ದುರ್ಬಲ ಮುಂಗಾರು: ಜಲ ವಿದ್ಯುತ್ ಉತ್ಪಾದನೆಯಲ್ಲಿ ತೀವ್ರ ಕಡಿತ! ಲೋಡ್ ಶೆಡ್ಡಿಂಗ್ ಆಗುತ್ತಾ?

ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ಪ್ರಮುಖ ವಿದ್ಯುತ್ ಮೂಲವಾಗಿರುವ ಜಲ ವಿದ್ಯುತ್ ಉತ್ಪಾದನೆಯಲ್ಲಿ ತೀವ್ರ ಕಡಿತವಾಗಿದ್ದು, ಜನತೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಗೆ ಸಾಕಷ್ಟು ತೊಂದರೆಗಳು ಎದುರಾಗಬಹುದು ಅಲ್ಲದೇ, ಆರ್ಥಿಕವಾಗಿಯೂ ಹೆಚ್ಚಿನ ಹೊರೆಯಾಗಲಿದೆ.  
ಕದ್ರಾ ಅಣೆಕಟ್ಟು
ಕದ್ರಾ ಅಣೆಕಟ್ಟು

ಕಾರವಾರ: ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ಪ್ರಮುಖ ವಿದ್ಯುತ್ ಮೂಲವಾಗಿರುವ ಜಲ ವಿದ್ಯುತ್ ಉತ್ಪಾದನೆಯಲ್ಲಿ ತೀವ್ರ ಕಡಿತವಾಗಿದ್ದು, ಜನತೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಗೆ ಸಾಕಷ್ಟು ತೊಂದರೆಗಳು ಎದುರಾಗಬಹುದು ಅಲ್ಲದೇ, ಆರ್ಥಿಕವಾಗಿಯೂ ಹೆಚ್ಚಿನ ಹೊರೆಯಾಗಲಿದೆ. ಮಾನ್ಸೂನ್ ಆರಂಭವಾದಾಗಿನಿಂದ ಅಲ್ಪ ಪ್ರಮಾಣದ ಮಳೆಯಾಗಿರುವುದು ಇದಕ್ಕೆ ಕಾರಣ. ಜಲವಿದ್ಯುತ್ ಉತ್ಪಾದನಾ ಘಟಕಗಳು ಮುಂದಿನ ನಾಲ್ಕು ತಿಂಗಳವರೆಗೆ ಮಾತ್ರ ವಿದ್ಯುತ್ ಉತ್ಪಾದಿಸಬಹುದಾಗಿರುವುದರಿಂದ ಪರಿಸ್ಥಿತಿ ಸಾಕಷ್ಟು ಕಠೋರವಾಗಿದೆ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯವು ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಮೂಲಗಳಿಂದ 11,000 ಮೆಗಾವ್ಯಾಟ್ ಗಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ, ಆದರೆ ಈಗ 4,000 ಮೆಗಾವ್ಯಾಟ್ ಗಿಂತ ಕಡಿಮೆ ವಿದ್ಯುತ್ ಉತ್ಪಾದಿಸುತ್ತಿದೆ. ರಾಜ್ಯದಲ್ಲಿನ ಜಲವಿದ್ಯುತ್ ಜಲಾಶಯಗಳು ಅರ್ಧದಷ್ಟು ಕೂಡ ಭರ್ತಿಯಾಗದ ಕಾರಣ ಜಲಾಶಯಗಳಲ್ಲಿನ ಪ್ರಸ್ತುತ ನೀರಿನ ಮಟ್ಟವು ಇನ್ನೂ 110 ದಿನಗಳವರೆಗೆ ಮಾತ್ರ ವಿದ್ಯುತ್ ಉತ್ಪಾದನೆಗೆ ಸಾಕಾಗುತ್ತದೆ. 10 ಘಟಕಗಳಿಂದ 1,035 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಲಿಂಗನಮಕ್ಕಿ ಜಲಾಶಯ ಈಗ ಸರಾಸರಿ 453 ಮೆಗಾವ್ಯಾಟ್ ಉತ್ಪಾದಿಸುತ್ತಿದೆ. ಮೂರು ಘಟಕಗಳಿಂದ 900 ಮೆಗಾವ್ಯಾಟ್ ವರೆಗೂ ವಿದ್ಯುತ್ ಉತ್ಪಾದಿಸುತ್ತಿದ್ದ ವಾರಾಹಿ ಅಥವಾ ಮಣಿ ಅಣೆಕಟ್ಟು  ಈಗ 230 ಮೆಗಾವ್ಯಾಟ್ ಉತ್ಪಾದಿಸುತ್ತದೆ. 42 ಮೆಗಾವ್ಯಾಟ್ ಸಾಮರ್ಥ್ಯದ ದೇಶದ ಮೊದಲ ವಿದ್ಯುತ್ ಕೇಂದ್ರ ಶಿವನಸಮುದ್ರದಲ್ಲಿ ಪ್ರಸ್ತುತ ಕೇವಲ 20 ಮೆಗಾವ್ಯಾಟ್ ವಿದ್ಯುತ್  ಉತ್ಪಾದಿಸಲಾಗುತ್ತಿದೆ. 

