ಹಿಂದುಳಿದ ವರ್ಗಗಳ ಆಯೋಗ ಜಾತಿ ಗಣತಿ ವರದಿಯನ್ನು ಇನ್ನೂ ಸಲ್ಲಿಸಿಲ್ಲ: ಸಿಎಂ ಸಿದ್ದರಾಮಯ್ಯ

ಬಿಹಾರ ಸರ್ಕಾರ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ 2015 ರಲ್ಲಿ ಸಿದ್ದರಾಮಯ್ಯ ಸರ್ಕಾರ ನಡೆಸಿದ್ದ ಕರ್ನಾಟಕ ಜಾತಿ ಗಣತಿ ವರದಿ ಕುರಿತು ಎಲ್ಲರ ಚಿತ್ತ ಹರಿದಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವರದಿಯನ್ನು ಇನ್ನೂ ಸಲ್ಲಿಸಿಲ್ಲ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಬಿಹಾರ ಸರ್ಕಾರ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ 2015 ರಲ್ಲಿ ಸಿದ್ದರಾಮಯ್ಯ ಸರ್ಕಾರ ನಡೆಸಿದ್ದ ಕರ್ನಾಟಕ ಜಾತಿ ಗಣತಿ ವರದಿ ಕುರಿತು ಎಲ್ಲರ ಚಿತ್ತ ಹರಿದಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವರದಿಯನ್ನು ಇನ್ನೂ ಸಲ್ಲಿಸಿಲ್ಲ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಹಿಂದುಳಿದ ವರ್ಗಗಳ ಆಯೋಗವು ಜಾತಿ ಗಣತಿ ವರದಿಯನ್ನು ಇನ್ನೂ ನಮಗೆ ನೀಡಿಲ್ಲ. ಜಾತಿ ಗಣತಿ ಹಾಗೂ ಸಾಮಾಜಿಕ, ಆರ್ಥಿಕ ಸರ್ವೆಗೆ ಕಾಂತರಾಜು ಅಧ್ಯಕ್ಷತೆಯಲ್ಲಿ ನಾನೇ ಆದೇಶ ನೀಡಿದ್ದೆ. ವರದಿ ಪೂರ್ಣಗೊಳ್ಳುವ ಮುನ್ನ ನಮ್ಮ ಸರ್ಕಾರದ ಅವಧಿ ಮುಗಿಯಿತು. ನಂತರ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಆ ವರದಿ ತೆಗೆದುಕೊಳ್ಳಲಿಲ್ಲ ಎಂದು ಹೇಳಿದರು.

ಆಗಿನ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವಧಿ ಮುಗಿಯಿತು. ಬಿಜೆಪಿ ನೇಮಿಸಿದ ಜಯಪ್ರಕಾಶ ಹೆಗಡೆ ಈಗ ಅಧ್ಯಕ್ಷರಾಗಿದ್ದಾರೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು ಅವರ ಕೆಲಸ. ಆದರೆ, ಅವರು ವರದಿ ನೀಡಿಲ್ಲ, ಕಾರ್ಯದರ್ಶಿನೂ ಸಹಿ ಮಾಡಿಲ್ಲ. ಅವರು ವರದಿ ಕೊಟ್ಟರೆ ನೋಡೋಣ. ನಾನು ಒಂದು ಸಾರಿ ವರದಿ ಕೇಳಿದ್ದೆ. ಅವರು ಕೊಡುತ್ತೇವೆ ಎಂದಿದ್ದರು. ಆದರೆ, ಆ ವರದಿಯನ್ನು ನಮ್ಮ ಸರ್ಕಾರಕ್ಕೆ ಕೊಡಲಿಲ್ಲ ಎಂದು ತಿಳಿಸಿದರು.

ಇದೇ ವೇಳೆ, ಕಲಬುರಗಿ, ಬೀದರ್ ಮತ್ತು ಯಾದಗಿರಿ ಪ್ರದೇಶದ ಕುರುಬರನ್ನು ಎಸ್‌ಟಿ ವರ್ಗಕ್ಕೆ ಸೇರಿಸಲು ನಮ್ಮ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂದು ಹೇಳಿದರು,

ಗೊಲ್ಲರು, ಕುರುಬರು ಮತ್ತು ಕೋಲಿ ವರ್ಗಗಳನ್ನು ಎಸ್ಟಿ ವರ್ಗಕ್ಕೆ ಸೇರಿಸಲು ಕೇಂದ್ರದ ಮೇಲೆ ತಮ್ಮ ಸರ್ಕಾರವು ಒತ್ತಡ ಹೇರುತ್ತಿದೆ ಎಂದರು.

