ಬೆಂಗಳೂರಿನ ಅತ್ತಿಬೆಲೆಯಲ್ಲಿ ಪಟಾಕಿ ದುರಂತ; ಸಾವಿನ ಸಂಖ್ಯೆ 10ಕ್ಕೆ ಏರಿಕೆ
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಪಟಾಕಿ ಅನ್ ಲೋಡ್ ಮಾಡುತ್ತಿದ್ದ ವೇಳೆ ನಾಲ್ಕು ಪಟಾಕಿ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ನವೀನ್ ಎಂಬುವವರಿಗೆ ಸೇರಿದ ಪಟಾಕಿ ಅಂಗಡಿಯಲ್ಲಿ ಈ ಅವಘಡ ಸಂಭವಿಸಿದ್ದು, ಲಾರಿಯಿಂದ ಪಟಾಕಿ ಅನ್ ಲೋಡ್ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸಿದ್ದು, ನಾಲ್ಕು ಅಂಗಡಿಗಳು ಸುಟ್ಟು ಭಸ್ಮವಾಗಿವೆ.
20 ಜನ ಕಾರ್ಮಿಕರ ಪೈಕಿ 10 ಜನ ಸಜೀವದಹನವಾಗಿದ್ದು, ಇನ್ನೂ 6 ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನಾಲ್ಕು ಜನ ಮಾತ್ರ ಬೆಂಕಿಯಿಂದ ತಪ್ಪಿಸಿಕೊಂಡಿದ್ದಾರೆ.
ಅಗ್ನಿ ದುರಂತದಲ್ಲಿ ಕೋಟ್ಯಂತರ ಮೌಲ್ಯದ ಪಟಾಕಿ ಅಗ್ನಿಗಾಹುತಿಯಾಗುವುದರೊಂದಿಗೆ 1 ಕ್ಯಾಂಟರ್, 2 ಬೊಲೆರೋ, 4 ಬೈಕ್ಗಳು ಸಹ ಬೆಂಕಿಗಾಹುತಿ ಆಗಿವೆ. ದೊಡ್ಡ ಮಳಿಗೆಯಾಗಿದ್ದರಿಂದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು, ವಾಹನ ಸವಾರರಿಗೆ ಪಟಾಕಿ ಅಂಗಡಿ ದುರಂತ ಎಫೆಕ್ಟ್ ತಟ್ಟಿದ್ದು, ಅತ್ತಿಬೆಲೆ ಕಡೆ ತೆರಳುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