ಬೆಂಗಳೂರು: ಸಾಲ ವಸೂಲಾತಿ ಏಜೆಂಟ್ ಒಬ್ಬ ತನ್ನ ಪತ್ನಿಯ ಮಾರ್ಫ್ ಮಾಡಿದ ಅಶ್ಲೀಲ ಫೋಟೋ ಕಳುಹಿಸಿದ ಹಿನ್ನೆಲೆಯಲ್ಲಿ 42 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚನ್ನಪಟ್ಟಣ ತಾಲೂಕು ಶೆಟ್ಟಿಹಳ್ಳಿ ನಿವಾಸಿ ಪ್ರಕಾಶ್ ಮೃತ ದುರ್ದೈವಿ. ಪ್ರಕಾಶ್ ಪತ್ನಿ ಚನ್ನಪಟ್ಟಣದ ಮಂಗಳವಾರಪೇಟೆಯಲ್ಲಿರುವ ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಸಾಲ ಮಾಡಿದ್ದರು. ಪ್ರಕಾಶ್ ಅವರ ಪತ್ನಿಯ ಹೆಸರಿನಲ್ಲಿ ಸಾಲವನ್ನು ತೆಗೆದುಕೊಳ್ಳಲಾಗಿತ್ತು. ಹೀಗಾಗಿ ಆಕೆ ತಮ್ಮ ಫೋನ್ ಸಂಖ್ಯೆ ಮತ್ತು ಫೋಟೋ ಮುಂತಾದ ವಿವರಗಳನ್ನು ಹಂಚಿಕೊಂಡಿದ್ದರು.
ಮಂಡ್ಯದ ಮಳವಳ್ಳಿಯ ಸಾಲ ವಸೂಲಾತಿ ಏಜೆಂಟ್ ಆಗಿರುವ ಆರೋಪಿ ಕೆಂಪರಾಜು ಸಾಲ ಮರುಪಾವತಿ ವಿಚಾರವಾಗಿ ತನಗೆ ಕರೆ ಮಾಡಿ ಸ್ನೇಹ ಬೆಳೆಸಲು ಯತ್ನಿಸುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಕೆಂಪರಾಜು ಹೊತ್ತಲ್ಲದ ಹೊತ್ತಿನಲ್ಲಿ ಕರೆ ಮಾಡಿ ನಗ್ನ ಫೋಟೋ ಕಳುಹಿಸುವಂತೆ ಕೇಳಿದ್ದಾನೆ.
ಆಕೆ ನಿರಾಕರಿಸಿದ್ದರಿಂದ ಆಕೆಯ ಅಶ್ಲೀಲ ಫೋಟೋಗಳನ್ನು ಸೃಷ್ಟಿಸಿ ಪತಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಆತನ ಒತ್ತಡಕ್ಕೆ ಆಕೆ ಮಣಿಯದೇ ಇದ್ದಾಗ ನಕಲಿ ಅಶ್ಲೀಲ ಚಿತ್ರಗಳನ್ನು ತೋರಿಸಿ ಹಣ ಮತ್ತು ಚಿನ್ನಾಭರಣಕ್ಕೆ ಬೇಡಿಕೆ ಇಡುತ್ತಿದ್ದ. ಅಲ್ಲದೇ ಅದನ್ನು ಕುಟುಂಬದವರು ಹಾಗೂ ಸಂಬಂಧಿಕರೊಂದಿಗೆ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಆಗಸ್ಟ್ 30 ರಂದು ಕೆಂಪರಾಜು ತನ್ನ ಅಶ್ಲೀಲ ಫೋಟೋಗಳನ್ನು ಮಾರ್ಫ್ ಮಾಡಿ ಪತಿಗೆ ಕಳುಹಿಸಿದ್ದ. ಇದರಿಂದ ಮನನೊಂದ ಪ್ರಕಾಶ್ ಶನಿವಾರ ಮುಂಜಾನೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಕೆಂಪರಾಜು ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಐಟಿ ಕಾಯ್ದೆ ಸೇರಿದಂತೆ ಇತರೆ ಕೇಸ್ ದಾಖಲಿಸಲಾಗಿದೆ. ತಲೆ ಮರೆಸಿಕೊಂಡಿರುವ ಆತನನ್ನು ಬಂಧಿಸಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಚನ್ನಪಟ್ಟಣ ಟೌನ್ ಪೊಲೀಸರು ತಿಳಿಸಿದ್ದಾರೆ.
Advertisement