ಬೆಂಗಳೂರು: ದೇಶದಲ್ಲಿಯೇ ಮೊದಲ ‘ಭೂಗತ ವಿದ್ಯುತ್ ಟ್ರಾನ್ಸ್‌ಫಾರ್ಮರ್’ ಕೇಂದ್ರ ಮಲ್ಲೇಶ್ವರಂನಲ್ಲಿ ಸ್ಥಾಪನೆ

ಭಾರತದಲ್ಲಿ ಮೊದಲ ಬಾರಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  ಸಹಯೋಗದೊಂದಿಗೆ ಬೆಂಗಳೂರಿನ ಮಲ್ಲೇಶ್ವರಂ ವಾರ್ಡ್‌ನಲ್ಲಿ ಫುಟ್‌ಪಾತ್ ಅಡಿಯಲ್ಲಿ ಟ್ರಾನ್ಸ್‌ಫಾರ್ಮರ್ ಸೆಂಟರ್ ಕೇಂದ್ರ ಸ್ಥಾಪಿಸಿದೆ.
ಭೂಗತ ವಿದ್ಯುತ್ ಪರಿವರ್ತಕ ಉದ್ಘಾಟನೆ
ಭೂಗತ ವಿದ್ಯುತ್ ಪರಿವರ್ತಕ ಉದ್ಘಾಟನೆ

ಬೆಂಗಳೂರು: ಭಾರತದಲ್ಲಿ ಮೊದಲ ಬಾರಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಬೆಂಗಳೂರಿನ ಮಲ್ಲೇಶ್ವರಂ ವಾರ್ಡ್‌ನಲ್ಲಿ ಫುಟ್‌ಪಾತ್ ಅಡಿಯಲ್ಲಿ ಟ್ರಾನ್ಸ್‌ಫಾರ್ಮರ್ ಸೆಂಟರ್ ಕೇಂದ್ರ ಸ್ಥಾಪಿಸಿದೆ.

ಬೆಂಗಳೂರು ಜನ-ಜಾನುವಾರುಗಳಿಗೆ ವಿದ್ಯುತ್ ಅವಘಡಗಳಿಂದ ತಪ್ಪಿಸುವುದು ಸೇರಿ ಪಾದಚಾರಿ ಮಾರ್ಗಗಳಲ್ಲಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವ ಕಾರ್ಯಕ್ಕೆ ಗುಡ್ ಬೈ ಹೇಳಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನ ಮಲ್ಲೇಶ್ವರದ 15ನೇ ಕ್ರಾಸ್ ನಲ್ಲಿ 500 ಕೆವಿಎ ಸಾಮರ್ಥ್ಯದ ‘ಭೂಗತ ವಿದ್ಯುತ್ ಪರಿವರ್ತಕ’ವನ್ನು ಅಳವಡಿಸಲಾಗಿದೆ.

ಬೆಸ್ಕಾಂ ಮತ್ತು ಬಿಬಿಎಂಪಿ ಸಹಯೋಗದಲ್ಲಿ 1.97 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ‘ಭೂಗತ ವಿದ್ಯುತ್ ಪರಿವರ್ತಕ’ಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್ ಮಂಗಳವಾರ ಚಾಲನೆ ನೀಡಿದರು. ಬೆಸ್ಕಾಂನಲ್ಲಿನ ತಾಂತ್ರಿಕ ನಾವಿನ್ಯತಾ ಕೇಂದ್ರದ (ಟಿಐಟಿ) ಉಪ ಪ್ರಧಾನ ವ್ಯವಸ್ಥಾಪಕ ಕೆ. ಬಾಲಾಜಿ ನೇತೃತ್ವದ ತಂಡವು ತಾಂತ್ರಿಕ ಕೆಲಸಗಳನ್ನು ಮಾಡಿದೆ. ಈ ಯೋಜನೆಯ ಸಿವಿಲ್ ಕಾಮಗಾರಿಗೆ ಬಿಬಿಎಂಪಿ 64 ಲಕ್ಷ ರೂ. ಹಾಗೂ ಬೆಸ್ಕಾಂ 1.33 ಕೋಟಿ ರೂ. ವೆಚ್ಚ ಮಾಡಿದೆ. 14 ಮೀ. ಉದ್ದ, 5 ಮೀ. ಅಗಲ ಮತ್ತು 4 ಮೀ. ಆಳದಲ್ಲಿ ಭೂ ಪರಿವರ್ತಕವನ್ನು ಅಳವಡಿಸಲಾಗಿದೆ. 2020ರ ಮೇ ನಲ್ಲಿ ಕಾಮಗಾರಿ ಆರಂಭಿಸಿ 2023ರ ಮೇ ನಲ್ಲಿ ಪೂರ್ಣಗೊಳಿಸಿದೆ.

