'ಗ್ಯಾರಂಟಿ ಯೋಜನೆ'ಗೆ ಎಲ್ಲ, ಅಭಿವೃದ್ಧಿ ಕಾರ್ಯಗಳಿಗೆ ಇಲ್ಲ: ಸರ್ಕಾರದಲ್ಲಿ ಹಣ ಕೊರತೆ ಬಗ್ಗೆ ಶಾಸಕರು, ತಜ್ಞರು ಹೇಳುವುದೇನು?

ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರತವಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಇತರ ಅಭಿವೃದ್ಧಿ ಯೋಜನೆಗಳಿಗೆ ಹಣ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನೇ ಆರಂಭದಿಂದಲೂ ವಿರೋಧ ಪಕ್ಷಗಳು ಹೇಳಿಕೊಂಡು ಬಂದಿದ್ದವು.
ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸೌಧಕ್ಕೆ ಆಗಮಿಸುತ್ತಿರುವುದು(ಸಂಗ್ರಹ ಚಿತ್ರ)
ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸೌಧಕ್ಕೆ ಆಗಮಿಸುತ್ತಿರುವುದು(ಸಂಗ್ರಹ ಚಿತ್ರ)

ಬೆಳಗಾವಿ/ಬೆಂಗಳೂರು: ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರತವಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಇತರ ಅಭಿವೃದ್ಧಿ ಯೋಜನೆಗಳಿಗೆ ಹಣ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನೇ ಆರಂಭದಿಂದಲೂ ವಿರೋಧ ಪಕ್ಷಗಳು ಹೇಳಿಕೊಂಡು ಬಂದಿದ್ದವು. ಆದರೆ ಉಳಿದ ಯೋಜನೆಗಳಿಗೆ ಹಣ ಹೊಂದಿಸಲು ಯಾವುದೇ ಸಮಸ್ಯೆಯಾಗದೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸಹಿತ ಅವರ ಸಂಪುಟ ಸಹೋದ್ಯೋಗಿಗಳು ಹೇಳಿಕೊಂಡು ಬಂದಿದ್ದಾರೆ.

ರಾಜ್ಯದ ಹಲವು ಪ್ರದೇಶಗಳು, ಶಾಸಕರ ಕ್ಷೇತ್ರಗಳಿಗೆ ಅಭಿವೃದ್ಧಿ ಯೋಜನೆಗಳಿಗೆ ಹಣ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕರು ಮತ್ತು ಶಾಸಕರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ವಿಧಾನಸಭೆ ಚಳಿಗಾಲ ಅಧಿವೇಶನದಲ್ಲಿ ಈ ವಿಚಾರ ತೀವ್ರ ಚರ್ಚೆಗೆ ಬರುವ ಸಾಧ್ಯತೆಯಿದೆ. ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಡಿಸೆಂಬರ್ 4ರಿಂದ ಚಳಿಗಾಲ ಅಧಿವೇಶನ ನಡೆಯಲಿದೆ.

ನೀರಾವರಿ ಯೋಜನೆಗಳು ಸ್ಥಗಿತ: ನೀರಾವರಿ ಕ್ಷೇತ್ರದ ತಜ್ಞರ ಪ್ರಕಾರ, ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹಣವನ್ನು ಹೊಂದಿಸಲು ಸರ್ಕಾರಕ್ಕೆ ಕಷ್ಟವಾಗುತ್ತಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣಾ ಭಾಗ್ಯ ಜಲ ನಿಗಮ ಲಿಮಿಟೆಡ್ (KBJNL) ಮತ್ತು ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ (KNNL) ಎರಡೂ ನೀರಾವರಿ ಯೋಜನೆಗಳಿಗೆ 20,000 ಕೋಟಿ ರೂಪಾಯಿ ಮೌಲ್ಯದ ಟೆಂಡರ್‌ಗಳನ್ನು ಕರೆಯಲಾಗಿತ್ತು.

