ಕಾಂಗ್ರೆಸ್ ಮುಖಂಡ, ಕೋಲಾರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಿವಾಸ್ ಹತ್ಯೆ ಪ್ರಕರಣ: ಆರು ಮಂದಿ ಬಂಧನ

ಕಾಂಗ್ರೆಸ್ ಮುಖಂಡ, ಕೋಲಾರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಿವಾಸ್ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಕೋಲಾರ ಪೊಲೀಸರು ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಸಾಗರ ಬಳಿ ಆರು ಮಂದಿಯನ್ನು ಬಂಧಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇಬ್ಬರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಹತ್ಯೆಯಾದ ಶ್ರೀನಿವಾಸ್(ಸಂಗ್ರಹ ಚಿತ್ರ)
ಹತ್ಯೆಯಾದ ಶ್ರೀನಿವಾಸ್(ಸಂಗ್ರಹ ಚಿತ್ರ)
Updated on

ಕೋಲಾರ: ಕಾಂಗ್ರೆಸ್ ಮುಖಂಡ, ಕೋಲಾರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಿವಾಸ್ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಕೋಲಾರ ಪೊಲೀಸರು ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಸಾಗರ ಬಳಿ ಆರು ಮಂದಿಯನ್ನು ಬಂಧಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇಬ್ಬರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಇದೊಂದು ರಾಜಕೀಯ ಕೊಲೆಯಲ್ಲ, ಹಳೆ ವೈಷಮ್ಯವೇ ಶ್ರೀನಿವಾಸ್ ಅವರ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಸೆಂಟ್ರಲ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಬಿ ಆರ್ ರವಿಕಾಂತೇಗೌಡ ತಿಳಿಸಿದ್ದಾರೆ. ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ನೇತೃತ್ವದ ತಂಡ ಇದುವರೆಗೆ ಆರು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

ಶ್ರೀನಿವಾಸ್ ಅವರ ಬರ್ಬರ ಹತ್ಯೆಯ ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರೊಂದಿಗೆ ಆಸ್ಪತ್ರೆಗೆ ಧಾವಿಸಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದರು. ಘಟನಾ ಸ್ಥಳಕ್ಕೆ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ ಭೇಟಿ ನೀಡಿ ಪರಿಶೀಲಿಸಿದರು.

ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್, ಪೂರ್ವ ವೈಷಮ್ಯದಿಂದ ಕೊಲೆ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆರೋಪಿ ವೇಣುಗೋಪಾಲ್ ಮತ್ತು ಮೃತರು ತೀವ್ರ ವೈಷಮ್ಯ ಹೊಂದಿದ್ದರು. ಇಬ್ಬರೂ ಸಂಬಂಧಿಗಳಾಗಿದ್ದರೂ ಹಲವು ವಿಚಾರಗಳಲ್ಲಿ ಪೈಪೋಟಿ ಇದ್ದವು ಎನ್ನುತ್ತಾರೆ. 

ಶ್ರೀನಿವಾಸಪುರ ನಿವಾಸಿ ವೇಣುಗೋಪಾಲ್ ಎಂಬಾತ ತನ್ನ ಸಹಚರರಾದ ಬಂಗಾರಪೇಟೆಯ ಸಂತೋಷ್, ಕೋಲಾರ ಪಟ್ಟಣದ ಮುನೀಂದ್ರ, ಮುಳಬಾಗಲಿನ ನಾಗೇಂದ್ರ, ಅರ್ಶಿತ್ ಕುಮಾರ್ ಮತ್ತು ವೆಮಗಲ್‌ನ ಅರುಣ್ ಕುಮಾರ್ ಸೇರಿ ಸೋಮವಾರ ಶ್ರೀನಿವಾಸ್‌ನ ಹತ್ಯೆಗೆ ಯೋಜನೆ ರೂಪಿಸಿದ್ದರು ಶ್ರೀನಿವಾಸಪುರದ ಹೊರವಲಯದಲ್ಲಿ ತಮ್ಮ ಜಾಗದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ನಿರ್ಮಾಣ ನಡೆಯುತ್ತಿದ್ದ ಸ್ಥಳದ ಪಕ್ಕ ಶ್ರೀನಿವಾಸ್ ಬಂದಿದ್ದ ವೇಳೆ ಈ ಹತ್ಯೆ ನಡೆದಿದೆ. 

ಎಲ್ಲಾ ಆರು ಮಂದಿ ಆರೋಪಿಗಳು ದ್ವಿಚಕ್ರ ವಾಹನಗಳಲ್ಲಿ ಬಂದು ಪೆಪ್ಪರ್ ಸ್ಪ್ರೇ ಬಳಸಿ ಶ್ರೀನಿವಾಸ್ ಅವರ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಅವರ ಜೊತೆಯಲ್ಲಿದ್ದ ಅವರ ಸಂಬಂಧಿಯ ಮೇಲೆ ಹಲ್ಲೆಗೆ ಯತ್ನಿಸಿದರು, ಅವರು ಸ್ಥಳದಿಂದ ಓಡಿಹೋದರು.

ಘಟನೆ ನಡೆದ ತಕ್ಷಣ ಆರೋಪಿಯನ್ನು ಬಂಧಿಸಲು ಮೂರು ತಂಡಗಳನ್ನು ಪೊಲೀಸರು ರಚಿಸಿದ್ದರು. ಆರೋಪಿಗಳು ಕೆಜಿಎಫ್ ಕಡೆ ಪರಾರಿಯಾಗುತ್ತಿದ್ದಾರೆ ಎಂದು ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತು, ಪೊಲೀಸರು ಅವರ ಪತ್ತೆಗೆ ಜಾಡು ಹಿಡಿದು ಹೊರಟರು. ಲಕ್ಷ್ಮೀಸಾಗರ ತಲುಪಿದರು, ಅಲ್ಲಿ ವೆಂಕಟೇಶ್, ಸತೀಶ್, ಅಣ್ಣಯ್ಯ, ಪೊಲೀಸರಾದ ನಾಗೇಶ್ ಮತ್ತು ಮಂಜುನಾಥ್ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಅವರನ್ನು ಸುತ್ತುವರೆದು, ಶರಣಾಗುವಂತೆ ಹೇಳಿದರು. ವೇಣುಗೋಪಾಲ್, ಸಂತೋಷ್ ಕುಮಾರ್, ಮುನೀಂದ್ರ ಅವರು ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು, ಇದರಿಂದ ಅವರ ಕಾಲುಗಳಿಗೆ ಗುಂಡು ತಗುಲಿ ಗಾಯಗಳಾಗಿವೆ.

ತಂಡಕ್ಕೆ ಹಲವು ಆಯಾಮಗಳಿಂದ ತನಿಖೆ ನಡೆಸಲು ನಿರ್ದೇಶನ ನೀಡಲಾಗಿತ್ತು. ಶ್ರೀನಿವಾಸಪುರದಲ್ಲಿ ಶ್ರೀನಿವಾಸ್ ಅವರ ಅಂತ್ಯಕ್ರಿಯೆ ಶಾಂತಿಯುತವಾಗಿ ನಡೆದಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಎಸ್ಪಿ ನಾರಾಯಣ್ ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com