮತ್ತು ಹುಡುಗ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ಪ್ರಕರಣ ದಾಖಲಿಸಬಹುದು.

ಮಕ್ಕಳಿಗಾಗಿ ಕಾನೂನು ಮತ್ತು ಕಾಯಿದೆಗಳನ್ನು ರಚಿಸುವಾಗ ತಜ್ಞರ ಪಾತ್ರ ಎಷ್ಟರ ಮಟ್ಟಿಗೆ ಇರುತ್ತದೆ.?
ದೇಶದಲ್ಲಿ ಕಾನೂನುಗಳ ರಚನೆ ಮಾಡುವಾಗ ತಜ್ಞರನ್ನು ತೊಡಗಿಸಿಕೊಂಡ ಇತಿಹಾಸವೇ ಇಲ್ಲ. ಆದರೆ, ಜುವೆನೈಲ್ ಜಸ್ಟಿಸ್ ಕೇರ್ ಮತ್ತು ಪ್ರೊಟೆಕ್ಷನ್ ಆಕ್ಟ್ ನ್ನು ಉತ್ತಮ ರೀತಿಯಲ್ಲಿ ಜಾರಿಗೆ ತರಲಾಗಿದೆ. ಈ ಕಾಯ್ದೆ ತರುವಾಗ ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ವೇಳೆ ಮಕ್ಕಳೊಂದಿಗೂ ಮಾತುಕತೆ ನಡೆಸಲಾಯಿತು.

ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳನ್ನು ರಚಿಸುವಾಗ ತಜ್ಞರು ಸಕ್ರಿಯವಾಗಿ ಭಾಗಿಯಾಗುತ್ತಾರೆಯೇ?
ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳನ್ನು ರಚಿಸುವಾಗ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಂದ (ಎನ್‌ಜಿಒ) ಪ್ರತಿಕ್ರಿಯೆಗಳನ್ನು ಪಡೆಯಲಾಗುತ್ತದೆ. ಕಾನೂನು ಅಥವಾ ಕಾಯಿದೆಯನ್ನು ರಚಿಸುವ ಹಂತವ ತಲುಪಲು ವಿವಿಧ ಹಂತಗಳಿರುತ್ತವೆ. ಮಕ್ಕಳ-ಸಂಬಂಧಿತ ಕಾನೂನುಗಳಲ್ಲಿ ತಜ್ಞರು, ಕುಟುಂಬಗಳು ಮತ್ತು ಸ್ಥಳೀಯ ಆಡಳಿತ ಮಂಡಳಿಗಳು ಭಾಗಿಯಾಗುವಂತೆ ಮಾಡಲಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ (NEP) ರಾಜ್ಯ ಶಿಕ್ಷಣ ನೀತಿ (SEP) ಗೆ ಬದಲಾವಣೆಗೊಳ್ಳುವಾಗ ಮಕ್ಕಳ ಹಿತಾಸಕ್ತಿಗಳಿಗೆ ಆದ್ಯತೆ ನೀಡಲಾಗಿದೆ. ಆದರೆ ಈ ನಿರ್ಧಾರವು ಅವರ ಆಯ್ಕೆಯನ್ನು ಉಲ್ಲಂಘಿಸುತ್ತದೆಯೇ ಎಂಬ ಬಗ್ಗೆಯೂ ಕಳವಳವನ್ನುಂಟುಮಾಡಿದೆ, ಏಕೆಂದರೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮಕ್ಕಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿಲ್ಲ. ಹೀಗಾಗಿ ಪ್ರಸ್ತುತ ಈ ವಿಚಾರ ವಿವಾದಾತ್ಮಕ ವಿಷಯವಾಗಿದೆ.

ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಬೆಂಬಲಿಸುತ್ತದೆ, ಆದರೆ ರಾಜ್ಯ ಸರ್ಕಾರಗಳು ರಾಜ್ಯ ಶಿಕ್ಷಣ ನೀತಿಗಳನ್ನು (ಎಸ್‌ಇಪಿ) ಪ್ರತಿಪಾದಿಸುತ್ತಿವೆ. ಹೀಗಾಗಿಯೇ ಈ ವಿಚಾರ ವಿವಾದ ಸೃಷ್ಟಿಸಿದೆ. ಕೆಲವು ಮಕ್ಕಳು ಕೇಂದ್ರೀಯ ಪಠ್ಯಕ್ರಮವನ್ನು ಅನುಸರಿಸುತ್ತಾರೆ ಮತ್ತು ಇತರರು ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಾರೆ. ವಿಶಾಲವಾದ ಸಮಾಲೋಚನೆಗಳೊಂದಿಗೆ ಹೆಚ್ಚು ಅಂತರ್ಗತ ಪ್ರಕ್ರಿಯೆಯು ಜಾರಿಯಲ್ಲಿರಬೇಕು ಎಂಬುದು ಇಲ್ಲಿ ಸ್ಪಷ್ಟವಾಗಿದೆ.

ಶಿಕ್ಷಣ ನೀತಿಗಳ ಮೇಲಿನ ನಿರ್ಧಾರಗಳು ವೈಜ್ಞಾನಿಕ ದತ್ತಾಂಶ ಮತ್ತು ತಿಳುವಳಿಕೆಯುಳ್ಳ ಚರ್ಚೆಗಳನ್ನು ಆಧರಿಸಿರಬೇಕು, ಇತರ ಪ್ರಮುಖ ಅಂಶಗಳ ಜೊತೆಗೆ ಮಕ್ಕಳ ನಿರೀಕ್ಷೆಗಳನ್ನು ಪರಿಗಣಿಸಬೇಕು. ಬೆಳೆಯುತ್ತಿರುವ ಮಗುವನ್ನು ಸಾಮಾನ್ಯವಾಗಿ ಪೋಷಕರ ಜವಾಬ್ದಾರಿಯಾಗಿ ನೋಡಲಾಗುತ್ತದೆ. ಆದಾಗ್ಯೂ, NEP ಮತ್ತು SEP ಯಂತಹ ಶಿಕ್ಷಣ ನೀತಿಗಳ ಸಂದರ್ಭದಲ್ಲಿ, ಇದು ಸಮಾಜ ಮತ್ತು ಸರ್ಕಾರದ ಹಂಚಿಕೆಯ ಜವಾಬ್ದಾರಿಯಾಗುತ್ತದೆ.