ಆದರೆ, ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಸರ್ಕಾರ ನಿರ್ಧರಿಸಿತು. ಟೆಂಡರ್ ಕರೆದ ಕಾಮಗಾರಿಗಳು ಸ್ಥಗಿತಗೊಂಡಿದ್ದಲ್ಲದೆ, ಆದೇಶ ಹೊರಡಿಸಿದ ಕಾಮಗಾರಿಗಳೂ ಸ್ಥಗಿತಗೊಂಡಿವೆ ಎನ್ನುತ್ತಾರೆ ನೀರಾವರಿ ಕ್ಷೇತ್ರದ ತಜ್ಞ ಅಶೋಕ ಚಂದರಗಿ.

ಹಲವು ಶಾಸಕರು ಅಸಮಾಧಾನ: ಸರ್ಕಾರವು ವಿವಿಧ ಕಾಮಗಾರಿಗಳಿಗೆ ನೀಡುತ್ತಿದ್ದ ಅಲ್ಪ ಪ್ರಮಾಣದ ಶಾಸಕರ ನಿಧಿಯಿಂದ ಹಲವಾರು ಶಾಸಕರು ಅಸಮಾಧಾನಗೊಂಡಿದ್ದಾರೆ. ಪ್ರತಿಯೊಬ್ಬ ಶಾಸಕರಿಗೆ ಶಾಸಕರ ನಿಧಿಯಡಿ 50 ಲಕ್ಷ ರೂಪಾಯಿಗಳನ್ನು ನೀಡಲಾಗಿದ್ದು, ಒಂದು ರಸ್ತೆಯನ್ನು ಅಭಿವೃದ್ಧಿಪಡಿಸಲು ಇದು ಸಾಕಾಗುತ್ತಿಲ್ಲ. ಇನ್ನು ಹೆಚ್ಚಿನ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ, ಕೆಲವು ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರಕಾರ ಎಲ್ಲ ಕ್ಷೇತ್ರಗಳಿಗೂ ಹೆಚ್ಚಿನ ಅನುದಾನ ನೀಡಬೇಕು ಎನ್ನುತ್ತಾರೆ ಶಾಸಕರು.

ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ, ಸರಕಾರ ಉತ್ತರ ಕರ್ನಾಟಕ ಪ್ರದೇಶವನ್ನು ಸಂಪೂರ್ಣ ನಿರ್ಲಕ್ಷಿಸಿದೆ. 371 (ಜೆ) ಅಡಿಯಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಮೀಸಲಿಟ್ಟ ವಿಶೇಷ ನಿಧಿಯ ರೀತಿಯಲ್ಲಿ ಸರ್ಕಾರವು ಸಂಪೂರ್ಣ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮುಂದಾಗಬೇಕು. ಹಿಂದಿನಿಂದಲೂ ಉತ್ತರ ಕರ್ನಾಟಕದ ಕ್ಷೇತ್ರಗಳನ್ನು ಎಲ್ಲ ಕ್ಷೇತ್ರಗಳಲ್ಲಿ ನಿರ್ಲಕ್ಷಿಸಲಾಗಿದೆ. ಈ ಭಾಗದ ಅಭಿವೃದ್ಧಿಗೆ ಸರಕಾರ ಗಮನ ಹರಿಸಲು ಇದು ಸಕಾಲ ಎಂದು ಹೇಳಿದ ಅವರು, ಶಾಸಕರ ನಿಧಿಯಡಿ ಬಿಡುಗಡೆಯಾದ ಅನುದಾನ ತೀರಾ ಅಲ್ಪವಾಗಿದೆ.

ರಾಜ್ಯದಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಸ್ಪಷ್ಟ ಕ್ರಿಯಾ ಯೋಜನೆಯನ್ನು ರೂಪಿಸಬೇಕಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ (UKP-3), ಭದ್ರಾ ಮೇಲ್ದಂಡೆ, ಮಹದಾಯಿ ಮತ್ತು ಮೇಕೆದಾಟು ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಕಾಮಗಾರಿಗಳಿಗೆ ಸಮಯಕ್ಕೆ ಸರಿಯಾಗಿ ಹಣ ಒದಗಿಸಬೇಕು ಎಂದು ಒತ್ತಾಯಿಸುತ್ತಾರೆ. 

