ಒಂದೇ ಏಟಿಗೆ ಮೂರು ಹಕ್ಕಿಗಳು: ಪ್ರಜ್ವಲ್ ಜೊತೆ ಹೆಚ್ ಡಿ ರೇವಣ್ಣ, ಎ ಮಂಜುಗೂ ನೊಟೀಸ್; ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಏನೆಂದರು?

ಜೆಡಿಎಸ್​ನ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ಎ ಮಂಜು, ದೇವರಾಜೇಗೌಡ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ಹೊರಡಿಸಿದೆ.
ಎ ಮಂಜು, ಪ್ರಜ್ವಲ್ ರೇವಣ್ಣ, ಹೆಚ್ ಡಿ ರೇವಣ್ಣ(ಸಂಗ್ರಹ ಚಿತ್ರ)
ಎ ಮಂಜು, ಪ್ರಜ್ವಲ್ ರೇವಣ್ಣ, ಹೆಚ್ ಡಿ ರೇವಣ್ಣ(ಸಂಗ್ರಹ ಚಿತ್ರ)

ಬೆಂಗಳೂರು: ಜೆಡಿಎಸ್​ನ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ಎ ಮಂಜು, ದೇವರಾಜೇಗೌಡ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ಹೊರಡಿಸಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಅಫಿಡವಿಟ್ ನಲ್ಲಿ ಘೋಷಿಸಿದ ಆಸ್ತಿ ವಿವರಗಳ ಕುರಿತು ಅಕ್ಷೇಪ ವ್ಯಕ್ತಪಡಿಸಿ ವಕೀಲ ದೇವರಾಜೇಗೌಡ, ಪ್ರಜ್ವಲ್ ರೇವಣ್ಣ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. 

ಪ್ರಜ್ವಲ್‌ ಅವರಂತೆಯೇ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಮತ್ತು ಹಾಲಿ ಜೆಡಿಎಸ್‌ ಶಾಸಕ ಎ ಮಂಜು ಕೂಡ ಅನರ್ಹರಾಗಲಿದ್ದಾರೆ ಎಂದು ಬಿಜೆಪಿ ಮುಖಂಡೆ, ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಹೇಳಿದ್ದಾರೆ. ಯಾವುದೇ ಚುನಾವಣೆಗೆ ಸ್ಪರ್ಧಿಸುವಾಗ ಆಸ್ತಿ, ಬ್ಯಾಂಕ್‌ ವಿವರ, ಜಮೀನು ಇವುಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಆದರೆ ಪ್ರಜ್ವಲ್‌ ರೇವಣ್ಣ ಸರಿಯಾಗಿ ಮಾಹಿತಿ ನೀಡದ ಕಾರಣ ಅವರನ್ನು ಹೈಕೋರ್ಟ್‌ ಅನರ್ಹ ಮಾಡಿದೆ ಎಂದು ತಿಳಿಸಿದರು. 

ಈ ಪ್ರಜ್ವಲ್‌ ರೇವಣ್ಣ ಅವರ ಅಕ್ರಮ ಕೆಲಸಕ್ಕೆ ಹೆಚ್‌ಡಿ ರೇವಣ್ಣ ಸಹಕಾರ ನೀಡಿದ್ದಾರೆ. ಸಹಕಾರ ನೀಡಿದ್ದರಿಂದ ಹೆಚ್‌ಡಿ ರೇವಣ್ಣ ಅವರು ತಪ್ಪಿತಸ್ಥರು. ಅವರನ್ನು ಅನರ್ಹಗೊಳಿಸಬೇಕೆಂದು ಎಂದು ನಾವು ಮನವಿ ಮಾಡಿದ್ದೇವೆ. ಕೋರ್ಟ್‌ ಮನವಿ ಪುರಸ್ಕರಿಸಿ ರೇವಣ್ಣ ಅವರಿಗೂ ನೋಟಿಸ್‌ ಜಾರಿ ಮಾಡಿದೆ ಎಂದು ಹೇಳಿದರು.

