ಜಾತಿ ಗಣತಿ ವರದಿ ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ ಕಾಂಗ್ರೆಸ್‌ ನಾಯಕ ವೀರಪ್ಪ ಮೊಯ್ಲಿ 

ರಾಜ್ಯದಲ್ಲಿ ನಡೆದ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡುವಂತೆ ಕಾಂಗ್ರೆಸ್ ಹಿರಿಯ ನಾಯಕ ಎಂ. ವೀರಪ್ಪ ಮೊಯ್ಲಿ ಅವರು ಮಂಗಳವಾರ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳಿದ್ದಾರೆ.
ವೀರಪ್ಪ  ಮೊಯ್ಲಿ
ವೀರಪ್ಪ ಮೊಯ್ಲಿ

ಬೆಂಗಳೂರು: ರಾಜ್ಯದಲ್ಲಿ ನಡೆದ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡುವಂತೆ ಕಾಂಗ್ರೆಸ್ ಹಿರಿಯ ನಾಯಕ ಎಂ. ವೀರಪ್ಪ ಮೊಯ್ಲಿ ಅವರು ಮಂಗಳವಾರ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳಿದ್ದಾರೆ.

ಕೇಂದ್ರದ ಮಾಜಿ ಕಾನೂನು ಸಚಿವರಾಗಿದ್ದ ಮೊಯ್ಲಿ, ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (2013-2018) ಎಚ್. ಕಾಂತರಾಜ್ ಅವರ ಅಧ್ಯಕ್ಷತೆಯಲ್ಲಿ ಅಂದಿನ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಜಾತಿ ಗಣತಿಯನ್ನು ನಡೆಸಿತ್ತು ಮತ್ತು ನಂತರ ವರದಿಯನ್ನು ಸಲ್ಲಿಸಿತ್ತು ಎಂದರು.

ಬಳಿಕ ಎಚ್‌ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ (2018 ಮತ್ತು 2023ರ ನಡುವೆ) ಜಾತಿ ಗಣತಿಯ ವರದಿ ಲಭ್ಯವಿತ್ತು. ಆದರೆ, ಅವರಿಗೆ (ಜೆಡಿಎಸ್ ಮತ್ತು ಬಿಜೆಪಿ) ಬಿಡುಗಡೆ ಮಾಡಲು ಮನಸ್ಸಿರಲಿಲ್ಲ. ಇದು ತುಂಬಾ ಸ್ಪಷ್ಟವಾಗಿತ್ತು ಎಂದು ಮೊಯ್ಲಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.

ಸೋಮವಾರ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸರ್ಕಾರ ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಿದೆ. ಅದರಂತೆ, ರಾಜ್ಯ ಸರ್ಕಾರವು ಜಾತಿ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಬೇಕೆಂದು ನೀವು ಬಯಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ (ಅಧಿಕಾರಕ್ಕೆ) ಹಿಂದುಳಿದ ವರ್ಗಗಳ ಹಿತಾಸಕ್ತಿಗಳನ್ನು ಪೂರೈಸಲು ನಾವು ತುಂಬಾ ಉತ್ಸುಕರಾಗಿದ್ದೇವೆ' ಎಂದರು. 

1992ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಹಿಂದಿನ ರಾಮಕೃಷ್ಣ ಹೆಗಡೆ (ಜನತಾ ಪಕ್ಷ) ಆಡಳಿತದ ಸಮಿತಿಯ ವರದಿ ಸಿದ್ಧವಾಗಿದ್ದರೂ, 1992ರಲ್ಲಿ ಚಿನ್ನಪ್ಪ ರೆಡ್ಡಿ ಆಯೋಗದ ವರದಿಯನ್ನು ಬಿಡುಗಡೆ ಮಾಡಿದ್ದೆ ಎಂದು ಮೊಯ್ಲಿ ನೆನಪಿಸಿಕೊಂಡರು.

'ಕೂಡಲೇ ವರದಿ ಬಿಡುಗಡೆ ಮಾಡುವಂತೆ ಸಿದ್ದರಾಮಯ್ಯ ಅವರನ್ನು ಕೋರುತ್ತೇನೆ. 'ಈಗ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಸಿಎಂ ಆಗಿರುವುದರಿಂದ ಜಾತಿ ಸಮೀಕ್ಷೆಯ ವರದಿ ಬಿಡುಗಡೆ ಮಾಡಬೇಕು' ಎಂದು ಹೇಳಿದರು.

ವರದಿಯಲ್ಲಿ ‘ಅನ್ಯಾಯ’ (ಕೆಲವು ಸಮುದಾಯಗಳಿಗೆ) ಆಗಿರುವುದು ಕಂಡುಬಂದರೆ ಅದನ್ನು ಬಿಡುಗಡೆ ಮಾಡಿದ ನಂತರ ಸಿದ್ದರಾಮಯ್ಯ ಸರಿಪಡಿಸುವ ಕ್ರಮ ಕೈಗೊಳ್ಳಬಹುದು ಎಂದ ಮೊಯ್ಲಿ, ಮುಖ್ಯಮಂತ್ರಿಗಳು ಅದನ್ನು ಸಾರ್ವಜನಿಕಗೊಳಿಸದಿರಲು ತಾಂತ್ರಿಕ ಕಾರಣಗಳನ್ನು ಹೇಳಬಾರದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com