ಬೆಂಗಳೂರಿನಲ್ಲಿ ಪಟಾಕಿ ದುರಂತ; ಸಾವಿನ ಸಂಖ್ಯೆ 12ಕ್ಕೆ ಏರಿಕೆ, ಸ್ಥಳಕ್ಕೆ ನಾಳೆ ಸಿಎಂ ಸಿದ್ದರಾಮಯ್ಯ ಭೇಟಿ

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಶನಿವಾರ ಪಟಾಕಿ ಅನ್ ಲೋಡ್ ಮಾಡುತ್ತಿದ್ದ ವೇಳೆ ಬೆಂಕಿ ಹೊತ್ತಿಕೊಂಡಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಪಟಾಕಿ ದುರಂತ
ಪಟಾಕಿ ದುರಂತ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಶನಿವಾರ ಪಟಾಕಿ ಅನ್ ಲೋಡ್ ಮಾಡುತ್ತಿದ್ದ ವೇಳೆ ಬೆಂಕಿ ಹೊತ್ತಿಕೊಂಡಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ಇಂದು ಮಧ್ಯಾಹ್ನ 3.30ರ ಸುಮಾರಿಗೆ ನವೀನ್ ಎಂಬುವವರಿಗೆ ಸೇರಿದ ಪಟಾಕಿ ಅಂಗಡಿಯಲ್ಲಿ ಈ ಅವಘಡ ಸಂಭವಿಸಿದ್ದು, ಲಾರಿಯಿಂದ ಪಟಾಕಿ ಅನ್ ಲೋಡ್ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸಿದ್ದು, ನಾಲ್ಕು ಅಂಗಡಿಗಳು ಸುಟ್ಟು ಭಸ್ಮವಾಗಿವೆ.

20 ಜನ ಕಾರ್ಮಿಕರ ಪೈಕಿ 12 ಜನ ಸಜೀವ ದಹನವಾಗಿದ್ದು, ಇನ್ನೂ 4 ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.  ನಾಲ್ಕು ಜನ ಮಾತ್ರ ಬೆಂಕಿಯಿಂದ ತಪ್ಪಿಸಿಕೊಂಡಿದ್ದಾರೆ. 

ಅಗ್ನಿ ದುರಂತದಲ್ಲಿ ಕೋಟ್ಯಂತರ ಮೌಲ್ಯದ ಪಟಾಕಿ ಅಗ್ನಿಗಾಹುತಿಯಾಗುವುದರೊಂದಿಗೆ 1 ಕ್ಯಾಂಟರ್, 2 ಬೊಲೆರೋ, 4 ಬೈಕ್​ಗಳು ಸಹ ಬೆಂಕಿಗಾಹುತಿ ಆಗಿವೆ. ದೊಡ್ಡ ಮಳಿಗೆಯಾಗಿದ್ದರಿಂದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು, ವಾಹನ ಸವಾರರಿಗೆ ಪಟಾಕಿ ಅಂಗಡಿಯ ದುರಂತದ ಎಫೆಕ್ಟ್ ತಟ್ಟಿದ್ದು, ಅತ್ತಿಬೆಲೆ ಕಡೆ ತೆರಳುವ ಮಾರ್ಗದಲ್ಲಿ ಟ್ರಾಫಿಕ್​ ಜಾಮ್ ಉಂಟಾಗಿದೆ.

ಇನ್ನು ಘಟನೆಯಲ್ಲಿ ಮೃತ ಕಾರ್ಮಿಕರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾಳೆ ದುರ್ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ಆನೇಕಲ್ ಸಮೀಪ ಅತ್ತಿಬೆಲೆಯ ಪಟಾಕಿ ಸಂಗ್ರಹ ಮಳಿಗೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 12 ಮಂದಿ ಮೃತಪಟ್ಟ ಸುದ್ದಿ ತಿಳಿದು ಅತೀವ ನೋವಾಯಿತು. ದುರ್ಘಟನೆ ನಡೆದ ಸ್ಥಳಕ್ಕೆ ನಾಳೆ ಭೇಟಿನೀಡಿ, ಪರಿಶೀಲನೆ ನಡೆಸಲಿದ್ದೇನೆ. ಮೃತ ಕಾರ್ಮಿಕರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಸಿಎಂ ಸಿದ್ದಾರಾಮಯ್ಯ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com