ವಿದ್ಯುತ್ ಕಡಿತ ವಿರೋಧಿಸಿ ರೈತರ ವಿನೂತನ ಪ್ರತಿಭಟನೆ; ಮೊಸಳೆ ಕಂಡು ಗಾಬರಿಯಾದ ಹೆಸ್ಕಾಂ ಅಧಿಕಾರಿಗಳು!

ವಿಜಯಪುರದ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಅನಿಯಮಿತ ವಿದ್ಯುತ್ ಕಡಿತದ ವಿರುದ್ಧದ ವಿನೂತನ ಪ್ರತಿಭಟನೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಕಚೇರಿಗೆ ಮೊಸಳೆಯನ್ನು ಕೊಂಡೊಯ್ದಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ವಿಜಯಪುರ: ಇಲ್ಲಿನ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಅನಿಯಮಿತ ವಿದ್ಯುತ್ ಕಡಿತದ ವಿರುದ್ಧದ ವಿನೂತನ ಪ್ರತಿಭಟನೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಕಚೇರಿಗೆ ಮೊಸಳೆಯನ್ನು ಕೊಂಡೊಯ್ದಿದ್ದಾರೆ.

ಹಗಲಿನಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದ ಕಾರಣ ರಾತ್ರಿ ವೇಳೆ ತಮ್ಮ ಜಮೀನಿಗೆ ತೆರಳಿದಾಗ ಕಾಡುಪ್ರಾಣಿಗಳು ಮತ್ತು ಹಾವುಗಳ ಕಾಟದಿಂದ ಆತಂಕಕ್ಕೆ ಒಳಗಾಗಿದ್ದರು.

ಕಳೆದ ವಾರ ತಡರಾತ್ರಿ ವಿದ್ಯುತ್ ಸರಬರಾಜು ಮಾಡಿದ ನಂತರ ರೈತರೊಬ್ಬರು ತಮ್ಮ ಜಮೀನಿಗೆ ನೀರು ಹಾಯಿಸಲು ಹೋದಾಗ ತಮ್ಮ ಜಮೀನಿನಲ್ಲಿ ಮೊಸಳೆ ಇರುವುದು ಕಂಡುಬಂದಿದೆ. ಮೊಸಳೆ ಸಮೀಪದ ಕೃಷ್ಣಾ ನದಿಯಿಂದ ಬೇಟೆಗಾಗಿ ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ನಂತರ ರೈತ ಕೂಡಲೇ ಗ್ರಾಮಸ್ಥರಿಗೆ ಕರೆ ಮಾಡಿದ್ದು, ಮೊಸಳೆಯನ್ನು ಕಟ್ಟಿ ಅಕ್ಟೋಬರ್ 19 ರಂದು ಹೆಸ್ಕಾಂ ಕಚೇರಿಗೆ ಕೊಂಡೊಯ್ದು ತಮಗಿರುವ ಅಪಾಯದ ಕುರಿತು ‘ಪ್ರದರ್ಶನ’ ಮಾಡಿದ್ದಾರೆ.

ತಮ್ಮ ಕಚೇರಿ ಬಳಿ ‘ಅಸಾಮಾನ್ಯ ಅತಿಥಿ’ಯನ್ನು ಕಂಡು ಗಾಬರಿಗೊಂಡ ಹೆಸ್ಕಾಂ ಅಧಿಕಾರಿಗಳು, ಪೊಲೀಸರು ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಹಗಲಿನಲ್ಲಿ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳುವುದಾಗಿ ಹೆಸ್ಕಾಂ ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ನಂತರ ಅರಣ್ಯಾಧಿಕಾರಿಗಳು ಮೊಸಳೆಯನ್ನು ಆಲಮಟ್ಟಿ ಅಣೆಕಟ್ಟೆಯಲ್ಲಿ ಬಿಟ್ಟಿದ್ದಾರೆ. 

ನೀರಾವರಿ ಇಲಾಖೆ ಅಧಿಕಾರಿಗಳ ಪ್ರಕಾರ, ಈ ವರ್ಷ ಅಲ್ಪ ಪ್ರಮಾಣದ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಅಸ್ತವ್ಯಸ್ತವಾಗಿವೆ. ಅಣೆಕಟ್ಟುಗಳಲ್ಲಿ ನೀರಾವರಿ ಉದ್ದೇಶಕ್ಕೆ ಬಿಡುವಷ್ಟು ನೀರು ಇಲ್ಲ. ರೈತರು ನೀರಾವರಿಗಾಗಿ ಬೋರ್‌ವೆಲ್‌ಗಳನ್ನು ಅವಲಂಬಿಸಿದ್ದಾರೆ.

ನೀರಾವರಿ ಉದ್ದೇಶಕ್ಕಾಗಿ ಅತಿಯಾದ ವಿದ್ಯುತ್ ಬಳಕೆಯು ವಿದ್ಯುತ್ ಕೊರತೆಯನ್ನು ಸೃಷ್ಟಿಸಿದೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಬೇಡಿಕೆ ಮತ್ತು ಬಳಕೆಯಲ್ಲಿ ತೀವ್ರ ಏರಿಕೆಯಿಂದಾಗಿ ವಿದ್ಯುತ್ ಕೊರತೆ ಉಂಟಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.

ಅಕ್ಟೋಬರ್‌ನಲ್ಲಿ ವಿದ್ಯುತ್ ಬಳಕೆ ಸುಮಾರು 10,000 ಮೆಗಾವ್ಯಾಟ್ ಆಗಿದ್ದು, ಕೃಷಿ ಉದ್ದೇಶಗಳಿಗಾಗಿ ಹೆಚ್ಚಿದ ವಿದ್ಯುತ್ ಬಳಕೆಯಿಂದಾಗಿ ರಾಜ್ಯದಲ್ಲಿ ವಿದ್ಯುತ್ ಬಳಕೆ 16,000 ಮೆಗಾವ್ಯಾಟ್‌ಗೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com