
ಬೆಂಗಳೂರು: ರಾಜ್ಯ ಬಿಜೆಪಿಗೆ ಇಬ್ಬರು ಸಾರಥಿಗಳು ಸಿಕ್ಕಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ಆರ್.ಅಶೋಕ್ ಆಯ್ಕೆಯಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಿವೈ ವಿಜಯೇಂದ್ರ ಆಯ್ಕೆಯಾಗಿದ್ದಾರೆ. ಇಬ್ಬರು ನಾಯಕನ ಆಯ್ಕೆಯಿಂದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದ್ದು, ಸರ್ಕಾರದ ವಿರುದ್ಧ ಮೊದಲ ಪೂರ್ಣಪ್ರಮಾಣದ ಹೋರಾಟಕ್ಕೆ ಬೆಳಗಾವಿ ಅಧಿವೇಶನಲ್ಲಿ ವೇದಿಕೆಯೂ ಸಿದ್ದವಾಗಿದೆ.
ರಾಜ್ಯಾಧ್ಯಕ್ಷ ಬದಲಾವಣೆ ಹಾಗೂ ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬದಿಂದ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಕುಗ್ಗಿತ್ತು. ಜೊತೆಗೆ ಆಂತರಿಕವಾಗಿ ಭಿನ್ನಾಭಿಪ್ರಾಯಗಳೂ ಪಕ್ಷಕ್ಕೆ ಹಿನ್ನಡೆಯನ್ನು ಉಂಟು ಮಾಡಿದ್ದವು. ಆದರೆ ಇದೀಗ ವಿಜಯೇಂದ್ರ ಹಾಗೂ ಆರ್. ಅಶೋಕ್ ಜೋಡಿ ಏನು ಬದಲಾವಣೆ ತರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಡಿಸೆಂಬರ್ 4 ರಿಂದ ಬೆಳಗಾವಿ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಭ್ರಷ್ಟಾಚಾರ ವಿಚಾರ ಹಿಡಿದು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಹರಿಹಾಯಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ.
ಅಧಿಕಾರಗಳ ವರ್ಗಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಭಾಗಿಯಾಗಿರುವುದು ಹಾಗೂ ಜಮೀರ್ ಅಹ್ಮದ್ ಖಾನ್ ಅವರು ಕೋಮುವಾದ ಬಿತ್ತುತ್ತಿರುವ ವಿಚಾರದ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತಲಾಗುವುದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಹೇಳಿದರು,
ಕಾಂಗ್ರೆಸ್ ಸರ್ಕಾರವು ರಾಜ್ಯವನ್ನು ಸೋನಿಯಾ ಗಾಂಧಿಯವರ ಎಟಿಎಂ ಮಾಡಿದೆ ಎಂಬುದಕ್ಕೆ ಯತೀಂದ್ರ ಅವರು ವರ್ಗಾವಣೆ ವಿಚಾರದಲ್ಲಿ ಶಾಮೀಲು ಆಗಿರುವುದುೇ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದರು.
ಇದೇ ವೇಳೆ ವಿಪಕ್ಷ ನಾಯಕನ ಸ್ಥಾನ ಪಡೆಯಲು ಆರ್.ಅಶೋಕ್ ಅವರು ಹೈಕಮಾಂಡ್'ಗೆ ಹಣ ನೀಡಿದ್ದಾರೆಂಬ ಸಚಿವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ತಿರುಗೇಟು ನೀಡಿದ ಅವರು, ಪ್ರಿಯಾಂಕ್ ಖರ್ಗೆ ಮತ್ತು ಅವರ ತಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಾವಿರುವ ಹುದ್ದೆ ಪಡೆಯಲು ಕಾಂಗ್ರೆಸ್ ಹೈಕಮಾಂಡ್‌ಗೆ ಎಷ್ಟು ಹಣ ನೀಡಿದ್ದಾರೆಂದು ಪ್ರಶ್ನಿಸಿದರು.
ಅಧಿಕಾರ ಪಡೆಯಲು ಹಣ ಕೊಡುವುದು ಕಾಂಗ್ರೆಸ್ ಸಂಸ್ಕೃತಿಯೇ ಹೊರತು ಬಿಜೆಪಿಯದ್ದಲ್ಲ. ಪ್ರಿಯಾಂಕ್ ತಂದೆ ಸಾವಿರಾರು ಕೋಟಿ ಹಣ ನೀಡಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪಡೆದಿರಬಹುದು ಎಂದು ಆರೋಪಿಸಿದರು.
Advertisement