ಆನೇಕಲ್ ಪಟಾಕಿ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರು ಪರಿಹಾರ; ಡಿಸಿಎಂ ಡಿಕೆ ಶಿವಕುಮಾರ್- ಇಂದು ಸ್ಥಳಕ್ಕೆ ಸಿಎಂ ಭೇಟಿ

ಆನೇಕಲ್ ನಲ್ಲಿ 15 ಮಂದಿ ಬಲಿ ತೆಗೆದುಕೊಂಡಿರುವ ಪಟಾಕಿ ದುರಂತ ನಡೆದ ಅತ್ತಿಬೆಲೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶನಿವಾರ ರಾತ್ರಿ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು:  ಆನೇಕಲ್ ನಲ್ಲಿ 15 ಮಂದಿ ಬಲಿ ತೆಗೆದುಕೊಂಡಿರುವ ಪಟಾಕಿ ದುರಂತ ನಡೆದ ಅತ್ತಿಬೆಲೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶನಿವಾರ ರಾತ್ರಿ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ಪಟಾಕಿ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ. ದುರಂತ ನಡೆದ ಸ್ಥಳದಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು ಘಟನೆ ಬಗ್ಗೆ ಮಾಹಿತಿ ನೀಡಿದರು.

ಇದೊಂದು ಘೋರ ದುರಂತ. ಅಮಾಯಕರು ಮೃತಪಟ್ಟಿದ್ದಾರೆ. ಪಟಾಕಿ ಗೋದಾಮಿನ ಒಳಗೆ ಇನ್ನೂ ಕೆಲವರು ಸಿಲುಕಿದ್ದಾರೆ ಎಂಬ ಮಾಹಿತಿ ಇದೆ. ಹಿಂಬದಿ ಬಾಗಿಲು ಒಡೆದು ಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಘಟನೆ ನಡೆದಾಗ 20ಕ್ಕೂ ಹೆಚ್ಚು ಕೆಲಸಗಾರರು ಗೋದಾಮಿನಲ್ಲಿದ್ದರು. ಅವರಲ್ಲಿ ಹೆಚ್ಚಿನವರು ತಮಿಳುನಾಡಿನವರು. ಪಟಾಕಿ ಖರೀದಿಸಲು ಬಂದಿದ್ದ ಗ್ರಾಹಕರು ಇದ್ದಾರೆ ಎಂಬ ವರದಿಗಳಿವೆ. ಪಟಾಕಿ ಮಳಿಗೆಗೆ ಅನುಮತಿ ಪಡೆಯಲಾಗಿದೆ. ಆದರೆ, ಗೋದಾಮಿಗೆ ಪಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕುರಿತು ಅಧಿಕಾರಿಗಳು ತನಿಖೆ ಮಾಡಲಿದ್ದಾರೆ ಎಂದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಟಾಕಿ ಮಳಿಗೆ ಮಾಲೀಕ ನವೀನ್‌ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಅನಾಹುತದಿಂದ ಬೆಂಗಳೂರು ಚನ್ನೈ ಎರಡೂ ಕಡೆ ವಾಹನಗಳ ಸಂಚಾರಕ್ಕೆ ತೊಂದರೆ ಆಗಿತ್ತು. ಟ್ರಾಫಿಕ್ ಜಾಮ್ ಆಗಿತ್ತು. ಈಗ ವಾಹನ ದಟ್ಟಣೆ ನಿವಾರಿಸಲಾಗಿದ್ದು, ಸಂಚಾರ ಸುಗಮವಾಗಿದೆ ಎಂದು ಶಿವಕುಮಾರ್ ತಿಳಿಸಿದರು. ದೀಪಾವಳಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪಟಾಕಿ ಅಂಗಡಿಗಳು, ಗೋಡೌನ್ ಗಳಲ್ಲಿ ಅಗ್ನಿ ಅನಾಹುತ ನಿಯಂತ್ರಣ ನಿಯಮಗಳ ಪಾಲನೆ ಬಗ್ಗೆ ಮುಂಜಾಗರೂಕ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com