ಇಸ್ರೋ ಅಧ್ಯಕ್ಷ ಸೋಮನಾಥ್, ಬ್ಯಾಂಕ್ ಜನಾರ್ಧನ್, ಡಿಂಗ್ರಿ ನಾಗರಾಜ್ ಸೇರಿ 68 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ನಾಳೆ 68ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ರಾಜ್ಯಾದ್ಯಂತ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈ ಶುಭ ಸಂದರ್ಭದಲ್ಲಿ ನಾಡಿನ ವಿವಿಧ ಸಾಧಕರನ್ನು ಗುರುತಿಸಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠ ಬೆಳೆದು ಬಂದಿದೆ.
ಸೋಮನಾಥ್, ಬ್ಯಾಂಕ್ ಜನಾರ್ದನ್ ಮತ್ತು ಡಿಂಗ್ರಿ ನಾಗರಾಜ್
ಸೋಮನಾಥ್, ಬ್ಯಾಂಕ್ ಜನಾರ್ದನ್ ಮತ್ತು ಡಿಂಗ್ರಿ ನಾಗರಾಜ್
Updated on

ಬೆಂಗಳೂರು: ನಾಳೆ 68ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ರಾಜ್ಯಾದ್ಯಂತ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈ ಶುಭ ಸಂದರ್ಭದಲ್ಲಿ ನಾಡಿನ ವಿವಿಧ ಸಾಧಕರನ್ನು ಗುರುತಿಸಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠ ಬೆಳೆದು ಬಂದಿದೆ.

ಇದೀಗ 2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಹೊರಬಿದ್ದಿದೆ. ಸಿಎಂ ಸಿದ್ದರಾಮಯ್ಯ  ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ವಿವಿಧ ಸಾಧಕರ ಹೆಸರನ್ನು ಫೈನಲ್ ಮಾಡಲಾಗಿದೆ. ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಗಂಡಗಿ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ, ಪ್ರಶಸ್ತಿ ಪುರಸ್ಕೃತರು ಮತ್ತು ಪ್ರಶಸ್ತಿ  ಸಂಘ ಸಂಸ್ಥೆಗಳ ಹೆಸರನ್ನು ಬಿಡುಗಡೆ ಮಾಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 68 ಸಾಧಕರು ಹಾಗೂ 10 ಸಂಸ್ಥೆಗಳಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ.

ಮಂಗಳವಾರ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರವು ರಂಗಭೂಮಿಯಲ್ಲಿ ಚಿದಂಬರರಾವ್ ಜಂಬೆ, ಯಕ್ಷಗಾನದಲ್ಲಿ ಕೆ.ಲೀಲಾವತಿ ಬೈಪಾಡಿತ್ತಾಯ, ಸಿನಿಮಾ ಕ್ಷೇತ್ರದಲ್ಲಿ ಡಿಂಗ್ರಿ ನಾಗರಾಜ್ ಹಾಗೂ ಬ್ಯಾಂಕ್ ಜನಾರ್ಧನ, ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಸಿ.ನಾಗಣ್ಣ, ಸುಬ್ಬು ಹೊಲೆಯಾರ್, ಪತ್ರಿಕೋದ್ಯಮದಲ್ಲಿ ದಿನೇಶ್ ಅಮೀನ್‌ಮಟ್ಟು, ಮಾಯಾ ಶರ್ಮ ಸೇರಿದಂತೆ 68 ಸಾಧಕರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ.

ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಎರಡು ಎಕರೆ ಭೂಮಿ ದಾನ ನೀಡಿದ್ದ ತಾಲ್ಲೂಕಿನ ಕುಣಿಕೇರಿ ಗ್ರಾಮದ ಹುಚ್ಚಮ್ಮ ಬಸಪ್ಪ ಚೌದ್ರಿ ಅವರಿಗೆ ಅರ್ಜಿ ಹಾಕದಿದ್ದರೂ ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದು ಅಜ್ಜಿಯ ಬೆಟ್ಟದಷ್ಟು ಖುಷಿಗೆ ಕಾರಣವಾಗಿದ್ದು ’ಮಾಧ್ಯಮದವರು ಹೇಳಿದ ಮೇಲೆ ಪ್ರಶಸ್ತಿ ಬಂದ ವಿಚಾರ ನಂಗೆ ತಿಳಿಯಿತು. ಸರ್ಕಾರವೇ ಗುರುತಿಸಿ ಪ್ರಶಸ್ತಿ ಕೊಡುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಬಹಳಷ್ಟು ಸಂತೋಷವಾಗಿದೆ. ಈ ಪ್ರಶಸ್ತಿ ಗವಿಸಿದ್ದೇಶ್ವರ ಸ್ವಾಮೀಜಿಗೆ ಅರ್ಪಿಸುತ್ತೇನೆ’ ಎಂದು ಹೇಳುವಾಗ ಅಜ್ಜಿಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಶಿವಮೊಗ್ಗದ ಕರ್ನಾಟಕ ಸಂಘ, ಬೆಂಗಳೂರಿನ ಮಿಥಿಕ್ ಸೊಸೈಟಿ, ದಾವಣಗೆರೆಯ ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ ಸೇರಿದಂತೆ ಹತ್ತು ಸಂಸ್ಥೆಗಳಿಗೆ ಪ್ರಶಸ್ತಿ ಘೋಷಣೆಯಾಗಿದೆ.

ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಸುವರ್ಣ ವರ್ಷದ ನೆನಪಿಗಾಗಿ ಕನ್ನಡ, ಕರ್ನಾಟಕದ ಏಳಿಗೆಗಾಗಿ ಶ್ರಮಿಸಿದ 10 ಸಂಘ-ಸಂಸ್ಥೆಗಳಿಗೆ ಈ ವರ್ಷ ಹೆಚ್ಚುವರಿಯಾಗಿ ಪ್ರಶಸ್ತಿ ನೀಡಲು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ತೀರ್ಮಾನಿಸಿದೆ ಎಂದು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇನ್ನು ಇಸ್ರೋ ಸಂಸ್ಥೆ ಚೇರ್ಮನ್ ಎಸ್ ಸೋಮನಾಥ್ ಅವರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲು ಸರ್ಕಾರ ನಿರ್ಧರಿಸಿದೆ. ಇನ್ನುಳಿದಂತೆ ಸಿನಿಮಾ ಕ್ಷೇತ್ರದಿಂದ ಹಿರಿಯ ಪೋಷಕ ನಟರಾದ ಡಿಂಗ್ರಿ ನಾಗರಾಜ್ ಹಾಗೂ ಬ್ಯಾಂಕ್ ಜನಾರ್ಧನ್ ಅವರಿಗೆ ಹಾಗೂ ನ್ಯಾಯಾಂಗ ಕ್ಷೇತ್ರದಿಂದ ಜಸ್ಟೀಸ್ ವಿ. ಗೋಪಾಲಗೌಡ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.

ಈ ಬಾರಿ 13 ಮಹಿಳೆಯರು, 54 ಪುರುಷರು ಮತ್ತು ಒಬ್ಬರು ಮಂಗಳಮುಖಿಗೆ ಪ್ರಶಸ್ತಿ ನೀಡಲಾಗುತ್ತದೆ. ಅಲ್ಲದೆ ಪುರಸ್ಕೃತರಲ್ಲಿ ಇಬ್ಬರು ಶತಾಯುಷಿಗಳು ಇದ್ದಾರೆ. ಪ್ರಶಸ್ತಿ ಪುರಸ್ಕೃತರು 5 ಲಕ್ಷ ರೂಪಾಯಿ ನಗದು ಮತ್ತು 25 ಗ್ರಾಂ ಚಿನ್ನದ ಪದಕವನ್ನು ಪಡೆಯಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com