ವಿಶೇಷವಾಗಿ ದೇವದಾಸಿ ಪದ್ಧತಿಯಂತಹ ಆಚರಣೆಗಳನ್ನು ನಾವು ನೋಡಿದಾಗ ಕಾನೂನುಗಳ ಪ್ರತಿಬಂಧಕ ಅಂಶವು ಪರಿಣಾಮಕಾರಿಯಾಗಿದೆಯೇ?
ಈ ಕುರಿತ ಸಮಾಜದ ದೃಷ್ಟಿಕೋನಗಳನ್ನು ಪರಿವರ್ತಿಸಲು ಪ್ರಯತ್ನಿಸಲಾಗುತ್ತಿದೆ, ಶಾಸನಬದ್ಧ ಕಾನೂನುಗಳನ್ನು ಮಾತ್ರವಲ್ಲದೆ ದೇವದಾಸಿ ಪದ್ಧತಿಯಂತಹ ಆಚರಣೆಗಳನ್ನು ಕೂಡ ಬದಲಾಯಿಸಲು ಪ್ರಯತ್ನಿಸಲಾಗುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳ ಕೈಯಲ್ಲಿರುವ ತಂತ್ರಜ್ಞಾನ ಅವರಿಗೆ ಪ್ರಯೋಜನಕಾರಿಯಾಗಿದೆ ಎಂದು ನೀವು ಭಾವಿಸುತ್ತೀರಾ? ಸ್ಮಾರ್ಟ್ಫೋನ್ಗಳೊಂದಿಗೆ ಸಾಕಷ್ಟು ಮಕ್ಕಳು ಬೆಳೆಯುತ್ತಿದ್ದಾರೆ... ಈ ಬಗ್ಗೆ ನಿಮ್ಮ ಅಭಿಪ್ರಾಯ..?
ಈ ಬೆಳವಣಿಗೆ ಆತಂಕವನ್ನು ಸೃಷ್ಟಿಸುತ್ತಿದೆ. ಏಕೆಂದರೆ, ತಂತ್ರಜ್ಞಾನದಿಂದ ಮಕ್ಕಳು ಎಲ್ಲಿ ತಮಗೆ ತಾವು ಹಾನಿ ಮಾಡಿಕೊಳ್ಳುತ್ತಾರೆ ಎಂಬ ಭಯವಿದೆ. ಒಂದಾನೊಂದು ಕಾಲದಲ್ಲಿ ಮಕ್ಕಳಿಗೆ ಬರೀ ಪುಸ್ತಕಗಳು, ದಿನಪತ್ರಿಕೆಗಳಿದ್ದವು. ನಂತರ, ನಮಗೆ ರೇಡಿಯೋ ಮತ್ತು ದೂರದರ್ಶನ ಸಿಕ್ಕವು. ನಂತರ ಮೊಬೈಲ್ ಮತ್ತು ಇಂಟರ್ನೆಟ್ ಸಿಕ್ಕಿತು. ಅದನ್ನು ಹೇಗೆ ಬಳಸಬೇಕು ಎಂಬ ಮಾಹಿತಿಯೊಂದಿಗೆ ಮಕ್ಕಳಿಗೆ ಸಹಾಯ ಮಾಡಬೇಕಿದೆ. ಇಲ್ಲದಿದ್ದರೆ, ಮಕ್ಕಳಿಗೆ ನಮ್ಮಿಂದಲೇ ಹೆಚ್ಚು ಹಾನಿಯಾದಂತಾಗುತ್ತದೆ. ಅರಿವಿಲ್ಲದೆ ಮಕ್ಕಳು 'ಅಶ್ಲೀಲ' ವಿಡಿಯೋಗಳ್ನು ನೋಡುತ್ತಾರೆ. ಸಾಕಷ್ಟು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುವುದುಂಟು. ಮೊಬೈಲ್ ಬಳಕೆ ವೇಳೆ ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬುದನ್ನು ತಿಳಿಸಿಕೊಡಬೇಕಿದೆ. ಅವರನ್ನು ಹೆದರಿಸಬಾರದು.

ಮಕ್ಕಳ ಅಪರಾಧಗಳು ಹೇಗೆ ವಿಕಸನಗೊಂಡಿವೆ? ಅವುಗಳನ್ನು ತಡೆಯಲು ಏನು ಮಾಡಬಹುದು?
ಮಕ್ಕಳು ಕಾನೂನು ಉಲ್ಲಂಘನೆ ಮಾಡುವಂತೆ ಮಾಡುವುದು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುವ ಬೆಳೆವಣಿಗೆಗಳು ಕಂಡು ಬರುತ್ತಿವೆ. ಮಕ್ಕಳಿಗೆ ಅನುಕಂಪದ ಬೆಂಬಲವಿದೆ. ಮಕ್ಕಳನ್ನು ಮಾನವ ಸಂಪನ್ಮೂಲವಾಗಿ ಕಾಣುತ್ತೇವೆ. ಮಕ್ಕಳು ಮತ್ತೆ ಮುಖ್ಯವಾಹಿನಿಗೆ ಬರಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಮಕ್ಕಳು ತಮ್ಮ ಶಕ್ತಿಯನ್ನು ಬಳಸಿಕೊಳ್ಳಲು ಅವಕಾಶಗಳನ್ನು ಒದಗಿಸಬೇಕಾಗಿದೆ. ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು. ಇಲ್ಲಿ ಮಕ್ಕಳ ಶಕ್ತಿಯನ್ನು ಬಳಸಿಕೊಳ್ಳಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com