ಬರಿಗೈಯಲ್ಲೇ ಬೃಹತ್‌ ಹೆಬ್ಬಾವು ಹಿಡಿದ 7ನೇ ತರಗತಿ ಪೋರ, ವಿಡಿಯೋ ವೈರಲ್

12 ವರ್ಷದ 7ನೇ ತರಗತಿ ಓದುತ್ತಿರುವ ಬಾಲಕನೋರ್ವ ಬರಿಗೈಯಲ್ಲೇ ಬೃಹತ್ ಹೆಬ್ಬಾವನ್ನು ಹಿಡಿದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಬರಿಗೈಯಲ್ಲೇ ಹಾವನ್ನು ಹಿಡಿದ 12ರ ಬಾಲಕ
ಬರಿಗೈಯಲ್ಲೇ ಹಾವನ್ನು ಹಿಡಿದ 12ರ ಬಾಲಕ

ಉಡುಪಿ: 12 ವರ್ಷದ 7ನೇ ತರಗತಿ ಓದುತ್ತಿರುವ ಬಾಲಕನೋರ್ವ ಬರಿಗೈಯಲ್ಲೇ ಬೃಹತ್ ಹೆಬ್ಬಾವನ್ನು ಹಿಡಿದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಾಲಿಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಾಲಕ ಹೆಬ್ಬಾವು ಹಿಡಿದಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಹಾವನ್ನು ಹಿಡಿದಿರುವ ಬಾಲಕನನ್ನು 12 ವರ್ಷ ಪ್ರಾಯದ ನೇ ತರಗತಿ ವಿದ್ಯಾರ್ಥಿ ಧೀರಜ್ ಐತಾಳ್ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಕುಂದಾಪುರದ ಸಾಲಿಗ್ರಾಮ ಪರಿಸರದಲ್ಲಿ ಬೃಹತ್‌ ಹೆಬ್ಬಾವೊಂದು ಕಂಡು ಬಂದಿತ್ತು. ಈ ಬಗ್ಗೆ ಸ್ಥಳೀಯರು ಉರಗ ತಜ್ಞ ಸುಧೀಂದ್ರ ಐತಾಳ್ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಉರಗ ತಜ್ಞ ಸುಧೀಂದ್ರ ಐತಾಳ್ ತಮ್ಮ ಪುತ್ರ 12 ವರ್ಷದ ಬಾಲಕ ಧೀರಜ್ ಐತಾಳ್ ರೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಕೆಲಹೊತ್ತು ಈ ಇಬ್ಬರೂ ಹಾವಿನ ಚಲನವಲನ ಗಮನಿಸಿದ್ದು, ತಂದೆ ಸುಧೀಂದ್ರ ಐತಾಳ್ ಮಾರ್ಗದರ್ಶನದಂತೆ ಪುತ್ರ ಧೀರಜ್ ಐತಾಳ್ ಕೂಡ ಹಾವಿನ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಈ ವೇಳೆ ಉರಗ ತಜ್ಞ ಸುಧೀಂದ್ರ ಐತಾಳ್ ಹೆಬ್ಬಾವಿನ ಬಾಲವನ್ನು ಹಿಡಿದು ಅದು ತಪ್ಪಿಸಿಕೊಂಡು ಹೋಗದಂತೆ ನೋಡಿಕೊಂಡರೆ ಹಾವಿನ ಮುಂಭಾಗದಲ್ಲಿದ್ದ ಅವರ ಪುತ್ರ 12 ವರ್ಷದ ಧೀರಜ್ ಐತಾಳ್ ನೋಡ ನೋಡುತ್ತಲೇ ಹೆಬ್ಬಾವಿನ ಬಾಯಿಯ ಬಳಿ ಕೈ ಹಾಕಿ ತಂದೆಯ ಜೊತೆಗೆ ಹಾವನ್ನು ಹಿಡಿದಿದ್ದಾನೆ. ಈ ವೇಳೆ ಕೊಂಚ ಆತಂಕಕ್ಕೀಡಾದ ಹಾವು ಧೀರಜ್ ಐತಾಳ್ ಗೆ ಸುತ್ತಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿತು. ಆದರೆ ತಂದೆಯಿಂದ ತರಬೇತಿ ಪಡೆದಿದ್ದ ಧೀರಜ್ ಐತಾಳ್ ಚಾಕಚಕ್ಯತೆಯಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಬಳಿಕ ತಂದೆ ಮಗ ಇಬ್ಬರೂ ಸೇರಿ ಹಾವನ್ನು ಸುರಕ್ಷಿತವಾಗಿ ಬ್ಯಾಗಿನಲ್ಲಿ ಹಾಕಿ ರಕ್ಷಣೆ ಮಾಡಿದ್ದಾರೆ. ಬಳಿಕ ಅದನ್ನು ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋ ವಾಟ್ಸ್​ಆ್ಯಪ್​, ಫೇಸ್​ಬುಕ್‌ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ. ಈ ಪುಟ್ಟ ಪೋರನ ಧೀರತನಕ್ಕೆ ಮನಸೋತಿರುವ ಜನರು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಧೈರ್ಯದಿಂದ ಬೃಹತ್ ಹೆಬ್ಬಾವನ್ನು ಹಿಡಿದ ಬಾಲಕ ಧೀರಜ್ ಐತಾಳ್ ಚಿತ್ರಪಾಡಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ಧೀರಜ್ ಐತಾಳ್ ತಂದೆ ಸುಧೀಂದ್ರ ಐತಾಳ್ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಸಮೀಪ ವಾಸವಿದ್ದಾರೆ. ಸುಧೀಂದ್ರ ಅವರು ಪ್ರಾಣಿ-ಪ್ರೇಮಿಯಾಗಿದ್ದು ಗಾಯಗೊಂಡ ಪ್ರಾಣಿ-ಪಕ್ಷಿಗಳಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ. ತಾವು ಪ್ರಾಣಿಗಳೊಂದಿಗೆ ಸ್ನೇಹ ಸಂಬಂಧ ವೃದ್ಧಿಸಿಕೊಳ್ಳುವುದರ ಜೊತೆಗೆ ಪುತ್ರನಿಗೂ ಆ ಕುರಿತ ಅಭಿರುಚಿ ಬೆಳೆಸಿದ್ದಾರೆ. ಕುಂದಾಪುರ ಮಾತ್ರವಲ್ಲದೇ ಉಡುಪಿ ಜಿಲ್ಲೆಯ ಮೂಲೆ ಮೂಲೆಯಿಂದ ಸುಧೀಂದ್ರ ಐತಾಳ್ ಅವರ ಸಾಲಿಗ್ರಾಮ ನಿವಾಸಕ್ಕೆ ಭೇಟಿ ನೀಡಿ ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸುತ್ತಾರೆ. ಸದ್ಯ ಸುಧೀಂದ್ರ ಐತಾಳ್ ಅವರ ಮನೆ ಸ್ಥಳೀಯವಾಗಿ ಪ್ರವಾಸಿ ತಾಣವಾಗಿದೆ. ಇಲ್ಲಿಗೆ ನಿತ್ಯ ನೂರಾರು ಪ್ರಾಣಿ ಪ್ರಿಯರು ಭೇಟಿ ನೀಡಿ ಅಲ್ಲಿರುವ ವಿವಿಧ ಜಾತಿಗಳ ಪ್ರಾಣಿಪಕ್ಷಿಗಳನ್ನು ವೀಕ್ಷಿಸುತ್ತಾರೆ.

ಈ ಹಿಂದೆ ಅರಣ್ಯ ಇಲಾಖೆ ಅಕ್ರಮವಾಗಿ ಪ್ರಾಣಿಗಳನ್ನು ಇರಿಸಿಕೊಂಡಿದ್ದಕ್ಕಾಗಿ ಸುಧೀಂದ್ರ ಐತಾಳ್ ವಿರುದ್ಧ ಪ್ರಕರಣ ಕೂಡ ದಾಖಲಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com