ಬಳ್ಳಾರಿ: ಎಪಿಎಂಸಿ ಗೋಡೌನಿನಲ್ಲೇ ಸರ್ಕಾರಿ ವಸತಿ ಶಾಲೆ; ವಿದ್ಯಾರ್ಥಿಗಳ ದಯನೀಯ ಸ್ಥಿತಿ!

ಬಳ್ಳಾರಿ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿಗಳು ಕಳೆದ ಏಳು ವರ್ಷಗಳಿಂದ ಎಪಿಎಂಸಿ ಗೋಡೌನ್ ನಲ್ಲಿಯೇ ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಮತ್ತು ಅಲ್ಲಿಯೇ ತಂಗಿದ್ದಾರೆ.
ಎಪಿಎಂಸಿ ಗೋಡೌನೇ ಸರ್ಕಾರಿ ವಸತಿ ಶಾಲೆ
ಎಪಿಎಂಸಿ ಗೋಡೌನೇ ಸರ್ಕಾರಿ ವಸತಿ ಶಾಲೆ

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿಗಳು ಕಳೆದ ಏಳು ವರ್ಷಗಳಿಂದ ಎಪಿಎಂಸಿ ಗೋಡೌನ್ ನಲ್ಲಿಯೇ ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಮತ್ತು ಅಲ್ಲಿಯೇ ತಂಗಿದ್ದಾರೆ.

ಕೆರೂರು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಈ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸುವ ನೂತನ ಕಟ್ಟಡ ಇಷ್ಟು ವರ್ಷವಾದರೂ ಪೂರ್ಣಗೊಂಡಿಲ್ಲ. 2019ರಲ್ಲಿ ಕಾಮಗಾರಿ ಆರಂಭವಾಗಿದ್ದರೂ ದಿಢೀರ್‌ ಸ್ಥಗಿತಗೊಂಡಿತ್ತು. 

ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿರುವ ಬಾಲಕಿಯರು ಮತ್ತು ಬಾಲಕರು ಗೋಡೌನ್ ನಲ್ಲಿಯೇ ವಿದ್ಯಾಭ್ಯಾಸ ಮಾಡಿ ದಯನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. 6ರಿಂದ 10ನೇ ತರಗತಿವರೆಗಿನ 230 ವಿದ್ಯಾರ್ಥಿಗಳಿಗೆ ಈ ಗೋದಾಮಿನಲ್ಲಿ ವಾಸಿಸುತ್ತಿದ್ದು, ಐದು ಶೌಚಾಲಯಗಳನ್ನು ಮಾತ್ರ ನಿರ್ಮಿಸಲಾಗಿದೆ.

ಕೆಲವು ವಿದ್ಯಾರ್ಥಿಗಳು ಬಯಲು ಬಹಿರ್ದೆಸೆಗೆ ತೆರಳಿದರೆ, ಇನ್ನು ಕೆಲವರು ನಿತ್ಯ ಗ್ರಾಮಸ್ಥರಿಗೆ ವಸತಿ ಕಲ್ಪಿಸುವಂತೆ ಮನವಿ ಮಾಡುತ್ತಿದ್ದಾರೆ.

ಈ ಎಪಿಎಂಸಿ ಗೋಡೌನ್‌ನಲ್ಲಿ ತರಗತಿ ಕೊಠಡಿಗಳಾಗಿ ಬಳಕೆಯಾಗುತ್ತಿರುವ ಕೋಣೆಗಳು ರಾತ್ರಿ ವಿದ್ಯಾರ್ಥಿಗಳಿಗೆ ತಂಗಲು ವಸತಿಗೃಹವಾಗಿ ಬದಲಾಗುತ್ತವೆ. ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಪೋಷಕರು ಮತ್ತು ಮಕ್ಕಳು ಇತ್ತೀಚೆಗೆ ಶಾಲಾ ಆಡಳಿತಕ್ಕೆ ಪತ್ರ ಬರೆದಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳ ಹಿತವನ್ನು ನಿರ್ಲಕ್ಷಿಸಿರುವ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಲು ಮುಂದಾಗಿದ್ದಾರೆ.

"ನನ್ನ ಮಗಳು 7ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಶಾಲೆಯಲ್ಲಿ ಹುಡುಗಿಯರು ಮತ್ತು ಹುಡುಗರಿಬ್ಬರೂ ಭಯಾನಕ ಪರಿಸ್ಥಿತಿಯಲ್ಲಿ ಓದುತ್ತಿದ್ದಾರೆ." ಏಳು ಗೋಡೌನ್ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ ಮತ್ತು ತರಗತಿಗಳು ಮುಗಿದ ನಂತರ ಅಲ್ಲಿಯೇ ವಾಸಿಸುತ್ತಾರೆ ಎಂದು ಒಬ್ಬ ವಿದ್ಯಾರ್ಥಿಯ ತಂದೆ ರಾಮಪ್ಪ ಎಂ ಅವರು ಹೇಳಿದ್ದಾರೆ.

ಸರ್ಕಾರ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಕಲ್ಪಿಸಿಲ್ಲ. ವಿದ್ಯಾರ್ಥಿಗಳಿಗೆ ಮಲಗಲು ಹಾಸಿಗೆಯೂ ಇಲ್ಲ. ವಸತಿ ಶಾಲೆಗೆ ಕಟ್ಟಡವನ್ನು 2019ರಲ್ಲಿಯೇ ಮಂಜೂರು ಮಾಡಲಾಗಿತ್ತು. ನಿರ್ಮಾಣ ಕಾರ್ಯ ಪ್ರಾರಂಭವಾಯಿತು, ಆದರೆ ದಿಢೀರ್ ನಿಂತಿತು. ಕುಡಿಯುವ ನೀರು ಮತ್ತು ಶೌಚಾಲಯಗಳು ಪ್ರಮುಖ ಸಮಸ್ಯೆಗಳಾಗಿವೆ. ಕಟ್ಟಡವನ್ನು ಶೀಘ್ರ ಪೂರ್ಣಗೊಳಿಸಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಂತೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದೇನೆ ಎಂದರು.

"ನಾವು ನಿರ್ಮಾಣ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇವೆ" ಎಂದು ಬಳ್ಳಾರಿ ಜಿಲ್ಲಾಡಳಿತದ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com