ಕಾಳಿ ನದಿಯುದ್ದಕ್ಕೂ ಇರುವ ಎಲ್ಲಾ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳು ಅತ್ಯಲ್ಪ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುತ್ತಿವೆ. ಪಶ್ಚಿಮ ಘಟ್ಟಕ್ಕೆ ಸಮೀಪದಲ್ಲಿರುವುದರಿಂದ ಬೃಹತ್ ಜಲಾನಯನ ಪ್ರದೇಶ ಹೊಂದಿರುವ ಸೂಪಾದಲ್ಲಿ ತಲಾ 540 ಮೆಗಾವ್ಯಾಟ್ ಸಾಮರ್ಥ್ಯದ 2 ಘಟಕಗಳಿವೆ. ಜಲಾಶಯವು ಎತ್ತರದಲ್ಲಿ ಇರುವುದರಿಂದ ನೀರನ್ನು ಬಳಸಿಕೊಳ್ಳಲಾಗುತ್ತದೆ ಮತ್ತು ನದಿಗೆ ಬಿಡಲಾಗುತ್ತದೆ. ಇದನ್ನು ದಾಂಡೇಲಿ ಬಳಿಯ ನಾಗಝರಿ ಎಂಬಲ್ಲಿ ಕೆಳಭಾಗದಲ್ಲಿ ಸಂಗ್ರಹಿಸಲಾಗಿದೆ. ಇಲ್ಲಿ ಐದು ಘಟಕಗಳು 150 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತವೆ. ಕದ್ರಾ ಸಮುದ್ರ ಮಟ್ಟಕ್ಕಿಂತ ಕೆಳಗಿರುವ ಕೊನೆಯ ಅಣೆಕಟ್ಟು ಆಗಿದ್ದು, ಮೂರು ಘಟಕಗಳು ತಲಾ 50 ಮೆಗಾವ್ಯಾಟ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಆದರೆ ನಾವು ಅದರ ಸಾಮರ್ಥ್ಯದ ಅರ್ಧದಷ್ಟು ಮಾತ್ರ ಉತ್ಪಾದಿಸುತ್ತಿದ್ದೇವೆ ಎಂದು ಕೆಪಿಸಿಎಲ್ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. 

ಇತ್ತೀಚಿನ ವರದಿಯ ಪ್ರಕಾರ, ನಾಗಝರಿ 500 ಮೆಗಾವ್ಯಾಟ್ ಮತ್ತು ಕೊಡಸಲ್ಲಿ 34 ಮೆಗಾವ್ಯಾಟ್ಗಿಂತ ಕಡಿಮೆ ವಿದ್ಯುತ್ ಉತ್ಪಾದಿಸಬಹುದು, ಆದರೆ 150 ಮೆಗಾವ್ಯಾಟ್ ಸಾಮರ್ಥ್ಯದ ಕದ್ರಾ ಇನ್ನೂ ಕಾರ್ಯಾಚರಣೆಯನ್ನು ಪುನರಾರಂಭಿಸಬೇಕಿದೆ. ಈಗಿನಂತೆ, ರಾಜ್ಯವು ಸೌರ ಕೇಂದ್ರಗಳಿಂದ ವಿದ್ಯುತ್  ಸೆಳೆಯುತ್ತಿದ್ದು, ಅದನ್ನು ಖಾಸಗಿ ಕಂಪನಿಗಳಿಂದ ಖರೀದಿಸುತ್ತಿದೆ. ಉಡುಪಿ ವಿದ್ಯುತ್ ನಿಗಮ ನಿಯಮಿತ ತನ್ನ ಸೌರ ಮೂಲಗಳ ಮೂಲಕ ಪ್ರತಿದಿನ 2 ಮಿಲಿಯನ್ ಯೂನಿಟ್ ಕೊಡುಗೆ ನೀಡಿದರೆ, ಜಿಂದಾಲ್ ನಿಂದ ಒಂದು ಮಿಲಿಯನ್ ಯೂನಿಟ್ ಖರೀದಿಸಲಾಗುತ್ತದೆ. ಸುಮಾರು 21 ಮಿಲಿಯನ್ ಯೂನಿಟ್ ಸೌರಶಕ್ತಿಯನ್ನು ಪ್ರತಿ ಯೂನಿಟ್‌ಗೆ 10 ರೂಪಾಯಿಯಂತೆ ಖರೀದಿಸಲಾಗುತ್ತಿದೆ.

ರಾಜ್ಯ ಸರ್ಕಾರದ ಮುಂದೆ ಉಷ್ಣ ವಿದ್ಯುತ್ ಮತ್ತೊಂದು ಪ್ರಮುಖ ಆಯ್ಕೆಯಾಗಿದೆ. ಆದರೆ ಮೀಸಲಾದ ಕಲ್ಲಿದ್ದಲು ಪೂರೈಕೆಯ ಕೊರತೆಯು ಸರ್ಕಾರಿ ಸ್ವಾಮ್ಯದ ಬಳ್ಳಾರಿ, ರಾಯಚೂರು ಮತ್ತು ಯಮರಸ್ ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ವಿದ್ಯುತ್ ಅಗತ್ಯತೆ ಪೂರೈಸಲು ಇತರೆ ದೇಶಗಳಿಂದ ಅಗ್ಗದ ಕಲ್ಲಿದ್ದಲು ಆಮದು ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ, ಸೆಪ್ಟೆಂಬರ್ 4 ರ ಹೊತ್ತಿಗೆ, ರಾಜ್ಯವು 223.19 ಮಿಯು ವಿದ್ಯುತ್  ಬಳಸಿದೆ. ಉತ್ತಮ ಮಳೆಯಾದರೆ ಮಾತ್ರ ಪರಿಸ್ಥಿತಿಯನ್ನು ರಕ್ಷಿಸಬಹುದು ಮತ್ತು ವಿಶೇಷವಾಗಿ ಬೆಂಗಳೂರಿನಲ್ಲಿ ಲೋಡ್ ಶೆಡ್ಡಿಂಗ್ ತಪ್ಪಿಸಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com