ಕೋಲಾರ ಕಾಂಗ್ರೆಸ್ ನಾಯಕ ಶ್ರೀನಿವಾಸ್ ಹತ್ಯೆ: ಕಾಲಿಗೆ ಗುಂಡು ಹಾರಿಸಿ 3 ಆರೋಪಿಗಳ ಬಂಧಿಸಿದ ಪೊಲೀಸರು

ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಆಪ್ತ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ್ (ಕೌನ್ಸಿಲರ್ ಸೀನಪ್ಪ) ಅವರ ಹತ್ಯೆ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲಾರ: ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಆಪ್ತ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ್ (ಕೌನ್ಸಿಲರ್ ಸೀನಪ್ಪ) ಅವರ ಹತ್ಯೆ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಬಾರ್ ಕಟ್ಟಡ ಕಾಮಗಾರಿ ವೀಕ್ಷಣೆಗೆ ಹೋಗಿದ್ದ ವೇಳೆ‌ ಶ್ರೀನಿವಾಸಪುರ ಪಟ್ಟಣದ ಹೊರವಲಯದ ಹೊಗಳಗೆರೆ ಬಳಿ ಆರು ದುಷ್ಕರ್ಮಿಗಳು ಶ್ರೀನಿವಾಸನ್ (62) ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದರು. ಇಂದು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರ ಮೇಲೆ ಗುಂಡು ಹಾರಿಸಿದ್ದಾರೆ.

ಬಂಧಿಸಿ ಕರೆತರುವ ವೇಳೆ ತಾಲ್ಲೂಕಿನ ಲಕ್ಷ್ಮಿಸಾಗರ ಅರಣ್ಯ ಪ್ರದೇಶದ ಬಳಿ ಆರೋಪಿಗಳಾದ ವೇಣುಗೋಪಾಲ್ (ವೇಣು) ಹಾಗೂ ಮನೀಂದ್ರ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿದ್ದಾರೆ. ಮತ್ತೊಬ್ಬ ಆರೋಪಿ ಸಂತೋಷ್‍ ಎಂಬಾತನಿಗೂ ಗಾಯವಾಗಿದೆ. ವೇಮಗಲ್ ಠಾಣೆ ಇನ್ ಸ್ಪೆಕ್ಟರ್ ವೆಂಕಟೇಶ್, ಸಿಬ್ಬಂದಿ ಮಂಜುನಾಥ್ ಮತ್ತು ನಾಗೇಶ್ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಆರೋಪಿಗಳು ಹಾಗೂ ಪೊಲೀಸರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಶ್ರೀನಿವಾಸ್ ಕೊಲೆಗೆ ರಾಜಕೀಯ ವೈಷಮ್ಯ ಹಾಗೂ ಆಸ್ತಿ ವಿವಾದ ಹತ್ಯೆಗೆ ಕಾರಣ ಎನ್ನಲಾಗಿದೆ. ಆರೋಪಿಗಳ ಪತ್ತೆಗೆ ಡಿವೈಎಸ್ಪಿ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿತ್ತು. ಶ್ರೀನಿವಾಸನ್ ಜೆಡಿಎಸ್ ಪಕ್ಷದಿಂದ ತಾಲ್ಲೂಕಿನ ಗೌನಪಲ್ಲಿ ಕ್ಷೇತ್ರದಿಂದ 2009ರಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಅವರು ಐದು ವರ್ಷದ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಪುರಸಭೆ ಸದಸ್ಯ, ಎಪಿಎಂಸಿ ಅಧ್ಯಕ್ಷರೂ ಆಗಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com