ಎಸ್‌ಸಿ/ಎಸ್‌ಟಿಗಳು ಮತ್ತು ರೈತರನ್ನು ಗುರಿಯಾಗಿಸಿಕೊಂಡು ಹಲವು ಯೋಜನೆಗಳನ್ನು ರದ್ದುಗೊಳಿಸಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ವಾಗ್ದಾಳಿ ನಡೆಸಿವೆ. ಎಸ್‌ಸಿ/ಎಸ್‌ಟಿ ವರ್ಗದವರನ್ನು ಉನ್ನತೀಕರಿಸಲು ಎಸ್‌ಸಿಪಿ/ಟಿಎಸ್‌ಪಿ ಕಾರ್ಯಕ್ರಮಕ್ಕೆ ಮೀಸಲಿಟ್ಟ ಸುಮಾರು 11,000 ಕೋಟಿ ರೂ.ಗಳನ್ನು ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಆದರೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಈ ಆರೋಪಗಳನ್ನು ತಳ್ಳಿಹಾಕುತ್ತಾರೆ, ಈ ಸಮುದಾಯಗಳ ಸದಸ್ಯರು ಖಾತರಿಗಳ ಫಲಾನುಭವಿಗಳ ಪ್ರಮುಖ ಭಾಗವಾಗಿರುವುದರಿಂದ ಅಂತಿಮವಾಗಿ ಎಸ್‌ಸಿ/ಎಸ್‌ಟಿಗಳ ಮೊತ್ತವನ್ನು ಬಳಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರ ಕಿಸಾನ್ ಸಮ್ಮಾನ್‌ಗೆ ಸಂಬಂಧಿಸಿದಂತೆ, ಪ್ರತಿ ರೈತರಿಗೆ ಕೇಂದ್ರದ 6,000 ರೂಪಾಯಿಗಳ ಜೊತೆಗೆ ರಾಜ್ಯ ಸರ್ಕಾರವು 4,000 ರೂಪಾಯಿಗಳನ್ನು ನೀಡುವುದನ್ನು ನಿಲ್ಲಿಸಿತು. 4,000 ನೀಡಲು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿರ್ಧಾರ ಕೈಗೊಂಡಿದ್ದರು.

ಬಸವರಾಜ ಬೊಮ್ಮಾಯಿ ಅವರ ಅಧಿಕಾರಾವಧಿಯಲ್ಲಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ರೈತರ ಮಕ್ಕಳಿಗೆ 2 ಸಾವಿರದಿಂದ 11 ಸಾವಿರದವರೆಗೆ ವಿದ್ಯಾರ್ಥಿ ವೇತನ ನೀಡಲು ಆರಂಭಿಸಿದ ‘ರೈತ ವಿದ್ಯಾನಿಧಿ’ ಇನ್ನೂ ಆರಂಭವಾಗಿಲ್ಲ. ಆದರೆ ಸರ್ಕಾರ 270 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿರುವುದರಿಂದ ಶೀಘ್ರದಲ್ಲೇ ಪುನರಾರಂಭಿಸಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 

ಆದರೆ ಎಸ್‌ಸಿ/ಎಸ್‌ಟಿ/ಒಬಿಸಿ/ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ರೈತರ ಮಕ್ಕಳಿಗೆ ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯಿಂದ ಇತರ ಯೋಜನೆಗಳಲ್ಲಿ ವಿದ್ಯಾರ್ಥಿವೇತನ ನೀಡಲಾಗುತ್ತಿರುವುದರಿಂದ ಈ ಯೋಜನೆಯನ್ನು ವಿಸ್ತರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಹಾಗಾಗಿ ರೈತ ವಿದ್ಯಾನಿಧಿಯನ್ನು ಈ ಸಮುದಾಯಗಳಿಗೆ ವಿಸ್ತರಿಸುವುದು ಹೊರೆಯಾಗಬಹುದು ಎಂದು ಸರ್ಕಾರವು ಸಮಾಲೋಚನೆ ನಡೆಸುವ ಸಾಧ್ಯತೆಯಿದೆ.

