ಭ್ರಷ್ಟ ವ್ಯಕ್ತಿಗೆ ಮಣೆ ಹಾಕುತ್ತಿರುವುದೇಕೆ? ಶ್ಯಾಮ್ ಭಟ್ ನೇಮಕ ಸಂಬಂಧ ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ!

ರಾಜ್ಯ ಸರ್ಕಾರವು ಮಾನವ ಹಕ್ಕುಗಳ ಆಯೋಗದ ಸದಸ್ಯರನ್ನಾಗಿ ಬಿಡಿಎ ಮತ್ತು ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಟಿ ಶ್ಯಾಮ್ ಭಟ್ ಅವರನ್ನು ನೇಮಿಸಿರುವುದಕ್ಕೆ  ಹಲವರು ಆಕ್ರೋಶ ಮತ್ತು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ರಾಜ್ಯ ಸರ್ಕಾರವು ಮಾನವ ಹಕ್ಕುಗಳ ಆಯೋಗದ ಸದಸ್ಯರನ್ನಾಗಿ ಬಿಡಿಎ ಮತ್ತು ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಟಿ ಶ್ಯಾಮ್ ಭಟ್ ಅವರನ್ನು ನೇಮಿಸಿರುವುದಕ್ಕೆ  ಹಲವರು ಆಕ್ರೋಶ ಮತ್ತು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕರೊಬ್ಬರು ಶ್ಯಾಮ್ ಭಟ್ ನೇಮಕದ ಬಗ್ಗೆ ಹತಾಶೆ ವ್ಯಕ್ತ ಪಡಿಸಿದ್ದಾರೆ.  ಅವರನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ನೇಮಿಸಿದಾಗ ಏನಾಯಿತು ಎಂಬುದನ್ನು ನೋಡಿ. ಕೆಪಿಎಸ್‌ಸಿ ಪರೀಕ್ಷೆಯಲ್ಲಿ ನಡೆದ ಭ್ರಷ್ಟಾಚಾರದಿಂದಾಗಿ ಸುಮಾರು 361 ಪ್ರತಿಭಾವಂತ ಅಮಾಯಕ ಆಕಾಂಕ್ಷಿಗಳು ಹಲವು ವರ್ಷಗಳ ಕಾಲ ತೊಂದರೆ ಅನುಭಲಿಸಬೇಕಾಯಿತು. ಇದಕ್ಕೆಲ್ಲಾ ಯಾರು ಹೊಣೆ ಎಂದು ಎಲ್ಲರಿಗೂ ಗೊತ್ತು. ಮಾನವ ಹಕ್ಕುಗಳ ಆಯೋಗವು ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಬಹುದಾದ ಒಂದು ಸ್ಥಳವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಶ್ಯಾಮ್ ಭಟ್  ನೇಮಕವನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತೀವ್ರವಾಗಿ ಖಂಡಿಸಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರದಿಂದ ರಾಜ್ಯದ ಜನತೆ ಬೇಸತ್ತಿದ್ದು, ನೆಮ್ಮದಿಯ ಜೀವನಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ಸರ್ಕಾರವು ಹಲವಾರು ಭ್ರಷ್ಟಾಚಾರ ಆರೋಪಗಳ ಆರೋಪ ಹೊತ್ತಿರುವ ವಿವಾದಿತ ವ್ಯಕ್ತಿ ಭಟ್ ಅವರನ್ನು ನೇಮಿಸುವ ಮೂಲಕ ಅವರ ನಂಬಿಕೆಯನ್ನು ಕುಗ್ಗಿಸಿದೆ ಎಂದಿದ್ದಾರೆ.

ಭಟ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದಾಗ ಮೂಲ ಮಂಜೂರಾತಿದಾರರ ಒಪ್ಪಿಗೆ ಇಲ್ಲದೇ ಹೌಸಿಂಗ್ ಸೊಸೈಟಿಯ ಲೇಔಟ್ ಯೋಜನೆಗೆ ತಿದ್ದುಪಡಿ ತರುವ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಬಿಡಿಎಯಲ್ಲಿ ಹಲವು ಕೋಟಿ ರೂಪಾಯಿಗಳ ಭ್ರಷ್ಟಾಚಾರಕ್ಕೂ ಹೆಸರುವಾಸಿಯಾಗಿದ್ದಾರೆ. ಈಗ ಅವರಿಗೆ ಈ ಸ್ಥಾನ ನೀಡಿರುವುದು ಸ್ವಾಗತಾರ್ಹವಲ್ಲ.

ಸಿಎಂ ಆದ ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಭಟ್ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಅವರ ಅಧಿಕಾರಾವಧಿಯಲ್ಲಿ ಆಯೋಗದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಆರೋಪವಿತ್ತು. ಈಗ ರಾಜ್ಯದಲ್ಲಿ ಮಾನವ ಹಕ್ಕುಗಳನ್ನು ಕಾಪಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಅವರು ಮತ್ತೆ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಮತ್ತು ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಭಟ್ ಅವರ ನೇಮಕವನ್ನು ಕೂಡಲೇ ಹಿಂಪಡೆಯಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹಿಸಿದೆ. ಶ್ಯಾಮ್ ಭಟ್  ಭ್ರಷ್ಟ ಮತ್ತು ಕಳಂಕಿತ. ಅವರು ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಅದು ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com