ಕಾವೇರಿ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ, ವಾಸ್ತವಾಂಶ ತಿಳಿಯಲು ಅಣೆಕಟ್ಟುಗಳಿಗೆ ಸಮಿತಿ ಸದಸ್ಯರ ಆಹ್ವಾನಿಸುತ್ತೇವೆ- ಡಿಕೆಶಿ

ತಮಿಳುನಾಡಿಗೆ ನೀರು ಬಿಡಬೇಕು ಎಂಬ ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಪ್ರಶ್ನಿಸುತ್ತೇವೆ ಎಂದು ಹೇಳಿರುವ ಡಿಸಿಎಂ ಡಿಕೆ ಶಿವಕುಮಾರ್, ಅಣೆಕಟ್ಟುಗಳಿಗೆ ಸಮಿತಿ ಸದಸ್ಯರ ಆಹ್ವಾನಿಸಿ ವಾಸ್ತವಾಂಶ ತಿಳಿಯುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ತಮಿಳುನಾಡಿಗೆ ನೀರು ಬಿಡಬೇಕು ಎಂಬ ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಪ್ರಶ್ನಿಸುತ್ತೇವೆ ಎಂದು ಹೇಳಿರುವ ಡಿಸಿಎಂ ಡಿಕೆ ಶಿವಕುಮಾರ್, ಅಣೆಕಟ್ಟುಗಳಿಗೆ ಸಮಿತಿ ಸದಸ್ಯರ ಆಹ್ವಾನಿಸಿ ವಾಸ್ತವಾಂಶ ತಿಳಿಯುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.

24,000 ಕ್ಯೂಸೆಕ್ ನೀರು ಬಿಡುವಂತೆ ತಮಿಳುನಾಡು ಮಾಡಿರುವ ಮನವಿ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ತ್ರಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರಲಿದ್ದು, ಕರ್ನಾಟಕ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಖಾತೆಯನ್ನೂ ಹೊಂದಿರುವ ಡಿಕೆ ಶಿವಕುಮಾರ್ ಅವರು, ನೆರೆ ರಾಜ್ಯಕ್ಕೆ ನೀರು ಬಿಡುವ ನಿರ್ದೇಶನವನ್ನು ರಾಜ್ಯ ಸರ್ಕಾರ ಪಾಲಿಸಿದೆ ಮತ್ತು ಕಾವೇರಿ ಜಲಾನಯನ ಪ್ರದೇಶದ ನೆಲದ ವಾಸ್ತವತೆಯನ್ನು ಸುಪ್ರೀಂ ಕೋರ್ಟ್‌ಗೆ ವಿವರಿಸುವುದಾಗಿ ಗುರುವಾರ ಹೇಳಿದ್ದಾರೆ.

“ಕರ್ನಾಟಕ ರೈತರ ಹಿತಾಸಕ್ತಿ ಕಾಪಾಡುವುದು ನಮ್ಮ ಮೊದಲ ಬದ್ಧತೆ. ನಾಳೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಯಲಿದ್ದು, ವಿಚಾರಣೆ ಮುಂದೂಡುವ ಸಾಧ್ಯತೆ ಇದೆ. ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಕುರಿತು ನಮ್ಮ ಕಾನೂನು ತಂಡದೊಂದಿಗೆ ಚರ್ಚಿಸುತ್ತೇವೆ ಎಂದು ಶಿವಕುಮಾರ್ ಹೇಳಿದರು.

ನವದೆಹಲಿಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಕಾನೂನು ತಂಡದೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, 'ರಾಜ್ಯದ ಜಲಾಶಯಗಳಿಗೆ ಭೇಟಿ ನೀಡಲು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸದಸ್ಯರನ್ನು ಆಹ್ವಾನಿಸಲಾಗುವುದು. 15 ದಿನಗಳಲ್ಲಿ ಪರಿಸ್ಥಿತಿಯ ಬಗ್ಗೆ ಮೊದಲ ಮಾಹಿತಿ ನೀಡಲಾಗುತ್ತದೆ ಎಂದರು. 