ಸರ್ಕಾರಕ್ಕೆ ನಿಧಿ ಸಂಗ್ರಹಿಸುವ ವಿಶ್ವಾಸ: ಐದು ಖಾತ್ರಿ ಯೋಜನೆಗಳನ್ನು ಹೊರತುಪಡಿಸಿ ಇತರೆ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರದ ಮೇಲೆ ಎಲ್ಲಾ ಕಡೆಯಿಂದ ಒತ್ತಡವಿದ್ದರೂ, ಬಜೆಟ್‌ನಲ್ಲಿ ಘೋಷಿಸಿದ ಬಹುತೇಕ ಯೋಜನೆಗಳು ಖಾತರಿಯೊಂದಿಗೆ ಅನುಷ್ಠಾನಗೊಳ್ಳಲು ಹಣವನ್ನು ಕ್ರೋಢೀಕರಿಸುವ ವಿಶ್ವಾಸವಿದೆ.

ಈ ವರ್ಷದ ಜುಲೈನಲ್ಲಿ ವಿಧಾನ ಪರಿಷತ್ತಿನಲ್ಲಿ ನಡೆದ ಬಜೆಟ್ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ಯೋಜನೆಗಳಿಗೆ 35,410 ಕೋಟಿ ರೂಪಾಯಿಗಳ ಅಗತ್ಯವಿದ್ದು, ಸಂಪನ್ಮೂಲ ಕ್ರೋಢೀಕರಣಕ್ಕೂ ಕ್ರಮ ಕೈಗೊಳ್ಳಲಾಗಿದೆ. 13,500 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹ, 8,068 ಕೋಟಿ ಹೆಚ್ಚುವರಿ ಸಾಲ, ಬಂಡವಾಳ ಹೂಡಿಕೆಯ ಮರು ಆದ್ಯತೆಯ ಮೂಲಕ 6,086 ಕೋಟಿ ರೂಪಾಯಿ ಮತ್ತು ಆದಾಯ ಯೋಜನೆಗಳ ಮರು ಆದ್ಯತೆಯ ಮೂಲಕ 7,000 ಕೋಟಿ ರೂಪಾಯಿ ಸೇರಿದಂತೆ ಖಾತರಿ ಯೋಜನೆಗಳಿಗೆ ಸಂಪನ್ಮೂಲಗಳನ್ನು ಸಂಗ್ರಹಿಸಲಾಗುವುದು ಎಂದು ಅವರು ಹೇಳಿದರು. ಸಂಪನ್ಮೂಲಗಳ ನ್ಯಾಯಯುತ ವಿತರಣೆಯ ಉದ್ದೇಶದಿಂದ ಖಾತರಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ತಮ್ಮ ಇಲಾಖೆಯ ಹಲವಾರು ಪ್ರಮುಖ ಯೋಜನೆಗಳನ್ನು ಯಾವುದೇ ಆರ್ಥಿಕ ಅಡಚಣೆಯಿಲ್ಲದೆ ಅನುಷ್ಠಾನಗೊಳಿಸಲಾಗುತ್ತಿದೆ. ಯಾವುದೇ ಗ್ಯಾರಂಟಿ ಯೋಜನೆಗಳಿಗೆ ನಿಧಿಯ ಕೊರತೆ ಇದೆಯೆಂದು ನನಗೆ ಅನಿಸುತ್ತಿಲ್ಲ. ಬಹುತೇಕ ಭರವಸೆಗಳು ಜಾರಿಯಾಗುತ್ತಿದ್ದು, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಇಲ್ಲಿಯವರೆಗೆ, ಖಾತರಿಗಳಿಂದಾಗಿ ಯಾವುದೇ ಸರ್ಕಾರಿ ಕೆಲಸಗಳಿಗೆ ತೊಂದರೆಯಾಗಿಲ್ಲ ಎನ್ನುತ್ತಾರೆ. 

ಆದಾಗ್ಯೂ, ಪಿಡಬ್ಲ್ಯುಡಿ ಇಲಾಖೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳನ್ನು ಹಾಕುವುದು ಸ್ಥಗಿತಗೊಂಡಿದೆ, ಇದು ಗ್ರಾಮೀಣ ಮೂಲಸೌಕರ್ಯಗಳ ಸುಧಾರಣೆಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರವು 1,000 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ. ರಾಜ್ಯ ಸರ್ಕಾರವು ಇನ್ನೂ ಉಪಕ್ರಮವನ್ನು ಕೈಗೊಂಡಿಲ್ಲ ಎನ್ನುತ್ತಾರೆ. 

