ಮಂಗಳೂರು: ಉಳ್ಳಾಲ ಸಮುದ್ರದಲ್ಲಿ ಮುಳುಗಿ ಎಜೆ ಆಸ್ಪತ್ರೆ ವೈದ್ಯ ಸಾವು
ಸೋಮೇಶ್ವರ ರುದ್ರಪಾದೆ ಸಮೀಪ ಭಾನುವಾರ ರಾತ್ರಿ ಸಮುದ್ರ ವಿಹಾರಕ್ಕೆ ಬಂದಿದ್ದ ಐವರು ವೈದ್ಯರಲ್ಲಿ ಒಬ್ಬರು ಸಮುದ್ರದಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಸೋಮವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.
Published: 04th September 2023 01:48 PM | Last Updated: 04th September 2023 04:08 PM | A+A A-

ಡಾ. ಆಶೀಕ್ ಗೌಡ
ಉಳ್ಳಾಲ: ಸೋಮೇಶ್ವರ ರುದ್ರಪಾದೆ ಸಮೀಪ ಭಾನುವಾರ ರಾತ್ರಿ ಸಮುದ್ರ ವಿಹಾರಕ್ಕೆ ಬಂದಿದ್ದ ಐವರು ವೈದ್ಯರಲ್ಲಿ ಒಬ್ಬರು ಸಮುದ್ರದಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಸೋಮವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.
ಸಹಪಾಠಿಗಳೊಂದಿಗೆ ಸಮುದ್ರ ವಿಹಾರಕ್ಕೆಂದು ಬಂದಿದ್ದ ವೈದ್ಯರೊಬ್ಬರು ರುದ್ರ ಪಾದೆಯಿಂದ ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಸೋಮೇಶ್ವರದಲ್ಲಿ ರವಿವಾರ ರಾತ್ರಿ 11 ಗಂಟೆ ವೇಳೆ ಸಂಭವಿಸಿದ್ದು ಸೋಮವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.
ಮೃತರನ್ನು ರಾಮನಗರ ನಿವಾಸಿ ಡಾ. ಆಶೀಕ್ ಗೌಡ (30) ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸರ್ಜನ್ ಆಗಿರುವ ಆಶಿಕ್ ಗೌಡ ಇನ್ನೋರ್ವ ಸಹೋದ್ಯೋಗಿ ಸರ್ಜನ್ ಕುಂದಾಪುರ ಮೂಲದ ಡಾ.ಪ್ರದೀಶ್ ಹಾಗೂ ಇಂಟನ್೯ಶಿಪ್ ನಡೆಸುತ್ತಿರುವ ಪ್ರತೀಕ್ಷಾ, ಅಶ್ವಿನಿ ಮತ್ತು ಪ್ರಜ್ಞಾ ಈ ಮೂವರು ವೈದ್ಯೆಯರ ಜೊತೆಗೆ ಸಮುದ್ರ ವಿಹಾರಕ್ಕೆಂದು ಸೋಮೇಶ್ವರಕ್ಕೆ ಬಂದಿದ್ದರು.
ಇದನ್ನೂ ಓದಿ: ಕನ್ಯಾಕುಮಾರಿ ಬೀಚ್‌ನಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ಪ್ರವಾಸಿಗರು ಸಾವು, ಯುವತಿ ರಕ್ಷಣೆ
ರುದ್ರಪಾದೆಯಲ್ಲಿ ವಿಹರಿಸುತ್ತಿದ್ದ ಸಂದರ್ಭ ಡಾ.ಪ್ರದೀಶ್ ಕಲ್ಲಿನಿಂದ ಸಮುದ್ರಕ್ಕೆ ಜಾರಿ ಬಿದ್ದಿದ್ದಾರೆ. ನೀರಿನಲ್ಲಿ ನಿಂತು ರಕ್ಷಣೆಗೆ ಕೂಗುತ್ತಿದ್ದ ಸಂದರ್ಭ ಡಾ.ಆಶೀಕ್ ಗೌಡ ಕಾಪಾಡಲು ಪ್ರಯತ್ನಿಸಿದಾಗ ಕಾಲುಜಾರಿ ಬಿದ್ದು ಸಮುದ್ರಪಾಲಾಗಿದ್ದಾರೆ. ಡಾ. ಪ್ರದೀಶ್ ಸಣ್ಣ ಕಲ್ಲು ಹಿಡಿದು ಈಜಿ ಬಚಾವಾಗಿದ್ದಾರೆ ಎಂದು ತಿಳಿದು ಬಂದಿದೆ.
ಡಾ. ಆಶಿಕ್ ರನ್ನು ರಕ್ಷಿಸಲು ತಡರಾತ್ರಿವರೆಗೂ ಅಗ್ನಿ ಶಾಮಕ ದಳ, ಉಳ್ಳಾಲ ಪೊಲೀಸ್ ಠಾಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಲಿಲ್ಲ.