ಆಗಸ್ಟ್ 29 ರಿಂದ ಸೆಪ್ಟೆಂಬರ್ 12 ರವರೆಗೆ 15 ದಿನಗಳವರೆಗೆ ದಿನಕ್ಕೆ 5,000 ಕ್ಯೂಸೆಕ್ ನೀರು ಬಿಡುವಂತೆ CWRC ಕರ್ನಾಟಕಕ್ಕೆ ಸೂಚಿಸಿತ್ತು. ಜಲಾಶಯಗಳಲ್ಲಿ ನೀರಿರುವಂತೆ ಕಾಣಿಸಬಹುದು. ಆದರೆ ಅವರು ಬಂದು ಪರಿಸ್ಥಿತಿಯನ್ನು ನೋಡಲಿ, ನಾವು ಅದನ್ನು ಮರೆಮಾಡಲು ಸಾಧ್ಯವಿಲ್ಲ. ಸಮರ್ಪಕ ಮಳೆಯಾಗಿದ್ದರೆ ನೀರು ಬಿಡಲು ಯಾವುದೇ ಅಭ್ಯಂತರವಿಲ್ಲ. ಈ ಹಿಂದೆಯೂ ಇಂತಹ ನಿರ್ಧಾರಗಳನ್ನು ಗೌರವಿಸಿದ್ದೇವೆ. ನಮ್ಮ ಅಣೆಕಟ್ಟುಗಳಿಗೆ ಭೇಟಿ ನೀಡಲು ಮತ್ತು ನೀರಿನ ಸಮಸ್ಯೆಯ ತೀವ್ರತೆಯನ್ನು ನೋಡಲು ನಾವು CWMA ಅಧಿಕಾರಿಗಳನ್ನು ಆಹ್ವಾನಿಸಿದ್ದೇವೆ ಮತ್ತು ಅಧಿಕಾರಿಗಳು ರಾಜ್ಯದ ರೈತರ ಹಿತವನ್ನು ಕಾಪಾಡುತ್ತಾರೆ ಎಂದು ಭಾವಿಸುತ್ತೇವೆ ಎಂದು ಹೇಳಿದರು. 

“ತಮಿಳುನಾಡಿಗೆ ಬಿಡುಗಡೆಯಾದ ನೀರಿನ ಎಲ್ಲಾ ಲೆಕ್ಕಾಚಾರಗಳನ್ನು ಬಿಳಿಗುಂಡ್ಲುವಿನಲ್ಲಿ ದಾಖಲಿಸಲಾಗುವುದು ಮತ್ತು ನೀರು ಅಲ್ಲಿಗೆ ತಲುಪಲು 4-5 ದಿನಗಳನ್ನು ತೆಗೆದುಕೊಳ್ಳುತ್ತದೆ. ನಮ್ಮ ವಕೀಲರು ಇದನ್ನೆಲ್ಲ ತಮ್ಮ ವಾದದಲ್ಲಿ ಮಂಡಿಸುತ್ತಾರೆ. ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮುಂದೆ ಮೇಲ್ಮನವಿ ಸಲ್ಲಿಸಲಿದೆ. ಏಕೆಂದರೆ ಅದು ತನ್ನ ಕಳವಳಗಳಿಗೆ ಧ್ವನಿ ಎತ್ತಬಹುದು. ಆದರೆ ತಮಿಳುನಾಡಿನ ನೀರಿನ ಹಂಚಿಕೆ ಮತ್ತು ಅದರ ಬೆಳೆ ಮಾದರಿಯನ್ನು ಪ್ರಶ್ನಿಸಲು ಅಧಿಕಾರವಿಲ್ಲ. ಕರ್ನಾಟಕದ ವಕೀಲರು ಪ್ರಕರಣವನ್ನು ಸಮರ್ಥವಾಗಿ ವಾದಿಸುತ್ತಿದ್ದಾರೆ ಮತ್ತು ಶುಕ್ರವಾರದ ವಿಚಾರಣೆಗೆ ಸಿದ್ಧರಾಗಿದ್ದಾರೆ, ಆದರೆ ಅದನ್ನು 2-3 ದಿನಗಳವರೆಗೆ ಸುಪ್ರಿಂ ಕೋರ್ಟ್ ಮುಂದೂಡಬಹುದು ಎಂದು ಅವರು ಹೇಳಿದರು.

ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ, ಎಸ್‌ಸಿ ವಕೀಲ ಮೋಹನ್ ಕಾತರಕಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಶಿವಕುಮಾರ್ ಅವರ ತಾಂತ್ರಿಕ ಸಲಹೆಗಾರ ಜಯಪ್ರಕಾಶ್ ಉಪಸ್ಥಿತರಿದ್ದರು. ರಾಜ್ಯವನ್ನು ಪ್ರತಿನಿಧಿಸುತ್ತಿರುವ ಹಿರಿಯ ಎಸ್‌ಸಿ ವಕೀಲ ಶ್ಯಾಮ್ ದಿವಾನ್ ಅವರನ್ನು ಸಂಪರ್ಕಿಸುವುದಾಗಿ ಸಚಿವರು ಹೇಳಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com