ರಾಮನಗರ: ಭೂ ಸರ್ವೆ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇದರಿಂದಾಗಿ, ರೈತರು ತಮ್ಮದಲ್ಲದ ತಪ್ಪಿಗೆ ಸಾಕಷ್ಟು ನೋವನ್ನು ಅನುಭವಿಸಿದ್ದಾರೆ. ಹೀಗಾಗಿ ರೈತರ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಸಲುವಾಗಿ ಶತಮಾನಗಳ ನಂತರ ಭೂ ಮರು ಸರ್ವೆ ಪ್ರಾಯೋಗಿಕ ಪರೀಕ್ಷೆಗೆ ಇಂದು ಚಾಲನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಬುಧವಾರ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯಲ್ಲಿ ಭೂ ಮರು ಮಾಪನ (ರೀ ಸರ್ವೆ) ಪ್ರಾಯೋಗಿಕ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ 1920ರ ನಂತರ ಸರ್ವೇ ನಡೆದಿಲ್ಲ. ಪ್ರತಿ ಹಳ್ಳಿಯ ಹಿಡುವಳಿ ಭೂಮಿ, ಗೋಮಾಳ, ಹುಲ್ ಬನ್ನಿ, ಸರ್ಕಾರಿ ಖರಾಬು, ಇನಾಮು ಮತ್ತು ಕೆರೆ ಭೂಮಿಗಳಿಗೆ ಸಂಬಂಧಿಸಿದಂತೆ ಈಗ ಸರ್ಕಾರದ ಬಳಿ ಇರುವುದು ನೂರು ವರ್ಷಗಳ ಹಳೆಯ ಬ್ರಿಟೀಷರ ಕಾಲದಲ್ಲಿ ನಡೆದ ಸರ್ವೇ ದಾಖಲೆಯೇ ಆಗಿದೆ. ಆದರೆ, ಈ ನೂರು ವರ್ಷದಲ್ಲಿ ಕೃಷಿ ಮತ್ತು ಜನವಸತಿ ಪ್ರದೇಶಗಳಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಪ್ರತಿಯೊಂದು ಗ್ರಾಮಠಾಣಾ ಗಡಿ ಹಾಗೂ ಸರ್ವೇ ನಂಬರ್ ಗಡಿಯಲ್ಲೂ ವ್ಯತ್ಯಾಸಗಳಾಗಿವೆ. ಆದರೆ, ಈ ಬಗ್ಗೆ ಸರ್ಕಾರಿ ದಾಖಲೆಗಳಲ್ಲಿ ನಿಖರ ವಿವರಣೆ ಇಲ್ಲ.
ಪರಿಣಾಮ ರೈತರು ತಮ್ಮದಲ್ಲದ ತಪ್ಪಿಗೆ ಸಾಕಷ್ಟು ಸಮಸ್ಯೆಗೆ ಒಳಗಾಗುತ್ತಿದ್ದಾರೆ. "ಸರ್ವೇ ನಂಬರ್ ಡಿಸ್ಪ್ಯೂಟ್" ಎಂಬುದು ರೈತರ ಪಾಲಿಗೆ ಸಾಮಾನ್ಯ ಸಮಸ್ಯೆ ಎಂಬಂತಾಗಿದೆ. ಸರ್ಕಾರಿ ಜಮೀನನ್ನು ಗುರುತಿಸಿ ರಕ್ಷಿಸುವುದೂ ದೊಡ್ಡ ಸವಾಲಾಗಿದೆ. ಹೀಗಾಗಿ ಈ ಎಲ್ಲಾ ಸಮಸ್ಯೆಗೆ ಇತಿಶ್ರೀ ಹಾಡುವ ಸಲುವಾಗಿ ಇಂದು ಕನಕಪುರ ತಾಲೂಕು ಉಯ್ಯಂಬಳ್ಳಿ ಹೋಬಳಿಯಲ್ಲಿ ಡ್ರೋನ್ ಚಾಲಿತ ಭೂ ಮರು ಮಾಪನಕ್ಕೆ (ರೀ ಸರ್ವೇ) ಚಾಲನೆ ನೀಡಲಾಯಿತು ಎಂದು ಹೇಳಿದರು.
ಹೊಸ ತಂತ್ರಜ್ಞಾನದಲ್ಲಿ ಡ್ರೋಣ್ ಪ್ರತಿ ಚ.ಕಿಲೊಮೀಟರ್ ಗೆ 4000 ಕ್ಕೂ ಅಧಿಕ ಫೋಟೊ ತೆಗೆಯುತ್ತದೆ. ಈ ಫೋಟೊಗಳ ಆಧಾರದಲ್ಲಿ ವೈಜ್ಞಾನಿಕವಾಗಿ ಹಿಡುವಳಿ ಭೂಮಿ, ಗೋಮಾಳ, ಹುಲ್ ಬನ್ನಿ, ಸರ್ಕಾರಿ ಖರಾಬು, ಇನಾಮು ಮತ್ತು ಕೆರೆ ಭೂಮಿಗಳನ್ನು ಗುರುತಿಸಲಾಗುವುದು. ಈ ಮೂಲಕ ರೈತರ ಸರ್ವೇ ಡಿಸ್ಪ್ಯೂಟ್ ಗಳಿಗೆ ಶಾಶ್ವತ ಪರಿಹಾರ ಹಾಗೂ ಸರ್ಕಾರಿ ಭೂಮಿ ಗುರುತಿಸಿ ಒತ್ತುವರಿ ತೆರವು ಮಾಡಲು ಸಹಕಾರಿಯಾಗುವುದು. ಈ ಪ್ರಾಯೋಗಿಕ ರೀ ಸರ್ವೇ ಯಶಸ್ವಿಯಾದರೆ ರಾಜ್ಯಾದ್ಯಂತ ಎಲ್ಲಾ ಕೃಷಿ ಜಮೀನುಗಳನ್ನೂ ಡ್ರೋಣ್ ಮೂಲಕ ರೀ ಸರ್ವೇ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು.
Advertisement