ಮಂಜು ಸಹ ಅಕ್ರಮ ಮಾಡಿದ್ದಾರೆ ಎಂದು ಪ್ರಜ್ವಲ್‌ ರೇವಣ್ಣ ಕೋರ್ಟ್‌ ಗಮನಕ್ಕೆ ತಂದಿದ್ದರು. ಹೀಗಾಗಿ ಎ ಮಂಜು ಅವರಿಗೂ ನಿಮ್ಮನ್ನು ಯಾಕೆ ಅನರ್ಹ ಮಾಡಬಾರದು ಎಂದು ಕೋರಿ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಇಬ್ಬರು ಅನರ್ಹರಾಗಲಿದ್ದು ಇಬ್ಬರ ವಿರುದ್ಧವೂ ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಪ್ರಮೀಳಾ ನೇಸರ್ಗಿ ತಿಳಿಸಿದರು.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರಜ್ವಲ್ ತಂದೆ ಹೆಚ್ ಡಿ ರೇವಣ್ಣ, ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತೇವೆ. ಕಾನೂನು ಮುಂದೆ ಎಷ್ಟೇ ದೊಡ್ಡವರಿದ್ದರೂ ಗೌರವ ನೀಡಲೇಬೇಕು. ಹೈಕೋರ್ಟ್ ಆದೇಶ ಪ್ರಶ್ನಿಸಿ ಪ್ರಜ್ವಲ್ ಮೇಲ್ಮನವಿ ಸಲ್ಲಿಸುವ ಬಗ್ಗೆ ಅವರ ಅಡ್ವೊಕೇಟ್ ಬಳಿ ಚರ್ಚೆ ಮಾಡಿ ನಿರ್ಧಾರ ಮಾಡಬಹುದು ಎಂದರು.

ಎ ಮಂಜುನಾಥ್ ಪ್ರತಿಕ್ರಿಯೆ: ಇನ್ನು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕರ್ನಾಟಕ ಹೈಕೋರ್ಟ್ ಅನರ್ಹಗೊಳಿಸಿರುವ ವಿಚಾರವಾಗಿ ಜೆಡಿಎಸ್ ಶಾಸಕ, ದೂರುದಾರರೂ ಆಗಿರುವ ಎ.ಮಂಜು ಪ್ರತಿಕ್ರಿಯಿಸಿದ್ದು, ನಮ್ಮ ಕಾನೂನು ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದು ಹೇಳಿದ್ದಾರೆ. ಹೈಕೋರ್ಟ್​ ತೀರ್ಪನ್ನು ಸ್ವಾಗತಿಸುವೆ, ಖುಷಿ ಸಿಕ್ಕಿದೆ. ಸುಳ್ಳು ಮಾಹಿತಿ ನೀಡಿದ್ದರಿಂದ ಹೈಕೋರ್ಟ್ ಅವರನ್ನು ಅನರ್ಹಗೊಳಿಸಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ. 

ಅವರು ಸರಿಯಿದ್ದೇವೆ ಅನ್ನುವುದಾದರೆ ಕಾನೂನು ಹೋರಾಟ ಮಾಡಲಿ. ಸುಪ್ರೀಂ ಕೋರ್ಟ್​ನಲ್ಲಿ ಕಾನೂನು ಹೋರಾಟಮಾಡಿ ಸಮರ್ಥಿಸಿಕೊಳ್ಳಲಿ. ಸುಳ್ಳು ಮಾಹಿತಿ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದರೆ ಶಿಕ್ಷೆ ಅನುಭವಿಸಲಿ. ಯಾರೇ ಆದರೂ ಸರಿ, ಚುನಾವಣಾ ಆಯೋಗಕ್ಕೆ ಸರಿಯಾದ ಮಾಹಿತಿ ನೀಡಬೇಕು. ಬದಲಾದ ಸನ್ನಿವೇಶದಲ್ಲಿ ನಾನು ಜೆಡಿಎಸ್​ ಶಾಸಕನಾಗಿದ್ದೇನೆ. ಹಾಗೆಂದು ಜೆಡಿಎಸ್ ಸೇರುವಾಗ ಯಾವುದೇ ಷರತ್ತು ವಿಧಿಸಿರಲಿಲ್ಲ. ಪ್ರಜ್ವಲ್ ವಿರುದ್ಧ ಕೇಸ್ ದಾಖಲಿಸಿದ್ದ ವಿಚಾರವಾಗಿ ಅಂದೇ ಮಾಹಿತಿ ನೀಡಿದ್ದೆ.

ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಮಾತುಕತೆ ವೇಳೆಯೂ ಹೇಳಿದ್ದೆ. ಕೇಸ್ ವಿಚಾರ ಬೇರೆ, ನೀನು ಪಕ್ಷಕ್ಕೆ ಸೇರು ಎಂದು ಹೇಳಿದ್ದರು. ನಮ್ಮ ಮಕ್ಕಳು, ಮೊಮ್ಮಕ್ಕಳ ಜೊತೆ ನೀನು ಸೇರು ಎಂದು ಹೇಳಿದ್ದರು. ದೇವೇಗೌಡರ ಸೂಚನೆಯಂತೆ ಜೆಡಿಎಸ್ ಸೇರಿ ಶಾಸಕನಾಗಿದ್ದೇನೆ. ಒಂದು ವೇಳೆ ಅವರು ನನ್ನ ಸಲಹೆ ಕೇಳಿದರೆ ಸಹಕಾರ ನೀಡುವೆ ಎಂದು ಮಂಜು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com