ಬಂಡೀಪುರ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಹೈಕೋರ್ಟ್ ಅನುಮತಿ

ಬಂಡೀಪುರ ಸೂಕ್ಷ್ಮ ಪರಿಸರ ವಲಯದಲ್ಲಿ ಬರುವ ಕುಂದುಕರೆ ವ್ಯಾಪ್ತಿಯ ಜಕ್ಕಳಿ ಗ್ರಾಮದಲ್ಲಿನ 1.24 ಎಕರೆ ಇರುವ ತಮ್ಮ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ನಟ ಗಣೇಶ್‌ ಅವರಿಗೆ ಹೈಕೋರ್ಟ್‌ ಅನುಮತಿ ನೀಡಿದ್ದು, ಇದು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಆದೇಶಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬಂಡೀಪುರ ಸೂಕ್ಷ್ಮ ಪರಿಸರ ವಲಯದಲ್ಲಿ ಬರುವ ಕುಂದುಕರೆ ವ್ಯಾಪ್ತಿಯ ಜಕ್ಕಳಿ ಗ್ರಾಮದಲ್ಲಿನ 1.24 ಎಕರೆ ಇರುವ ತಮ್ಮ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ನಟ ಗಣೇಶ್‌ ಅವರಿಗೆ ಹೈಕೋರ್ಟ್‌ ಅನುಮತಿ ನೀಡಿದ್ದು, ಇದು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಆದೇಶಿಸಿದೆ.

ನಟ ಗಣೇಶ್‌ ಅವರು ಸಲ್ಲಿಸಿದ್ದ ಮೆಮೊ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಅರ್ಜಿದಾರರು ಕಟ್ಟಡ ನಿರ್ಮಾಣ ಮಾಡಬಹುದು ಎಂದು ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಶ್ರೀಧರ್‌ ಪ್ರಭು ಅವರು “2023ರಲ್ಲಿ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ ಆದೇಶವಿದ್ದು, ಕಟ್ಟಡ ನಿರ್ಮಾಣಕ್ಕೆ ಯಾವುದೇ ನಿರ್ಬಂಧವಿಲ್ಲ. ಕಟ್ಟಡ ನಿರ್ಮಾಣ ನಿಯಂತ್ರಣ ಅಥವಾ ನಿಷೇಧಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಗೆ ಯಾವುದೇ ಅಧಿಕಾರವಿಲ್ಲ. ಇದರಿಂದ ಸ್ಥಳೀಯರಿಗೆ ಹಲವು ಸಮಸ್ಯೆಗಳಾಗುತ್ತಿವೆ. ಬೇರೆಯವರಿಗೆ ಮನೆ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಅನುಮತಿ ನೀಡಿದೆ. ಆದರೆ, ಅರ್ಜಿದಾರರಿಗೆ ನಿರ್ಬಂಧಿಸಿದೆ. ಒಂದೊಮ್ಮೆ ಅರ್ಜಿದಾರರ ತಪ್ಪು ಕಂಡು ಬಂದರೆ ಕಟ್ಟಡ ತೆರವು ಮಾಡಲಾಗುವುದು” ಎಂದು ಪೀಠಕ್ಕೆ ಭರವಸೆ ನೀಡಿದರು.

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ತಾತ್ಕಾಲಿಕ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಮಾತ್ರ ಅವಕಾಶವಿದೆ” ಎಂದು ಆಕ್ಷೇಪಿಸಿದರು.

ಇದಕ್ಕೆ ಪೀಠವು “ಹಾಗಾದರೆ ಬೇರೆಯವರಿಗೆ ಕಟ್ಟಡ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಹೇಗೆ ಅನುಮತಿಸಿದೆ. ಇದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಹೊಸ ದಾಖಲೆಗಳನ್ನು ನೀಡಿದ್ದಾರೆ. ಮೇಲ್ನೋಟಕ್ಕೆ ಅವೆಲ್ಲವೂ ಹೊಸ ಅನುಮತಿಗಳೇ ಆಗಿವೆ. ಹೀಗಾಗಿ, ಅರ್ಜಿದಾರರಿಗೆ ಕಟ್ಟಡ ನಿರ್ಮಾಣ ಮಾಡಲು ಅನುಮತಿ ಇದೆ” ಎಂದಿತು.

ಮುಂದುವರಿದು ಪೀಠವು, ಬಂಡೀಪುರ ಸೂಕ್ಷ್ಮ ಪರಿಸರ ವಲಯ ನಿಗಾ ಸಮಿತಿಗೆ ನೀಡಬೇಕಾದ ಮನವಿಯನ್ನು ಅಡ್ವೊಕೇಟ್‌ ಜನರಲ್‌ ಅವರ ಮೂಲಕ ಸಲ್ಲಿಸುವಂತೆ ಅರ್ಜಿದಾರರಿಗೆ ನಿರ್ದೇಶಿಸಿತು. ಅಲ್ಲದೇ, ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ 12ಕ್ಕೆ ಮುಂದೂಡಿದೆ.

“ಬಂಡೀಪುರ ಸೂಕ್ಷ್ಮ ಪರಿಸರ ವಲಯ ನಿಗಾ ಸಮಿತಿಯ ಸದಸ್ಯ ಕಾರ್ಯದರ್ಶಿ ಅವರು ಸಲ್ಲಿಸಲು ಸೂಚಿಸಿರುವ ದಾಖಲೆಗಳನ್ನು ನಟ ಗಣೇಶ್‌ ಅವರು ಏಳು ದಿನಗಳಲ್ಲಿ ಸಲ್ಲಿಸಬೇಕು. ಇದಾದ ನಾಲ್ಕು ವಾರಗಳಲ್ಲಿ ಸಂಬಂಧಿತ ಅಧಿಕಾರಿ ಕ್ರಮಕೈಗೊಳ್ಳಬೇಕು” ಎಂದು ಆಗಸ್ಟ್‌ 21ರಂದು ಆದೇಶ ಮಾಡಿ, ನ್ಯಾಯಾಲಯವು ಅರ್ಜಿ ಇತ್ಯರ್ಥಪಡಿಸಿತ್ತು. ಆದರೆ, ಆದೇಶ ಬಿಡುಗಡೆಯಾಗದಿರುವ ಹಿನ್ನೆಲೆಯಲ್ಲಿ ಅರ್ಜಿದಾರರ ಪರ ವಕೀಲರು ಮೆಮೊ ಸಲ್ಲಿಸಿ, ಅದರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನ ಕುರಿತು ನ್ಯಾಯಾಲಯದ ಗಮನ ಸೆಳೆದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com