ಬೆಂಗಳೂರು: ತುಮಕೂರು ಜಿಲ್ಲೆಯ ದುಂಡ ಗ್ರಾಮದಲ್ಲಿ ದಶಕದ ಹಿಂದೆ ನಡೆದಿದ್ದ ದಲಿತ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿದ್ದ ಹೈಕೋರ್ಟ್, ಶುಕ್ರವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ಎಲ್ಲಾ 10 ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 3 ಸಾವಿರ ರೂ.ಗಳ ದಂಡ ವಿಧಿಸಿದೆ. ಜತೆಗೆ, ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಾಡಲಾದ ಆರೋಪಗಳಿಗೆ ವಿವಿಧ ಹಂತದ (ತಿಂಗಳುಗಳಲ್ಲಿ) ಶಿಕ್ಷೆ ವಿಧಿಸಿ ಒಟ್ಟು 85 ಸಾವಿರ ರೂ.ಗಳ ದಂಡ ವಿಧಿಸಿ ಆದೇಶಿಸಿದೆ.
ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಕರಣದ ಸಂತ್ರಸ್ತೆಯಾಗಿರುವ ಲಕ್ಷ್ಮಮ್ಮ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಕೆ.ಎಂ. ಖಾಜೀ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚಾರಣಾ ನ್ಯಾಯಾಲಯ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸಾಕ್ಷ್ಯಾಧಾರಗಳು ಅನುಮಾನಾಸ್ಪಾದ ಆಗಿವೆ ಎಂದು ಹೇಳಿ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಆದರೆ, ಪ್ರತ್ಯಕ್ಷ್ಯದರ್ಶಿಗಳ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸಿಲ್ಲ. ಆ ಮೂಲಕ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದೆ ಎಂದು ಪೀಠ ಅಭಿಪ್ರಾಯ ಪಟ್ಟಿದೆ. ಆದರೆ, ಪ್ರಕರಣದ 8ನೇ ಆರೋಪಿ ಶಿವಲಿಂಗಯ್ಯ ಎಂಬುವರು ಅರ್ಜಿ ವಿಚಾರಣೆ ನಡುವೆ ಮೃತಪಟ್ಟಿರುವುದರಿಂದ ಅವರ ವಿರುದ್ಧದ ಪ್ರಕರಣ ಹಿಂಪಡೆಯಲಾಗಿದೆ.
ಸಿವಿಲ್ ಪ್ರಕರಣವೊಂದಕ್ಕೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಸುದೀಪ್ ಎಂಬುವರ ವಿರುದ್ಧ ಮೇಲ್ಮನವಿ ದಾರೆ ಲಕ್ಷಮ್ಮ ದೂರು ನೀಡುವುದಕ್ಕೆ ಪೊಲೀಸ್ ಠಾಣೆಗೆ ಹೋಗಿದ್ದರು. ಇದರಿಂದ ಸಿಟ್ಟಾಗಿದ್ದ ಗ್ರಾಮದ ಸವರ್ಣಿಯರು 2008ರ ಆಗಸ್ಟ್ 14ರಂದು ದುಂದ ಗ್ರಾಮ ಹರಿಜನ ಕಾಲೋನಿಗೆ ನುಗ್ಗಿ ತಮ್ಮ ಜಾತಿಯನ್ನು ಪ್ರಸ್ತಾಪಿಸಿ ನಿಂದನೆ ಮಾಡಿದ್ದಾರೆ. ಜೊತೆಗೆ, ದೊಣ್ಣೆಗಳು ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿ ರಕ್ತ ಸ್ರಾವವಾಗುವರೆಗೆ ಗಾಯಗೊಳಿಸಿದ್ದರು.
ಈ ಸಂಬಂಧ ದೂರು ದಾಖಲಾಗಿದ್ದು, ದೂರಿನ ಸಂಬಂಧ ದಂಡಿನಶಿವರ ಪೊಲೀಸರು ತನಿಖೆ ನಡೆಸಿ 11 ಮಂದಿ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ತುಮಕೂರಿನ ವಿಚಾರಣಾ ನ್ಯಾಯಾಲಯ 2011ರ ಜೂನ್ 23ರಂದು ಆರೋಪ ಸಾಬೀತು ಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತಿಳಿಸಿ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಾಸಿಕ್ಯೂಷನ್ ಪ್ರಶ್ನೆ ಮಾಡಿರಲಿಲ್ಲ. ಬಳಿಕ ಸಂತ್ರಸ್ತೆ ಲಕ್ಷ್ಮಮ್ಮ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
Advertisement