ರಾಜ್ಯದಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸಿನ ಮುಗ್ಗಟ್ಟು ಎದುರಾಗಿದೆ ಎನ್ನುತ್ತಾರೆ ತಜ್ಞರು. ಸರ್ಕಾರವು ತನ್ನ ಖಾತರಿ ಯೋಜನೆಗಳ ಅನುಷ್ಠಾನಕ್ಕೆ ಸಂಪೂರ್ಣವಾಗಿ ಗಮನಹರಿಸಿದೆ. ವಿಪರ್ಯಾಸವೆಂದರೆ, ಸರ್ಕಾರವು ಡಿಸೆಂಬರ್‌ನಲ್ಲಿ ಪ್ರಾರಂಭಿಸಲು ಯೋಜಿಸಿದ್ದ ಯುವನಿಧಿಯನ್ನು ಜನವರಿ 2024 ಕ್ಕೆ ಮುಂದೂಡಲಾಗಿದೆ, ಇದಕ್ಕೆ ಹಣದ ಕೊರತೆ ಕಾರಣವಾಗಿದೆ.

ಗೃಹ ಲಕ್ಷ್ಮಿ ಯೋಜನೆಯು ಹೆಚ್ಚಿನ ಫಲಾನುಭವಿಗಳನ್ನು ತಲುಪಿಲ್ಲ, ಇದು ಇಲ್ಲಿಯವರೆಗೆ ಕೇವಲ ಶೇಕಡಾ 36ರಷ್ಟು ಫಲಾನುಭವಿಗಳನ್ನು ತಲುಪಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರವು ಸಿಎಸ್ಆರ್ ಹಣವನ್ನು ಅವಲಂಬಿಸಿದೆ. ಹಣಕಾಸಿನ ಕೊರತೆಯಿಂದ ಹಲವು ಪ್ರಮುಖ ಕಾಮಗಾರಿಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸುವಂತೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

ಮೂಲಗಳ ಪ್ರಕಾರ ಕಳೆದ ಮಧ್ಯಂತರ ಬಜೆಟ್ ನಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಸರಕಾರ ಇಟ್ಟುಕೊಂಡಿದ್ದ 61,234 ಕೋಟಿ ರೂಪಾಯಿಗೆ ಬದಲಾಗಿ ಸಿದ್ದರಾಮಯ್ಯ ಸರಕಾರ ಬಜೆಟ್ ನಲ್ಲಿ 54,374 ಕೋಟಿ ರೂಪಾಯಿಗಳನ್ನು ಬಂಡವಾಳ ವೆಚ್ಚವಾಗಿ ಮೀಸಲಿಟ್ಟಿದೆ.

2023-24ರ ಆರ್ಥಿಕ ವರ್ಷದ ಐದು ತಿಂಗಳಲ್ಲಿ ಸರ್ಕಾರದ ಒಟ್ಟು ಬಂಡವಾಳ ವೆಚ್ಚ 642.32 ಕೋಟಿ ರೂಪಾಯಿಗಳಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಬಂಡವಾಳ ವೆಚ್ಚದಲ್ಲಿ ಭಾರಿ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಬಜೆಟ್: ರಾಜ್ಯದ ಬಜೆಟ್ 3,26,747 ಕೋಟಿ ರೂಪಾಯಿ ಗಾತ್ರದ್ದಾಗಿದ್ದು, ಇದು 2022ರ ಬಜೆಟ್‌ಗಿಂತ ಶೇ.22 ಹೆಚ್ಚಾಗಿದೆ.  ವಾರ್ಷಿಕವಾಗಿ 32,000 ಕೋಟಿ ರೂಪಾಯಿ ಮತ್ತು ಪ್ರಸಕ್ತ ವರ್ಷಕ್ಕೆ ಗರಿಷ್ಠ 18,000 ಕೋಟಿ ರೂಪಾಯಿಗಳು ಗೃಹ ಲಕ್ಷ್ಮಿ ಯೋಜನೆಗೆ ಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com