ಪರಶುರಾಮ ಪ್ರತಿಮೆ ವಿವಾದ: ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ

ಕಾರ್ಕಳ ಕ್ಷೇತ್ರದ ಬೈಲೂರಿನ ಥೀಮ್ ಪಾರ್ಕ್‌ನಲ್ಲಿ ಅಪೂರ್ಣ ಪ್ರತಿಮೆ ಸ್ಥಾಪಿಸುವ ಮೂಲಕ ಪರಶುರಾಮ ದೇವರಿಗೆ ಅವಮಾನ ಮಾಡಲಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಂಗಳವಾರ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್

ಉಡುಪಿ: ಕಾರ್ಕಳ ಕ್ಷೇತ್ರದ ಬೈಲೂರಿನ ಥೀಮ್ ಪಾರ್ಕ್‌ನಲ್ಲಿ ಅಪೂರ್ಣ ಪ್ರತಿಮೆ ಸ್ಥಾಪಿಸುವ ಮೂಲಕ ಪರಶುರಾಮ ದೇವರಿಗೆ ಅವಮಾನ ಮಾಡಲಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಂಗಳವಾರ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಪರಶುರಾಮನ ಪ್ರತಿಮೆ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಕ್ಟೋಬರ್ 14ರಂದು ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರವು ಪ್ರತಿಮೆಯ ಮೇಲಿನ ಅರ್ಧ ಭಾಗವನ್ನು ತೆರವುಗೊಳಿಸಿದೆ. ಮೂಲ ವಿನ್ಯಾಸದ ಮಾನದಂಡಗಳಿಗೆ ನವೀಕರಿಸಲು ಪ್ರತಿಮೆಯನ್ನು ಮೂಲತಃ ತಯಾರಿಸಿದ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಪ್ರಮೋದ್ ಮುತಾಲಿಕ್, ತುಳುನಾಡಿನ ಸೃಷ್ಟಿಕರ್ತ ಎಂದು ನಂಬಲಾದ ಪರಶುರಾಮನಿಗೆ ಪ್ರತಿಷ್ಠಾಪನೆ ವೇಳೆ ಸಚಿವರಾಗಿದ್ದ ಸುನೀಲ್ ಕುಮಾರ್ ಅವರು ಅಪಾರ ಅವಮಾನ ಮಾಡಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಶಾಸಕ ಸ್ಥಾನಕ್ಕೆ ಅಪಖ್ಯಾತಿ ತಂದಿದ್ದು, ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಮೆ ನಿರ್ಮಾಣಕ್ಕೆ ಒಂದು ವರ್ಷ ಬೇಕು ಎಂದು ಎಂಜಿನಿಯರ್‌ಗಳು ಹೇಳಿದ್ದರೂ, 41 ದಿನಗಳಲ್ಲಿ ಎಲ್ಲವನ್ನೂ ಪೂರ್ಣಗೊಳಿಸಲಾಗಿದೆ. ಕಾರ್ಕಳ ತಾಲ್ಲೂಕಿನ ಬೈಲೂರಿನ ಉಮ್ಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಮತ್ತು ಪ್ರತಿಮೆ ಸ್ಥಾಪನೆಗೆ ಅನುಮತಿಯನ್ನೂ ಪಡೆದಿಲ್ಲ ಎಂದು ಆರೋಪಿಸಿದರು.

ಪ್ರತಿಮೆಯ ಸುತ್ತಲಿನ ವಿವಾದದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಆ ಸ್ಥಳದಲ್ಲಿ ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪನೆ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥರು ಕೋರಿದರು.

ಶ್ರೀರಾಮ ಸೇನೆ ಮುಖಂಡರಾದ ಗಂಗಾಧರ ಕುಲಕರ್ಣಿ, ಆನಂದ ಶೆಟ್ಟಿ ಅಡ್ಯಾರ್, ಜಯರಾಮ ಅಂಬೆಕಲ್ಲು ಉಪಸ್ಥಿತರಿದ್ದರು.

ಏನಿದು ವಿವಾದ?

ಇದೇ ವರ್ಷ ಜನವರಿ 27ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 33 ಅಡಿ ಎತ್ತರದ 15 ಟನ್ ತೂಕದ ಪರಶುರಾಮನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ್ದರು. ಆಗ ಸಚಿವರೂ ಆಗಿದ್ದ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ನೇತೃತ್ವದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆದಿತ್ತು. ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಕ್ಕೆ 15 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಪ್ರತಿಮೆಗೆಂದೇ 2 ಕೋಟಿ ರೂ. ವ್ಯಯಿಸಲಾಗಿದೆ. ಉಪುಡಿಯ ನಿರ್ಮಿತಿ ಕೇಂದ್ರವು ಇದರ ಕಾಮಗಾರಿಯ ಹೊಣೆ ಹೊತ್ತುಕೊಂಡಿದೆ.

ಪರಶುರಾಮ ಪ್ರತಿಮೆ ಕಾಮಗಾರಿ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು.

ಪರಶುರಾಮ ಪ್ರತಿಮೆಯು ಅರ್ಧ ನಕಲಿ- ಅರ್ಥ ನಕಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದರು.

ಸೆಪ್ಟೆಂಬರ್ 23ರಂದು ಪರಶುರಾಮ ಪ್ರತಿಮೆ ಇರುವ ಥೀಂ ಪಾರ್ಕ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದ ಅವರು, ಪರಶುರಾಮನ ಪ್ರತಿಮೆಯ ಕೈ, ಮುಖ ಸೇರಿದಂತೆ ಪ್ರತಿಮೆಯ ಅರ್ಧ ಭಾಗವನ್ನೇ ಬದಲಿಸಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com