ಮೈಸೂರು: ಮಹಿಷ ದಸರಾ ಆಚರಣೆ ವಿಚಾರವಾಗಿ ಬಿಜೆಪಿ- ಪ್ರಗತಿಪರ ಚಿಂತಕರ ನಡುವೆ ಜಟಾಪಟಿ

ಮಹಿಷ ದಸರಾ ಆಚರಣೆ ವಿಚಾರದಲ್ಲಿ ಬಿಜೆಪಿ ಮತ್ತು ಕರ್ನಾಟಕದ ಪ್ರಗತಿಪರ ಚಿಂತಕರ ನಡುವೆ ಇದೀಗ ಜಟಾಪಟಿ ಶುರುವಾಗಿದೆ. ಮಹಿಷ ದಸರಾ ಆಚರಣೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಪ್ರಗತಿಪರರು ಆಚರಣೆಯ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಮಹಿಷಾಸುರ
ಮಹಿಷಾಸುರ

ಮೈಸೂರು: ಮಹಿಷ ದಸರಾ ಆಚರಣೆ ವಿಚಾರದಲ್ಲಿ ಬಿಜೆಪಿ ಮತ್ತು ಕರ್ನಾಟಕದ ಪ್ರಗತಿಪರ ಚಿಂತಕರ ನಡುವೆ ಇದೀಗ ಜಟಾಪಟಿ ಶುರುವಾಗಿದೆ. ಮಹಿಷ ದಸರಾ ಆಚರಣೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಪ್ರಗತಿಪರರು ಆಚರಣೆಯ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಅಕ್ಟೋಬರ್ 13 ರಂದು ಚಾಮುಂಡಿ ಬೆಟ್ಟ ಹಾಗೂ ನಗರದಲ್ಲಿ ಮಹಿಷ ದಸರಾ ಆಚರಣೆಗೆ ಮಹಿಷ ದಸರಾ ಆಚರಣಾ ಸಮಿತಿ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಸಮಿತಿಯು ಜಿಲ್ಲಾಧಿಕಾರಿಗಳ ಅನುಮತಿ ಕೋರಿದೆ. 

ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ, ಮಹಿಷ ದಸರಾ ಆಚರಣೆಗೆ ಸರ್ಕಾರ ಅಡ್ಡಿ ಬರುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

ಆದರೆ, ಈ ವಿಚಾರ ಬಿಜೆಪಿ ಮತ್ತು ಬಲಪಂಥೀಯ ಗುಂಪುಗಳನ್ನು ಕೆರಳಿಸಿದ್ದು, ಮಹಿಷನನ್ನು ಚಾಮುಂಡೇಶ್ವರಿ ದೇವತೆ ಕೊಂದ ರಾಕ್ಷಸ ರಾಜ ಎಂದು ಹೇಳುತ್ತಿದ್ದಾರೆ. ಮಹಿಷ ದಸರಾ ಆಚರಣೆಯು ದೇವಿಗೆ ಅವಮಾನ ಮಾಡಿದ ಹಾಗಾಗುತ್ತದೆ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಆರೋಪಿಸಿದ್ದಾರೆ.

ಆದಾಗ್ಯೂ, ಪ್ರಗತಿಪರ ಚಿಂತಕರು, 'ಮಹಿಷನನ್ನು ರಾಕ್ಷಸ ಎಂದು ತಪ್ಪಾಗಿ ಚಿತ್ರಿಸಲಾಗಿದೆ. ಮೈಸೂರು ನಗರವು ರಾಜ ಮಹಿಷನಿಂದಲೇ ತನ್ನ ಹೆಸರನ್ನು ಪಡೆದುಕೊಂಡಿದೆ. ಜನರು ಅವರ ಆಡಳಿತವನ್ನು ಪ್ರೀತಿಸುತ್ತಿದ್ದರು ಮತ್ತು ಆದ್ದರಿಂದ ನಗರಕ್ಕೆ ಅವರ ಹೆಸರನ್ನೇ ಇಡಲಾಗಿದೆ' ಎಂದಿದ್ದಾರೆ.

ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಮಹಿಷ ದಸರಾ ಆಚರಣೆಯನ್ನು ತಡೆಯಲು ಅಕ್ಟೋಬರ್ 13ರಂದು ಚಾಮುಂಡಿ ಚಲೋ ಕಾರ್ಯಕ್ರಮಕ್ಕೆ ಕರೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಮಹಿಷ ದಸರಾ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮಹಿಷ ದಸರಾ ಸಮಿತಿ ಅಧ್ಯಕ್ಷ ಪುರುಷೋತ್ತಮ್, ಚಾಮುಂಡಿ ಬೆಟ್ಟದ ಆಸ್ತಿ ಅವರ ತಂದೆಗೆ ಸೇರಿದ್ದಲ್ಲ.  'ಘೋಷಿತ ದಿನಾಂಕದಂದು ನಾವು ಮಹಿಷ ದಸರಾವನ್ನು ಆಚರಿಸುತ್ತೇವೆ. ಅವರು ನಮ್ಮನ್ನು ಹೇಗೆ ತಡೆಯುತ್ತಾರೆ ಎಂದು ನಾವು ನೋಡುತ್ತೇವೆ. ನಾವು  ಮುಖಾಮುಖಿಗೆ ಸಿದ್ಧರಿದ್ದೇವೆ ಎಂದು ಹೇಳಿದರು.

'ನಾವು ಯಾವುದೇ ರೀತಿಯ ಘರ್ಷಣೆಗೆ ಸಿದ್ಧರಿದ್ದೇವೆ. ಆದರೆ, ಅದಕ್ಕೆ ಬೇರೆ ಬೇರೆ ವೇದಿಕೆಗಳಿವೆ. ಸಂಸದ ಪ್ರತಾಪ್ ಸಿಂಹ ಅವರು ಧರ್ಮದ ಹೆಸರಿನಲ್ಲಿ ಘರ್ಷಣೆ ಸೃಷ್ಟಿಸಬಾರದು. ಮಹಿಷ ದಸರಾಗೆ ಬಹಳ ಹಿಂದೆಯೇ ಅನುಮತಿ ಕೇಳಲಾಗಿತ್ತು. ಮೊದಲು ಚಾಮುಂಡಿ ಬೆಟ್ಟದ ಮೇಲಿರುವ ಮಹಿಷನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮೈಸೂರಿನ ಟೌನ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಇದನ್ನು ತಡೆಯಲು ಪ್ರತಾಪಸಿಂಹ ಯಾರು? ಚಾಮುಂಡಿ ಬೆಟ್ಟ ಪ್ರತಾಪ ಸಿಂಹ ಅವರ ತಂದೆಯ ಆಸ್ತಿಯಾ? ಧಾರ್ಮಿಕ ಆಚರಣೆಗಳನ್ನು ನಡೆಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ’ ಎಂದು ಪುರುಷೋತ್ತಮ್ ಪ್ರಶ್ನಿಸಿದ್ದಾರೆ.

ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಎಚ್‌ಆರ್ ಮಹೇಶ್ ಮಾತನಾಡಿ, ಬಿಜೆಪಿ ಸಂಸದ ಪ್ರತಾಪಸಿಂಹ ಅವರು ಮಹಿಷನ ವಂಶಕ್ಕೆ ಸೇರಿದವರು. ಆದರೆ, ಬಿಜೆಪಿಯ ಬ್ರಾಹ್ಮಣ್ಯ, ಮನುವಾದಕ್ಕೆ ಸಿಲುಕಿದ್ದಾರೆ. ಅವರಿಗೆ ನಿಜವಾದ ಇತಿಹಾಸ ಗೊತ್ತಿಲ್ಲ. ಒಮ್ಮೆ ತಿಳಿದರೆ ಸಂಭ್ರಮಿಸಲು ಮುಂದೆ ಬರುತ್ತಾರೆ ಎಂದಿದ್ದಾರೆ.

'ಮಹಿಷನನ್ನು ರಾಕ್ಷಸ ಎಂದು ಬಿಂಬಿಸಿದ ಸಮುದಾಯಕ್ಕೆ ಸೇರಿದವರಾಗಿರುವ ಮೈಸೂರಿನ ಬಿಜೆಪಿ ಶಾಸಕ ರವಿ ಶ್ರೀವತ್ಸ ಅವರು ತಮ್ಮ ರಾಜಕೀಯ ದೃಷ್ಟಿಕೋನವನ್ನು ಬದಲಾಯಿಸುವ ಸಾಧ್ಯತೆ ಕಡಿಮೆಯಿದೆ. ಆದರೆ, ಪ್ರತಾಪ್ ಸಿಂಹ ಅವರು ಬಿಜೆಪಿಯ ಭಾಗವಾಗಿದ್ದರೂ, ತಾವು ಶೂದ್ರ ಸಮುದಾಯಕ್ಕೆ (ಪರಿಶಿಷ್ಟ ಜಾತಿ) ಸೇರಿದ ಕಾರಣ ಕಾಲಾನಂತರದಲ್ಲಿ ತಮ್ಮ ರಾಜಕೀಯ ನಿಲುವನ್ನು ಬದಲಾಯಿಸುವ ನಿರೀಕ್ಷೆಯಿದೆ' ಎಂದು ಮಹೇಶ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com