'ಸಂಘರ್ಷವಾದರೂ ಸರಿ ಮಹಿಷ ದಸರಾಗೆ ಅವಕಾಶ ಇಲ್ಲ; ಸಿದ್ದು ಸರ್ಕಾರದಲ್ಲಿ ಧರ್ಮ ವಿರೋಧಿಗಳಿಗೆ ಶಕ್ತಿ ಬರುತ್ತದೆ': ಪ್ರತಾಪ ಸಿಂಹ

ಮಹಿಷ ದಸರಾ ಎಂಬ ಅನಾಚಾರಕ್ಕೆ ಚಾಮುಂಡಿಬೆಟ್ಟ ಸೂಕ್ತವಲ್ಲ. ಅಲ್ಲಿ ಮಹಿಷ ದಸರಾ ನಡೆಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಬಿಜೆಪಿ ಸಂಸದ ಪ್ರತಾಪ ಸಿಂಹ
ಬಿಜೆಪಿ ಸಂಸದ ಪ್ರತಾಪ ಸಿಂಹ
Updated on

ಮೈಸೂರು: ಮಹಿಷ ದಸರಾ ಎಂಬ ಅನಾಚಾರಕ್ಕೆ ಚಾಮುಂಡಿಬೆಟ್ಟ ಸೂಕ್ತವಲ್ಲ. ಅಲ್ಲಿ ಮಹಿಷ ದಸರಾ ನಡೆಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ವಿಶ್ವ ವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಚುರುಕುಗೊಂಡಿರುವಂತೆಯೇ ಇತ್ತ ಮತ್ತೊಂದು ಬದಿಯಲ್ಲಿ ಮಹಿಷ ದಸರಾ ನಡೆಸಲು ತೆರೆಮರೆ ಪ್ರಯತ್ನಗಳೂ ನಡೆಯುತ್ತಿದ್ದು, ಇದರ ವಿರುದ್ಧ ಕಿಡಿಕಾರಿರುವ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಮೈಸೂರಿನಲ್ಲಿ ಮಹಿಷ ದಸರಾ ಆಚರಣೆಗೆ ಅವಕಾಶ ಕೊಡುವುದಿಲ್ಲ. ಈ ವಿಷಯದಲ್ಲಿ ಸಂಘರ್ಷಕ್ಕೂ ಸಿದ್ಧವಿದ್ದೇವೆ’ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಚಾಮುಂಡಿಬೆಟ್ಟಕ್ಕೆ ಪ್ರತಿ ನಿತ್ಯ ಸಾವಿರಾರು ಮಂದಿ ಬರುತ್ತಾರೆ. ಅವರು ಬರುವುದು ಚಾಮುಂಡಿ ತಾಯಿಯ ದರ್ಶನಕ್ಕೆ ಹಾಗೂ ಆಶೀರ್ವಾದ ಪಡೆಯಲೆಂದೇ ಹೊರತು ಬೇರೆ ಉದ್ದೇಶಕ್ಕಲ್ಲ. ಆಸ್ತಿಕರಿಗೆ ತಾಯಿ ