ಕಲ್ಯಾಣ ಕರ್ನಾಟಕದ 7 ಸ್ಮಾರಕ ಖಾಸಗಿ ವ್ಯಕ್ತಿಗಳಿಗೆ ದತ್ತು: ಎಚ್‌.ಕೆ. ಪಾಟೀಲ್

ಕಲ್ಯಾಣ ಕರ್ನಾಟಕದ ಹಲವು ಸ್ಮಾರಕಗಳನ್ನು ಪರಿಶೀಲನೆ ನಡೆಸಲಾಗಿದ್ದು, 7 ಸ್ಮಾರಕಗಳ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಖಾಸಗಿ ವ್ಯಕ್ತಿಗಳಿಗೆ ದತ್ತು ನೀಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು ಬುಧವಾರ ಹೇಳಿದರು.
ಎಚ್‌.ಕೆ. ಪಾಟೀಲ್
ಎಚ್‌.ಕೆ. ಪಾಟೀಲ್

ಬೆಂಗಳೂರು: ಕಲ್ಯಾಣ ಕರ್ನಾಟಕದ ಹಲವು ಸ್ಮಾರಕಗಳನ್ನು ಪರಿಶೀಲನೆ ನಡೆಸಲಾಗಿದ್ದು, 7 ಸ್ಮಾರಕಗಳ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಖಾಸಗಿ ವ್ಯಕ್ತಿಗಳಿಗೆ ದತ್ತು ನೀಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು ಬುಧವಾರ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರವಾಸದ ಸಂದರ್ಭದಲ್ಲಿ ಭೇಟಿ ನೀಡಿದ ಬಹುತೇಕ ಸ್ಮಾರಕಗಳ ರಕ್ಷಣೆ ಹಾಗೂ ನಿರ್ವಹಣೆಗೆ ಹಲವಾರು ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಸರ್ಕಾರದ ದತ್ತು ಯೋಜನೆಗೆ ಸ್ಪಂದಿಸಿವೆ ಎಂದು ಹೇಳಿದರು

ಐತಿಹಾಸಿಕ ಬೀದರ್ ಜಿಲ್ಲೆಯ ನರಸಿಂಹ ಝರಣಾ ದೇಗುಲ ದರ್ಶನದೊಂದಿಗೆ ಆರಂಭವಾದ ಸಚಿವರ ತಂಡದ ಪ್ರವಾಸ ಕಾರ್ಯಕ್ರಮ, ಬೀದರ್‌ನ ಅಷ್ಟಕೋನಾಕಾರದ ಬಾವಿಯ ವೀಕ್ಷಣೆ ಮಾಡಲಾಯಿತು. ಇದಾದ ನಂತರ ಇರಾನ್ ದೇಶದ ಸುರಂಗ ಕಾಲುವೆಗಳನ್ನು ಹೋಲುವ ನೀರಿನ ಕರೇಜ್ ನ್ನು ತಂಡ ವೀಕ್ಷಿಸಿತು. ಈ ರೀತಿಯ ನೀರಿನ ಕಾಲುವೆಗಳು ಬೀದರಿನಲ್ಲಿ ವಿಶೇಷ ಎನಿಸಿಕೊಂಡಿವೆ. ನೂರಾರು ವರ್ಷಗಳ ಹಿಂದೆ ನಿರ್ಮಿಸಿರುವ ಈ ಸುರಂಗ ಕಾಲುವೆಗಳನ್ನು ಅಭಿವೃದ್ಧಿ ಪಡಿಸಿ ಸಂರಕ್ಷಿಸುವ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಬಸವ ಕಲ್ಯಾಣದಲ್ಲಿ ನಿರ್ಮಾಣ ಹಂತದಲ್ಲಿರುವ ಅನುಭವ ಮಂಟಪಕ್ಕೆ, ಬಸವ ಕಲ್ಯಾಣ ಕೋಟೆಯಲ್ಲಿ ಅಳವಡಿಸಿರುವ ‘ಲೇಸರ್ ಶೋ’ ವೀಕ್ಷಿಸಿ, ಕೋಟೆಯ ದತ್ತು ಪತ್ರವನ್ನು ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ವಿತರಿಸಿದ್ದಾರೆ ಎಂದರು.

ಕಲಬುರ್ಗಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಶ್ರದ್ಧಾ ಕೇಂದ್ರ ನಾಗಾವಿ ಯಲ್ಲಮ್ಮ ದೇವಿ ದೇವಸ್ಥಾನ, ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಮಾನ್ಯಖೇಟಕ್ಕೆ ಭೇಟಿ ಕೊಟ್ಟು ಕೋಟೆಯನ್ನು ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಕಲ್ಬುರ್ಗಿ ಮೂಲದ ವ್ಯಕ್ತಿಯ ಮಾಲೀಕತ್ವದ ಖಾಸಗಿ ಕಂಪನಿ ಕೃಷ್ಣಕೃಪಾ ಫೌಂಡೇಶನ್‌ಗೆ ವಹಿಸಲಾಗಿದೆ.

ಯಾದಗಿರಿ ಜಿಲ್ಲೆಯ ಶಿರವಾಳ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿಯ ಶಿಲ್ಪಕಲಾ ವೈಭವವನ್ನು ವೀಕ್ಷಿಸಲಾಯಿತು. ಸ್ಥಳೀಯರ ಮಾಹಿತಿಯಂತೆ ಶಿರವಾಳದಲ್ಲಿ 360 ದೇಗುಲಗಳು, 360 ಬಾವಿಗಳು, ಸಾವಿರಾರು ಲಿಂಗಗಳು ಇರುವ ಪ್ರತೀತಿ ಇದೆ. ‘ನನ್ನಯ್ಯ ನಾದಯ್ಯ’ ಎಂಬ ದೇವಸ್ಥಾನ ಶಿಲ್ಪಕಲೆಯ ವೈವಿಧ್ಯಮಯ ಸಂಸ್ಕೃತಿಯನ್ನು ಹೊರಹೊಮ್ಮಿಸುತ್ತದೆ. ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕಗಳಾದ ಸ್ಮಾರಕಗಳನ್ನು ರಕ್ಷಿಸಲು ಸರ್ಕಾರದೊಂದಿಗೆ ಸಾರ್ವಜನಿಕ ಸಹಭಾಗಿತ್ವ ಅಪೇಕ್ಷಿಸಲಾಗಿದೆ. ಶಹಪುರದ ದಿಡ್ಡಿ ಬಾಗಿಲು ವೀಕ್ಷಿಸಿದ್ದು, ಅದರ ದುರಸ್ತಿಗಾಗಿ ಸೂಕ್ತ ನೆರವು ನೀಡುವ ಭರವಸೆಯನ್ನು ನೀಡಲಾಗಿದೆ.

ಸಚಿವರ ತಂಡದಲ್ಲಿದ್ದ ತಜ್ಞರು, ಇತಿಹಾಸಕಾರರು ಮತ್ತು ಆಸಕ್ತರ ತಂಡ ಬೇರೆ ಬೇರೆ ಸ್ಥಳಗಳಿಗೆ ಭೇಟಿ ಕೊಟ್ಟು ರಕ್ಷಣೆ ಇಲ್ಲದ ಕಾರಣದಿಂದ ಅನೇಕ ಶಾಸನಗಳು ನೆಲಕಚ್ಚಿರುವುದು ಕಂಡು ಬಂದಿದೆ. ಯಾದಗಿರಿಯ ಕೋಟೆಗೂ ಭೇಟಿ ನೀಡಿ, ಪರಿಶೀಲಿಸಲಾಗಿದೆ. 3 ದಿನಗಳ ಮೊದಲನೇ ಹಂತದಲ್ಲಿ ಬೀದರ್, ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲೆಯ ದರ್ಶನ ಪಡೆಯಲಾಯಿತು. 7 ಸ್ಮಾರಕಗಳನ್ನು ಆಸಕ್ತ ಖಾಸಗಿಯವರಿಗೆ ದತ್ತು ಒಪ್ಪಿ, ಪತ್ರ ವಿತರಿಸಲಾಯಿತು. ಈ ಸ್ಮಾರಕಗಳಲ್ಲಿ ಸ್ವಚ್ಛತೆ, ಮೂಲಭೂತ ಸೌಲಭ್ಯ ಹಾಗೂ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಮತ್ತು ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com