ಮಹಿಳಾ ಲ್ಯಾಬ್ ಟೆಕ್ನಿಷಿಯನ್ ಹತ್ಯೆ ಪ್ರಕರಣ ಭೇದಿಸಿದ ರಾಯಚೂರು ಪೊಲೀಸರು, ಇಬ್ಬರ ಬಂಧನ

ರಾಯಚೂರು ಜಿಲ್ಲೆಯ ಹಟ್ಟಿ ಪಟ್ಟಣದಲ್ಲಿ ಮಹಿಳಾ ಲ್ಯಾಬ್ ಟೆಕ್ನಿಷಿಯನ್ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮಂಗಳವಾರ ಇಬ್ಬರು ಯುವಕರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯಚೂರು: ಜಿಲ್ಲೆಯ ಹಟ್ಟಿ ಪಟ್ಟಣದಲ್ಲಿ ಮಹಿಳಾ ಲ್ಯಾಬ್ ಟೆಕ್ನಿಷಿಯನ್ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮಂಗಳವಾರ ಇಬ್ಬರು ಯುವಕರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಮೊದಲು ಇದು ನರಬಲಿ ಪ್ರಕರಣ ಎಂದು ಶಂಕಿಸಲಾಗಿತ್ತು. ಆದರೆ, ಮಧ್ಯವಯಸ್ಕ ಸಂತ್ರಸ್ತ ಮಹಿಳೆಯು ಇಬ್ಬರು ಕೊಲೆಗಾರರ ಪೈಕಿ ಒಬ್ಬಾತನ ಜೊತೆ ಸಂಬಂಧ ಹೊಂದಿದ್ದರು ಎಂದು ತನಿಖೆಗಳು ಬಹಿರಂಗಪಡಿಸಿವೆ.

ಬಂಧಿತರನ್ನು 23 ವರ್ಷದ ಸಮೀರ್ ಸೊಹೈಲ್ ಮತ್ತು ಮೊಹಮ್ಮದ್ ಕೈಫ್ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಮಂಜುಳಾ ಅವರನ್ನು ಅಕ್ಟೋಬರ್ 26 ರಂದು ಕೊಲೆ ಮಾಡಲಾಗಿದ್ದು, ಆಕೆಯ ಮನೆಯ ಬಳಿಯೇ ಸುಟ್ಟ ಶವ ಪತ್ತೆಯಾಗಿತ್ತು.

ಕೃತ್ಯ ಎಸಗಿದ ನಂತರ ಆರೋಪಿಗಳು ಸಂತ್ರಸ್ತೆ ಮನೆಯಿಂದ 10 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಮೊಹಮ್ಮದ್ ಕೈಫ್ ಕಾರಿನಲ್ಲಿ ಪರಾರಿಯಾಗಿದ್ದರು.

ಮಂಜುಳಾ ಕೆಲವು ಕಾಯಿಲೆಗಳಿಂದ ಬಳಲುತ್ತಿದ್ದು, ಸೊಹೈಲ್‌ನ ಸಹಾಯ ಕೇಳಿದ್ದರು. ಇದರ ಲಾಭ ಪಡೆದ ಆರೋಪಿಗಳು, ಪೂಜೆಯ ನೆಪದಲ್ಲಿ ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆಸಿಕೊಂಡಿದ್ದರು.

ಅವರ ನಿರ್ದೇಶನದಂತೆ ಆಕೆ ತನ್ನ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದರು. ನಂತರ ಅವರು ನಗದು ಮತ್ತು ಆಭರಣಗಳ ಮೇಲೆ ಸಿಂಧೂರ ಮತ್ತು ಅರಿಶಿನವನ್ನು ಹಚ್ಚಿದರು ಮತ್ತು  ಆಕೆಯನ್ನು ಪ್ರಾರ್ಥಿಸುವಂತೆ ಹೇಳಿದ್ದಾರೆ.

ಆಕೆ ಪ್ರಾರ್ಥನೆಯಲ್ಲಿ ಮುಳುಗಿದ್ದಾಗ, ಇಬ್ಬರೂ ಸೇರಿ ಆಕೆಯನ್ನು ಕೊಂದು ನಂತರ ಸಮೀರ್ ಆಕೆಯ ಶವವನ್ನು ಆಕೆಯ ಮನೆಯ ಬಳಿಯೇ ಸುಟ್ಟು ಹಾಕಿದ್ದ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಬೈಕ್ ಜೊತೆಗೆ 7.49 ಲಕ್ಷ ನಗದು, 163 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಆರಂಭದಲ್ಲಿ ಇದು ಮಾಟಮಂತ್ರಕ್ಕಾಗಿ ನಡೆದ ಕೊಲೆ ಎಂದು ಶಂಕಿಸಲಾಗಿತ್ತು. ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿತ್ತು.

ಆದರೆ, ಆಕೆ ಬ್ಯಾಂಕ್‌ನಲ್ಲಿ ಸಾಲವಾಗಿ ಪಡೆದಿದ್ದ 10 ಲಕ್ಷ ರೂಪಾಯಿ ಮತ್ತು ಬ್ಯಾಂಕ್‌ನಿಂದ ಹಿಂಪಡೆದಿದ್ದ ಎಲ್ಲಾ ಚಿನ್ನಾಭರಣಗಳು ನಾಪತ್ತೆಯಾಗಿದ್ದರಿಂದ ಅವರ ಮಗ ಅನುಮಾನ ವ್ಯಕ್ತಪಡಿಸಿದ್ದರು.

ಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com