ವಿಜಯಪುರ: ಗೋಲ್ ಗುಂಬಜ್ ಸ್ಮಾರಕಕ್ಕೆ ಯುನೆಸ್ಕೋ ಪಾರಂಪರಿಕ ತಾಣ ಎಂದು ಗುರುತು ಪಟ್ಟಿ ಪಡೆಯುವ ಬಹುಕಾಲದ ಬೇಡಿಕೆಯನ್ನು ಈಡೇರಿಸಲು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ಸೂಚಿಸಿದ್ದಾರೆ.
ನಿನ್ನೆ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇತಿಹಾಸಕಾರರಿಂದ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ನೆರವಿನೊಂದಿಗೆ ವಿವರವಾದ ವರದಿಯನ್ನು ತಯಾರಿಸಲು ಏಜೆನ್ಸಿಯನ್ನು ನೇಮಿಸಿಕೊಳ್ಳಲಾಗುವುದು ಎಂದು ಹೇಳಿದರು.
ಎಲ್ಲ ಸಾಮರ್ಥ್ಯಗಳಿದ್ದರೂ ಆದಿಲ್ ಶಾಹಿ ಸ್ಮಾರಕ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಇನ್ನೂ ಸೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಗೋಲ್ ಗುಂಬಜ್‌ನಲ್ಲಿ ಬೆಳಕು ಮತ್ತು ಧ್ವನಿ ಪ್ರದರ್ಶನ ಬಗ್ಗೆ ಯೋಜನೆಗೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸುವುದು ಮೊದಲಾದ ಪ್ರಾಥಮಿಕ ಕೆಲಸಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಈ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿತ್ತು.
ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತು ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಹೇಗೆ ಪರಿಣಾಮಕಾರಿಯಾಗಿ ಅಳವಡಿಸಬಹುದು ಎಂಬುದರ ಕುರಿತು ವರದಿಯನ್ನು ಪ್ರಸ್ತುತಪಡಿಸಲು ಸಚಿವರು ತಜ್ಞರನ್ನು ಆಹ್ವಾನಿಸಿದರು.
ಆದಿಲ್ ಶಾಹಿ ಕಾಲದ ಪುರಾತನ ಕರೇಜ್ (ಸಬ್ಟರ್ರೇನಿಯನ್ ವಾಟರ್ ಸಿಸ್ಟಮ್) ಪುನಃಸ್ಥಾಪನೆ ಕಾರ್ಯ ಮತ್ತೊಂದು ಬಹುಕಾಲದ ಬೇಡಿಕೆಯಾಗಿದ್ದು, ಕಾಮಗಾರಿಯನ್ನು ಪ್ರಾರಂಭಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಟಾಂಗಾ (ಕುದುರೆ ಗಾಡಿ) ಪುನಶ್ಚೇತನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಪಾಟೀಲ್ ಹೇಳಿದರು.
ಸ್ಮಾರಕಗಳ ರಕ್ಷಣೆಗೆ ಅವುಗಳನ್ನು ದತ್ತು ತೆಗೆದುಕೊಳ್ಳುವಂತೆ ಒತ್ತಾಯಿಸಿದ ಸಚಿವ ಪಾಟೀಲ್, ವಿಜಯಪುರದ ಸೆಕಾಬ್ ಶಿಕ್ಷಣ ಸಂಸ್ಥೆಯು ನಗರದ ಆನಂದ ಮಹಲ್ ನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದರು.
Advertisement