ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಿಂದ ಜಲಾಶಯಗಳು ಭರ್ತಿ; ಶೇ 58ರಷ್ಟು ನೀರಿನ ಮಟ್ಟ ಏರಿಕೆ

ಅಕ್ಟೋಬರ್ ಮಧ್ಯಭಾಗವಾಗಿದ್ದರೂ, ಇನ್ನೂ ಬಿರು ಬೇಸಿಗೆಯಂತೆ ಭಾಸವಾಗುತ್ತಿದೆ. ರಾಜ್ಯದ ಕೆಲವು ಭಾಗಗಳು ಬಿಸಿಲಿನ ಏರಿಕೆಯಿಂದ ತತ್ತರಿಸುತ್ತಿದ್ದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಅಕ್ಟೋಬರ್ 1 ರಿಂದ 10 ರವರೆಗೆ ಉತ್ತಮ ಮಳೆಯಾಗಿದೆ. ಕಳೆದ 10 ದಿನಗಳಲ್ಲಿ ಜಲಾಶಯ ಶೇ 58 ರಷ್ಟು ಭರ್ತಿಯಾಗಿದೆ.
ಕೆಆರ್‌ಎಸ್ ಅಣೆಕಟ್ಟೆ
ಕೆಆರ್‌ಎಸ್ ಅಣೆಕಟ್ಟೆ

ಬೆಂಗಳೂರು: ಅಕ್ಟೋಬರ್ ಮಧ್ಯಭಾಗವಾಗಿದ್ದರೂ, ಇನ್ನೂ ಬಿರು ಬೇಸಿಗೆಯಂತೆ ಭಾಸವಾಗುತ್ತಿದೆ. ರಾಜ್ಯದ ಕೆಲವು ಭಾಗಗಳು ಬಿಸಿಲಿನ ಏರಿಕೆಯಿಂದ ತತ್ತರಿಸುತ್ತಿದ್ದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಅಕ್ಟೋಬರ್ 1 ರಿಂದ 10 ರವರೆಗೆ ಉತ್ತಮ ಮಳೆಯಾಗಿದೆ. ಜಲಾಶಯದ ಮಟ್ಟವು ಕ್ರಮೇಣ ಹೆಚ್ಚುತ್ತಿರುವ ಕಾರಣ ಕರ್ನಾಟಕ ಮತ್ತು ತಮಿಳುನಾಡಿಗೆ ಇದೀಗ ನಿರಾಳವಾದಂತಾಗಿದೆ. ಕಳೆದ 10 ದಿನಗಳಲ್ಲಿ ಜಲಾಶಯ ಶೇ 58 ರಷ್ಟು ಭರ್ತಿಯಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್ಎನ್‌ಡಿಎಂಸಿ) ದಾಖಲೆಗಳು ಕಾವೇರಿ ಜಲಾನಯನ ಪ್ರದೇಶದಲ್ಲಿ ಸದ್ಯ ನೀರಿನ ಸಂಗ್ರಹಣೆ ಮಟ್ಟ 66.88 ಟಿಎಂಸಿ ಅಡಿ ಇದೆ ಎಂದು ತೋರಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 110.30 ಟಿಎಂಸಿ ಅಡಿ ಇತ್ತು. ಆಗಸ್ಟ್ 31 ರಂದು ಶೇ 63 ರಷ್ಟಿದ್ದ ಜಲಾಶಯದ ನೀರಿನ ಮಟ್ಟವು ಸೆಪ್ಟೆಂಬರ್ 25 ಕ್ಕೆ ಶೇ 52 ರಷ್ಟಕ್ಕೆ ಇಳಿದಿದೆ ಮತ್ತು ಅಕ್ಟೋಬರ್ 2 ರಿಂದ ಶೇ 54ಕ್ಕೆ ಏರಿದೆ ಎಂದು ದಾಖಲೆಗಳು ತೋರಿಸಿವೆ.

ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ದಾಖಲೆಗಳ ಪ್ರಕಾರ, ಅಕ್ಟೋಬರ್ 1 ರಿಂದ ಇಲ್ಲಿಯವರೆಗೆ ಒಟ್ಟಾರೆಯಾಗಿ ರಾಜ್ಯದಲ್ಲಿ ಶೇ 51 ರಷ್ಟು ಮಳೆ ಕೊರತೆ ದಾಖಲಾಗಿದೆ. ರಾಜ್ಯದಲ್ಲಿ 29.8 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಸಾಮಾನ್ಯವಾಗಿ 61.2ಮಿಮೀ ಮಳೆಯಾಗುತ್ತಿತ್ತು. ಕಾವೇರಿ ನದಿಯ ಜನ್ಮಸ್ಥಳವಾದ ಕೊಡಗಿನಲ್ಲಿ ಇದೇ ಅವಧಿಯಲ್ಲಿ ಶೇ 86ರಷ್ಟು ಅಧಿಕ ಮಳೆ ದಾಖಲಾಗಿದೆ. ಕೊಡಗಿನಲ್ಲಿ 149.6 ಮಿಮೀ. ಮಳೆಯಾಗಿದ್ದು, ಅಲ್ಲಿ ವಾಡಿಕೆಯಾಗಿ 80.4 ಮಿಮೀ. ಮಳೆಯಾಗುತ್ತಿತ್ತು. ಮೈಸೂರಿನಲ್ಲಿ ಶೇ 73 ರಷ್ಟು ಅಧಿಕ ಮಳೆಯಾಗಿದ್ದು, ಹಾಸನದಲ್ಲಿ ಶೇ 52ರಷ್ಟು ಅಧಿಕ ಮಳೆಯಾಗಿದೆ.