ಸಾಮಾನ್ಯ ಪರಿವರ್ತಕಗಳನ್ನು ರಸ್ತೆಗಳಲ್ಲಿ ನೇತು ಹಾಕಿರಲಾಗುತ್ತದೆ. ಆದರೆ, ಹೊಸ ಪದ್ಧತಿಯಲ್ಲಿ ಪರಿವರ್ತಕ ಮತ್ತು ಆರ್‌ಎಂಯುಗಳು ಪೂರ್ಣವಾಗಿ ನೆಲದಡಿ ಬರುತ್ತವೆ. ನೇತು ಹಾಕಿರುವ ಪರಿವರ್ತಕಗಳು ಆಯಿಲ್ (ತೈಲ) ಟೈಪ್ ಪರಿವರ್ತಕಗಳಾಗಿರುತ್ತವೆ. ಇದು 500 ಕೆವಿಎ ತೈಲರಹಿತ ಡ್ರೈ ಟೈಪ್ ಪರಿವರ್ತಕವಾಗಿದೆ. ಇದರಿಂದ ಅಗ್ನಿ ಅವಘಡವಾಗುವುದನ್ನು ತಪ್ಪಿಸಬಹುದಾಗಿದೆ.

ಭೂಗತ ಪ್ರದೇಶದಲ್ಲಿ ಅಲ್ಲಿನ ಯಂತ್ರಗಳು ಕಾರ್ಯನಿರ್ವಹಿಸುವ ವೇಳೆ ಬಿಸಿಯಾಗದಂತೆ ತಾಪಮಾನ ನಿಯಂತ್ರಿತ ಮತ್ತು ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ವೇಳೆ ಮಳೆಯಾದಂತಹ ಸಮಯದಲ್ಲಿ ನೀರು ಸೋರಿದರೆ ಅದನ್ನು ಹೊರಗೆ ಹಾಕಲು ಸ್ವಯಂಚಾಲಿತ 1 ಎಚ್.ಪಿ. ವಾಟರ್ ಪಂಪ್, 2 ಕೆವಿಎ ಯುಪಿಎಸ್, ವಿದ್ಯುತ್ ದೀಪಗಳು, ಅಗ್ನಿಶಾಮಕ ಉಪಕರಣಗಳನ್ನು ಅಳವಡಿಸಲಾಗಿದೆ. 8 ವೇ ಸಾಲಿಡ್ ಸ್ಟೇಟ್ ರಿಂಗ್ ಮೈನ್ ಯೂನಿಟ್ ಆಗಿದೆ. 5 ವೇ ಎಲ್.ಟಿ. ವಿತರಣಾ ಪೆಟ್ಟಿಗೆ ಅಳವಡಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಸುಮಾರು 300 ಟ್ರಾನ್ಸ್‌ಫಾರ್ಮರ್‌ಗಳು ಅಪಾಯಕಾರಿಯಾಗಿವೆ. ಒಂದು ಟ್ರಾನ್ಸ್‌ಫಾರ್ಮರ್‌ ಅನ್ನು ನೆಲದಡಿಗೆ ಸ್ಥಳಾಂತರಿಸಲು ಸುಮಾರು 2 ಕೋಟಿ ರೂ. ವೆಚ್ಟವಾಗಲಿದೆ. ಅವೆಲ್ಲವನ್ನೂ ಭೂಗತಗೊಳಿಸಲು ನಮ್ಮ ಬಳಿ ಸಾಕಷ್ಟು ಹಣ ಇಲ್ಲದಿದ್ದರೂ, ಅಪಾಯಕಾರಿಯಾದವುಗಳನ್ನು ಸಾಧ್ಯವಿರುವ ಕಡೆ ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಯಾವುದೇ ಸ್ಥಳ ಲಭ್ಯವಿಲ್ಲದ ಕಾರಣ ಮುಂಬರುವ ಉಪ ಕೇಂದ್ರಗಳನ್ನು ನೆಲದಡಿಯಲ್ಲಿ ಸ್ಥಾಪಿಸಲಾಗುವುದು ಎಂದು ಜಾರ್ಜ್ ಹೇಳಿದರು. ರಾಜ್ಯದಲ್ಲಿ 17 ಮಿಲಿಯನ್ ಯೂನಿಟ್ ಕೊರತೆ ಎದುರಿಸುತ್ತಿದ್ದು, ಹೈಡಲ್ ವಿದ್ಯುತ್ ಮೂಲಗಳನ್ನು ಬಲಪಡಿಸಲು ಮಳೆಗಾಗಿ ಕಾಯಲಾಗುತ್ತಿದೆ ಎಂದರು.

ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಜಾರ್ಜ್, ನಾವು ಇನ್ನೂ ಯಾವುದೇ ಲೋಡ್ ಶೆಡ್ಡಿಂಗ್ ಆರಂಭಿಸಿಲ್ಲ. ಹಾಗೆ ಮಾಡಿದರೆ ಅಧಿಕೃತವಾಗಿ ಘೋಷಣೆ ಮಾಡುತ್ತೇವೆ. ಬೆಸ್ಕಾಂ ಕೈಗೊಂಡಿರುವ ನಿರ್ವಹಣಾ ಕಾಮಗಾರಿಯಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾಗಿರಬಹುದು.

ರಾಜ್ಯವು  ಮಳೆಯ ಕೊರತೆ ಎದುರಿಸುತ್ತಿದೆ ಮತ್ತು ವಿದ್ಯುತ್ ಬೇಡಿಕೆಯು ಬೇಸಿಗೆಯಂತೆಯೇ ಇದೆ. ಈಗಾಗಲೇ ಪ್ರತಿದಿನ 40 ಕೋಟಿ ರೂ. ವಿದ್ಯುತ್ ಖರೀದಿಸುತ್ತಿದ್ದೇವೆ. ಭಾರತದಾದ್ಯಂತ ವಿದ್ಯುತ್‌ಗೆ ಭಾರಿ ಬೇಡಿಕೆ ಇರುವುದರಿಂದ ಹೆಚ್ಚಿನ ವಿದ್ಯುತ್‌ ಖರೀದಿಸುವುದು ಕೂಡ ಕಷ್ಟ' ಎಂದು ಜಾರ್ಜ್‌ ಹೇಳಿದ್ದಾರೆ.

ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮಾತನಾಡಿ, ಮುಂದಿನ ದಿನಗಳಲ್ಲಿ ಲೋಡ್‌ ಶೆಡ್ಡಿಂಗ್‌ ಆಗುವ ಸಾಧ್ಯತೆ ಇದೆ, ವಿದ್ಯುತ್ ಕೊರತೆಯಿಂದ ನಾಗರಿಕರಿಗೆ ತೊಂದರೆಯಾಗಬಾರದು ಮತ್ತು ವಿದ್ಯುತ್ ಕೊರತೆ ನೀಗಿಸಲು ಸರ್ಕಾರವು ವಿದ್ಯುತ್ ಖರೀದಿಸಲು ಹಿಂಜರಿಯಬಾರದು ಎಂದು ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com