ಸಿಂಗಾಪುರದಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನ ಟೇಕಾಫ್ ಆದ 80 ನಿಮಿಷಗಳ ನಂತರ ಮತ್ತೆ ಹಿಂದಕ್ಕೆ!

ಸಿಂಗಾಪುರದಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನವು ಮಧ್ಯದಲ್ಲಿಯೇ ಮತ್ತೆ ಸಿಂಗಾಪುರದ ಚಾಂಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದ್ದು, ಇದರಿಂದಾಗಿ ಪ್ರಯಾಣಿಕರು ಬೆಂಗಳೂರು ತಲುಪಲು ನಾಲ್ಕು ಗಂಟೆ ತಡವಾಗಿ ತೊಂದರೆ ಅನುಭವಿಸಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಇಂಡಿಗೋ ವಿಮಾನ
ಇಂಡಿಗೋ ವಿಮಾನ

ಬೆಂಗಳೂರು: ಸಿಂಗಾಪುರದಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನವು ಮಧ್ಯದಲ್ಲಿಯೇ ಮತ್ತೆ ಸಿಂಗಾಪುರದ ಚಾಂಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದ್ದು, ಇದರಿಂದಾಗಿ ಪ್ರಯಾಣಿಕರು ಬೆಂಗಳೂರು ತಲುಪಲು ನಾಲ್ಕು ಗಂಟೆ ತಡವಾಗಿ ತೊಂದರೆ ಅನುಭವಿಸಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಸಿಂಗಾಪುರದಿಂದ ನಿತ್ಯ ಬೆಳಗ್ಗೆ 5.40ಕ್ಕೆ (ಸ್ಥಳೀಯ ಕಾಲಮಾನ) ಹೊರಡುವ ವಿಮಾನ ಸಂಖ್ಯೆ 6ಇ 1006, ಬೆಳಗ್ಗೆ 7.20ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬೇಕಿತ್ತು. ಆದರೆ, ಬೆಂಗಳೂರಿನಿಂದ ಸಿಂಗಾಪುರಕ್ಕೆ ತೆರಳಿದ್ದ ವಿಮಾನ, ತನ್ನ ಪ್ರಯಾಣಿಕರ ಲಗೇಜ್ ಅನ್ನು ಇಳಿಸದೆಯೇ ವಾಪಸ್ ಹೊರಟಿದ್ದರಿಂದ ಈ ಅವ್ಯವಸ್ಥೆ ಉಂಟಾಗಿದೆ.

ಫ್ಲೈಟ್ ಟ್ರ್ಯಾಕರ್ ವೆಬ್‌ಸೈಟ್‌ಗಳ ಪ್ರಕಾರ, ವಿಮಾನವು ಚಾಂಗಿಯಿಂದ ನಿಗದಿತ ಸಮಯಕ್ಕೆ ಹೊರಟು ನಭಕ್ಕೆ ಜಿಗಿದಿದೆ. ಸುಮಾರು 80 ನಿಮಿಷಗಳ ಹಾರಾಟದ ನಂತರ 6.57ಕ್ಕೆ ಮತ್ತೆ ವಿಮಾನ ಸಿಂಗಾಪುರ ವಿಮಾನ ನಿಲ್ದಾಣಕ್ಕೆ ಮರಳಿದೆ. ಚಾಂಗಿ ವಿಮಾನ ನಿಲ್ದಾಣದಿಂದ 10.12ಕ್ಕೆ  ಎರಡನೇ ಬಾರಿಗೆ ಟೇಕ್ ಆಫ್ ಆದ ನಂತರ ಬುಧವಾರ ಬೆಳಗ್ಗೆ 11.44ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಇದರಿಂದ ಪ್ರಯಾಣಿಕರು ಟ್ವೀಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅರ್ವಿನ್ ಸಾಹ್ನಿ ಎಂಬುವವರು, 'ಅಸಾಧ್ಯವಾದುದನ್ನು ಸಾಧಿಸಿದ್ದಕ್ಕಾಗಿ ಅಭಿನಂದನೆಗಳು. ನೀವು ವಿಮಾನದಿಂದ ಲಗೇಜ್ ಇಳಿಸುವುದನ್ನು ಮರೆತ ಕಾರಣದಿಂದಾಗಿ ಬೆಳಿಗ್ಗೆ 5.40ಕ್ಕೆ ಸಿಂಗಾಪುರದಿಂದ ಟೇಕಾಫ್ ಆದ ವಿಮಾನ ಮತ್ತೆ ಅಲ್ಲಿಗೆ ಹಿಂತಿರುಗಿದೆ' ಎಂದಿರುವ ಅವರು, ಇಂಡಿಗೋದಿಂದ ಸರಿಯಾದ ಮಾಹಿತಿ ಲಭ್ಯವಾಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೋರ್ವ ಪ್ರಯಾಣಿಕ ಅಂಜ್ಲಿನ್, 'Indigo6E, ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ಭಯಾನಕ ನಿರ್ವಹಣೆ. ಸಿಂಗಾಪುರದಿಂದ ಬೆಂಗಳೂರಿಗೆ ಹೊರಟಿದ್ದ 6E 1006 ವಿಮಾನ 1.5 ಗಂಟೆಗಳ ಕಾಲ ಹಾರಾಟ ನಡೆಸಿತ್ತು ಮತ್ತು ನೀವು ಲಗೇಜ್ ಅನ್ನು ಇಳಿಸಲು ಮರೆತ ಕಾರಣದಿಂದಾಗಿ ಮತ್ತೆ ಸಿಂಗಾಪುರಕ್ಕೆ ಹಿಂತಿರುಗಿದೆ. ಮುಂಜಾನೆ ವಿಮಾನಕ್ಕೆ ಬಂದಿದ್ದ ಪ್ರಯಾಣಿಕರು, ಈಗಾಗಲೇ ನಿದ್ರೆ ಕಳೆದುಕೊಂಡಿದ್ದರು. ಈಗ ಮತ್ತೆ ಕಿರುಕುಳ ನೀಡಲಾಗುತ್ತಿದೆ!' ಎಂದು ಬರೆದುಕೊಂಡಿದ್ದಾರೆ.

ಇಂಡಿಗೋದ ಅಧಿಕೃತ ಹೇಳಿಕೆ ಪ್ರಕಾರ, 'ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ನಮ್ಮ ಸಿಬ್ಬಂದಿ ಕಡೆಯಿಂದಾದ ದೋಷದಿಂದಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಈ ಕಾರಣದಿಂದ ವಿಮಾನವು ಮತ್ತೆ ಚಾಂಗಿ ನಿಲ್ದಾಣಕ್ಕೆ ಆಗಮಿಸಿತು. ಇದರಿಂದ ಪ್ರಯಾಣಿಕರಿಗೆ ಉಂಟಾದ ತೊಂದರೆಗೆ ವಿ‍ಷಾಧಿಸುತ್ತೇವೆ ಎಂದು ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com