ನೈಋತ್ಯ ಮಾನ್ಸೂನ್ (ಜೂನ್-ಸೆಪ್ಟೆಂಬರ್) ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟಾರೆಯಾಗಿ ಶೇ 25ರಷ್ಟು ಮಳೆ ಕೊರತೆ ದಾಖಲಾಗಿದ್ದರೆ, ಕೊಡಗಿನಲ್ಲಿ ಶೇ 42 ರಷ್ಟು ಕೊರತೆಯಿದೆ ಎಂದು ಐಎಂಡಿ ಮಾಹಿತಿ ತಿಳಿಸಿದೆ.

ಅಕ್ಟೋಬರ್‌ನಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಮತ್ತು ಆರ್ದ್ರತೆಯ ಮಟ್ಟ ದಾಖಲಾಗುತ್ತಿದೆ.

ಹವಾಮಾನ ಇಲಾಖೆ ಪ್ರಕಾರ, ಬೆಂಗಳೂರು, ಚಿತ್ರದುರ್ಗ, ಧಾರವಾಡ, ಹೊನ್ನಾವರ, ಕಾರವಾರ, ಬೆಳಗಾವಿ, ರಾಯಚೂರು ಮತ್ತು ವಿಜಯಪುರದಲ್ಲಿ ಗರಿಷ್ಠ ತಾಪಮಾನದಲ್ಲಿ 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಶೇ 86ರಷ್ಟು ಅಧಿಕ ಮಳೆಯಾಗಿದ್ದರೂ, ಮಡಿಕೇರಿಯಲ್ಲಿ ತಾಪಮಾನದಲ್ಲಿ 5 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ.

ಎಲ್ ನಿನೋ ಕಾರಣದಿಂದಾಗಿ ರಾಜ್ಯದಾದ್ಯಂತ ಹಗಲಿನ ತಾಪಮಾನದಲ್ಲಿ ಏರಿಕೆಯಾಗಿದ್ದು, 30-35 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ ಎಂದು ಐಎಂಡಿ ವಿಜ್ಞಾನಿ ಎ ಪ್ರಸಾದ್ ಹೇಳಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಅಧಿಕ ಮಳೆಯಾಗಿತ್ತು. ಈ ವರ್ಷ, ನೈರುತ್ಯ ಮುಂಗಾರು ತಡವಾಗಿ ಮತ್ತು ವಾಡಿಕೆಗಿಂತ ಕಡಿಮೆ ಮಳೆಯೊಂದಿಗೆ ಆಗಮಿಸಿದ್ದಲ್ಲದೆ, ಈ ಬಾರಿ ಕೊನೆಗೊಳ್ಳುವುದು ಕೂಡ ವಿಳಂಬವಾಗಿದೆ.

'ಸಾಮಾನ್ಯವಾಗಿ ನೈರುತ್ಯ ಮುಂಗಾರು ಸೆಪ್ಟೆಂಬರ್ 30ಕ್ಕೆ ಕೊನೆಗೊಂಡು, ಅಕ್ಟೋಬರ್ 1ರಿಂದ ಈಶಾನ್ಯ ಮಾನ್ಸೂನ್ ಆರಂಭವಾಗುತ್ತಿತ್ತು. ಆದರೆ, ಈ ವರ್ಷ ವಿಳಂಬವಾಗಿದೆ. ಆದರೆ, ಬೆಂಗಳೂರು ಹೊರವಲಯ ಮತ್ತು ಘಟ್ಟ ಪ್ರದೇಶಗಳಲ್ಲಿ ರಾತ್ರಿ ವೇಳೆಯಲ್ಲಿ ಬೀಳುವ ಮಳೆಯಿಂದ ಇದನ್ನು ಸರಿದೂಗಿಸಲಾಗುತ್ತದೆ. ಶಾಖ ಸೂಚ್ಯಂಕದ ಪ್ರಕಾರ, ಈ ಋತುವಿನಲ್ಲಿ ತಾಪಮಾನದಲ್ಲಿ 1.5 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ' ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com