ಎಲ್ಲಾ ಜಾತಿ, ವರ್ಗದ ಜನರು ಸಂಘಟಿತರಾಗಿ ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳಬೇಕು: ಸಿಎಂ

ಮಂಗಳವಾರ ನಗರದಲ್ಲಿ ಶೆಫರ್ಡ್ ಇಂಡಿಯಾ ಇಂಟರ್‌ನ್ಯಾಶನಲ್‌ನ 9ನೇ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಲ್ಲ ಜಾತಿ ಮತ್ತು ವರ್ಗಗಳ ಜನರು ಸಂಘಟಿತರಾಗಿ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ನಮ್ಮಲ್ಲಿ ಅವಕಾಶಗಳ ಹಂಚಿಕೆಯಲ್ಲಿ ತಾರತಮ್ಯವಿದೆ. ಅದನ್ನು ಸರಿದೂಗಿಸಲು ಸಂಘಟನೆ ಮತ್ತು ಸಮಾವೇಶಗಳು ಅಗತ್ಯವಿದೆ. “ನಾನು ರೂಪಿಸಿರುವ ಐದು ಗ್ಯಾರಂಟಿ ಯೋಜನೆಗಳು ಒಂದು ಸಮಾಜ, ಒಂದು ಧರ್ಮ, ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಜಾತಿ, ಸಮುದಾಯದ ಜನರ ಬದುಕಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದರು.

ಸಮಾಜವಾದಿ ನಾಯಕ ರಾಮ್ ಮನೋಹರ್ ಲೋಹಿಯಾ ಅವರು ಮಾತನಾಡಿ, ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಸಂಘಟಿತ ಸಮಾವೇಶಗಳ ನಡೆಸುವುದು ತಪ್ಪಲ್ಲ ಎಂದು ತಿಳಿಸಿದರು.

ಹಿಂದುಳಿದ ಸಮುದಾಯಗಳು ಸಂಘಟಿತರಾಗಿಲ್ಲದ ಕಾರಣ ಹಾಗೂ ನಾಯಕತ್ವವನ್ನು ಬೆಳೆಸಿಕೊಳ್ಳದ ಕಾರಣ ಅವರು ಹಕ್ಕುಗಳು ಮತ್ತು ರಾಜಕೀಯ ಅಧಿಕಾರದಿಂದ ವಂಚಿತರಾಗಿದ್ದಾರೆ. “ನಮ್ಮ ಸಮುದಾಯವು ರಾಜಕೀಯ ಇತಿಹಾಸ ಮತ್ತು ಸಾಂಸ್ಕೃತಿಕ ವೈಭವವನ್ನು ಹೊಂದಿದೆ. ಹಕ್ಕ ಬುಕ್ಕನಿಂದ ಹಿಡಿದು ಅಹಲ್ಯಾಬಾಯಿ ಹೋಳ್ಕರ್ ವರೆಗೆ ನಮ್ಮ ಸಮುದಾಯದಲ್ಲಿ ಮೇರು ವ್ಯಕ್ತಿತ್ವಗಳಿದ್ದಾರೆ. ಆದರೆ, ಸಂಘಟನೆಯ ಕೊರತೆಯಿಂದ ನಮಗೆ ನಮ್ಮ ಹಕ್ಕು ಸಿಗುತ್ತಿಲ್ಲ. ಸಂಘಟನೆ ಇಲ್ಲದಿದ್ದರೆ ಕಾಗಿನೆಲೆ ಗುರುಪೀಠವಾಗುತ್ತಿರಲಿಲ್ಲ ಎಂದರು.

ಪ್ರತಿಯೊಂದು ಸಮುದಾಯವೂ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಬೆಳೆದರೆ ಮಾತ್ರ ಸಮಾನತೆ ಸಾಧ್ಯ. ಪ್ರತಿಯೊಬ್ಬರೂ ತಮ್ಮ ಅಧಿಕಾರ ಮತ್ತು ಅವಕಾಶವನ್ನು ಪಡೆಯಬೇಕು. ನಮ್ಮದು ಜಾತಿ ಆಧಾರಿತ ಮತ್ತು ತಾರತಮ್ಯ ಸಮಾಜವಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com