
ಹಾವೇರಿ: ಗಣೇಶೋತ್ಸವ ಆಚರಣೆಯನ್ನು ತಡೆಯಲು ಯತ್ನಿಸುತ್ತಿರುವವರಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದು, ಯಾರಾದರೂ ಹಿಂದೂ ಭಾವನೆಗಳಿಗೆ ಧಕ್ಕೆ ತಂದರೆ ಸುಮ್ಮನಿರುವುದಿಲ್ಲ. ನಮ್ಮ ಮೈಯಲ್ಲಿ ಸನಾತನ ಧರ್ಮದ ರಕ್ತ ಹರಿಯುತ್ತಿದೆ ಎಂದಿದ್ದಾರೆ.
ನಮ್ಮ ಸನಾತನ ಧರ್ಮವನ್ನು ಮಲೇರಿಯಾಕ್ಕೆ ಹೋಲಿಸಿದರೆ, ನಾವು ಸುಮ್ಮನಿರಬೇಕಾ? ಸನಾತನ ಧರ್ಮ ನಮ್ಮ ನರ ನಾಡಿಗಳಲ್ಲಿ ಹರಿಯುತ್ತಿದೆ. ಯಾರಾದರೂ ನಮ್ಮ ಭಾವನೆಗಳಿಗೆ ಧಕ್ಕೆ ತಂದರೆ ಸುಮ್ಮನಿರುವುದಿಲ್ಲ ಎಂದು ಹೇಳಿದರು.
ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ಶನಿವಾರ ನಡೆದ ಹಿಂದೂ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಗಣಪತಿ ಆಚರಣೆ ತಡೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.
'ನಾವು ಈ ಪ್ರಪಂಚದ ಎಲ್ಲಾ ಮಾನವರ ಕಲ್ಯಾಣವನ್ನು ಉತ್ತೇಜಿಸುವ ಸನಾತನ ಧರ್ಮಕ್ಕೆ ಸೇರಿದವರು. ಎಲ್ಲಾ ಧರ್ಮಗಳಿಗೆ ಸೇರಿದ ಜನರು ನಮ್ಮಲ್ಲಿ ವಾಸಿಸುತ್ತಿದ್ದಾರೆ. ಆದರೆ, ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿ ಒಂದೇ ಧರ್ಮಕ್ಕೆ ಸೇರಿದ ಜನರು ಇದ್ದಾರೆ. ಅಲ್ಲಿ ಬದುಕುವುದು ಕಷ್ಟ. ಆದರೆ, ನಾವು ಎಲ್ಲರನ್ನೂ ಒಪ್ಪಿಕೊಂಡು ಬಾಳುತ್ತಿದ್ದೇವೆ' ಎಂದಿದ್ದಾರೆ.
'ಇಲ್ಲಿ ನಾವು ಎಲ್ಲರನ್ನು ಒಪ್ಪಿಕೊಂಡಿದ್ದೇವೆ. ಸನಾತನ ಧರ್ಮದ ಈ ಸ್ವಭಾವಕ್ಕೆ ಕೆಲವರು ಇದನ್ನು ಡೆಂಗ್ಯೂ ಮತ್ತು ಮಲೇರಿಯಾ ಎಂದು ಕರೆಯುತ್ತಾರೆ. ಅವರಿಗೆ ಇತರ ಧರ್ಮಗಳನ್ನು ಅಂತಹ ಕಾಯಿಲೆಗಳಿಗೆ ಹೋಲಿಸುವ ಧೈರ್ಯವಿದೆಯೇ? ಇತರ ಧರ್ಮಗಳನ್ನು ಅಂತಹ ಕಾಯಿಲೆಗಳಿಗೆ ಹೋಲಿಸಿದ್ದಿದ್ದರೆ, ಇಷ್ಟೊತ್ತಿಗೆ ಅವರ ಗತಿ ಏನಾಗುತ್ತಿತ್ತು?' ಎಂದು ಬೊಮ್ಮಾಯಿ ಕೇಳಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವುದೇ ದುಷ್ಟ ಶಕ್ತಿಗೆ ತಲೆ ಎತ್ತಲು ಬಿಟ್ಟಿರಲಿಲ್ಲ. ಆದರೆ, ಈಗ ರಾಜ್ಯದಲ್ಲಿ ಅರಾಜಕತೆ ಇದೆ. ಎಲ್ಲಾ ಕಡೆ ಕೋಮ ಗಲಭೆ ಆಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಇಂತಹ ಘಟನೆಗಳು ನಡೆಯುತ್ತಿವೆ. ಕಾಂಗ್ರೆಸ್ ಆರಿಸಿ ಬಂದ ದಿನವೇ ಬೆಳಗಾವಿಯಲ್ಲಿ ಪಾಕಿಸ್ತಾನ ಧ್ವಜ ಹಾರಿದೆ. ಪಾಕಿಸ್ತಾನದ ಧ್ವಜ ಹಿಡಿದವರು ಸರ್ಕಾರದ ಮೊಮ್ಮಕ್ಕಳು ಎಂದರು.
2020ರ ಡಿಜೆ ಹಳ್ಳಿ-ಕೆಜಿ ಹಳ್ಳಿ ಹಿಂಸಾಚಾರವನ್ನು ಉಲ್ಲೇಖಿಸಿದ ಅವರು, 'ಬೆಂಗಳೂರಿನಲ್ಲಿ ನಡೆದ ಗಲಭೆಯ ಹಿಂದಿನ ಅಪರಾಧಿಗಳನ್ನು ನಾವು ಬಿಡಲಿಲ್ಲ. ಆದರೆ, ಕಾಂಗ್ರೆಸ್ ನಾಯಕರು ಆ ಎರಡು ಸ್ಥಳಗಳಲ್ಲಿ ಬೆಂಕಿ ಹಚ್ಚಿ ಲೂಟಿ ಮಾಡಿದವರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಂತೆ ಪತ್ರ ಬರೆದರು' ಎಂದು ಬೊಮ್ಮಾಯಿ ಆರೋಪಿಸಿದರು.
Advertisement