ಎಫ್‌ಡಿಎ ಪರೀಕ್ಷೆಯಲ್ಲಿ ಅವ್ಯವಹಾರ: ತಿಂಗಳಿಗೆ 80 ಸಾವಿರ ರು. ವೇತನ ಪಡೆಯುವ ಎಂಜಿನಿಯರ್‌ ಗೂ ಬೇಕು ಸರ್ಕಾರಿ ಕೆಲಸ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶನಿವಾರ ನಡೆಸಿದ ಮಂಡಳಿಗಳು ಮತ್ತು ನಿಗಮಗಳಲ್ಲಿನ ಪ್ರಥಮ ವಿಭಾಗದ ಸಹಾಯಕ (ಎಫ್‌ಡಿಎ) ಹುದ್ದೆಗಳನ್ನು ಭರ್ತಿ ಮಾಡಲು ನಡೆಸಿದ ಪರೀಕ್ಷೆ ವೇಳೆ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶನಿವಾರ ನಡೆಸಿದ ಮಂಡಳಿಗಳು ಮತ್ತು ನಿಗಮಗಳಲ್ಲಿನ ಪ್ರಥಮ ವಿಭಾಗದ ಸಹಾಯಕ (ಎಫ್‌ಡಿಎ) ಹುದ್ದೆಗಳನ್ನು ಭರ್ತಿ ಮಾಡಲು ನಡೆಸಿದ ಪರೀಕ್ಷೆ ವೇಳೆ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

ವಿಶ್ವವಿದ್ಯಾನಿಲಯದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಮೊಬೈಲ್ ಫೋನ್ ಮೂಲಕ ತನ್ನ ಸಹೋದರಿಯಿಂದ ಉತ್ತರಗಳನ್ನು ಕೇಳಿ ಬರೆದಿದ್ದಾನೆ. ಹೀಗಾಗಿ ಅಭ್ಯರ್ಥಿ ಲಕ್ಷ್ಮಿಪುತ್ರ ಅವರ ಸಹೋದರಿ ಶೈಲಶ್ರೀ ತಲ್ವಾರ್ ಅವರನ್ನು ಬಂಧಿಸಲಾಗಿದೆ. ಕಿವಿಯಲ್ಲಿ ಬ್ಲೂಟೂತ್ ಸಾಧನ ಹೊಂದಿದ್ದ ಲಕ್ಷ್ಮೀಪುತ್ರ ತನ್ನ ಸಹೋದರಿ ಹಾಗೂ ಸ್ನೇಹಿತ ಗಂಗಾಧರ್ ಸಹಾಯದಿಂದ ಪರೀಕ್ಷೆ ಬರೆದಿದ್ದಾನೆ.

ಪರೀಕ್ಷೆ ಮುಗಿದ ಬಳಿಕ ಕಾರಿನಲ್ಲಿ ಕುಳಿತು ಪರೀಕ್ಷೆ ಕುರಿತು ಚರ್ಚೆ ನಡೆಸುತ್ತಿದ್ದ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಪರೀಕ್ಷೆಯ ಹಗರಣದಲ್ಲೂ ಕಿಂಗ್‌ಪಿನ್‌ಗಳಲ್ಲಿ ಒಬ್ಬರಾಗಿರುವ ಆರ್‌ಡಿ ಪಾಟೀಲ್ ತಮಗೆ, ಬ್ಲೂ ಟೂತ್, ಸಿಮ್ ಕಾರ್ಡ್ ಮತ್ತು ಉತ್ತರಗಳನ್ನು ನೀಡಿದ್ದರು ಎಂದು ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಅಫಜಲಪುರದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್‌ ಜೊತೆ ನುಸುಳಲು ಯತ್ನಿಸಿದ ಮತ್ತೋರ್ವ ಅಭ್ಯರ್ಥಿ ಆಕಾಶ ಮಂಠಾಳೆ ಅವರನ್ನು ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನವೇ ಬಂಧಿಸಲಾಗಿದೆ.

ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿಇ ಮುಗಿಸಿರುವ ಆಕಾಶ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ತಿಂಗಳಿಗೆ 80,000 ರೂಪಾಯಿ ಸಂಬಳ ಪಡೆಯುತ್ತಿದ್ದರೂ, ಸರ್ಕಾರಿ ನೌಕರಿ ಬೇಕು ಎಂದು ಎಫ್‌ಡಿಎ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಆರ್‌ಡಿ ಪಾಟೀಲ್‌ ಜತೆ 25 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡಿದ್ದರು, ಜೊತೆಗೆ ಅವರು ಈಗಾಗಲೇ ಒಂದು ಕಂತನ್ನು ಪಾವತಿಸಿದ್ದರು.

ಕಲಬುರಗಿಯ ಶರಣಬಸವೇಶ್ವರ ಕಾಲೇಜು ಪರೀಕ್ಷಾ ಕೇಂದ್ರದಲ್ಲೂ ಅಭ್ಯರ್ಥಿ ತ್ರಿಮೂರ್ತಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದರೆ, ಸಹೋದರ ಅಂಬರೀಶ್ ಮೊಬೈಲ್ ಮೂಲಕ ಉತ್ತರ ಹೇಳಿದ್ದಾರೆ. ಈ ಸಂಬಂಧ ಕೆಇಎ ಅಧಿಕಾರಿಗಳು ಮಾಹಿತಿ ಪಡೆದಾಗ, ತ್ರಿಮೂರ್ತಿ ಅವರನ್ನು ಪರೀಕ್ಷಾ ಕೇಂದ್ರದಿಂದ ಹೊರಗೆ ಕರೆಸಲಾಯಿತು ಮತ್ತು ಅವರ ಬ್ಲೂಟೂತ್ ಸಾಧನವನ್ನು ವಶಪಡಿಸಿಕೊಳ್ಳಲಾಯಿತು. ಪೊಲೀಸರು ತ್ರಿಮೂರ್ತಿ ಮತ್ತು ಅಂಬರೀಶ್ ಇಬ್ಬರನ್ನೂ ಬಂಧಿಸಿದ್ದಾರೆ.

ಸರ್ಕಾರವು ಅವ್ಯವಹಾರದ ಬಗ್ಗೆ ಎಚ್ಚೆತ್ತುಕೊಂಡಿದೆ, ಹೀಗಾಗಿ ಅಫಜಲಪುರದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮುನ್ನವೇ ಮೂವರು ಅಭ್ಯರ್ಥಿಗಳನ್ನು ಭಾನುವಾರ ಬಂಧಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com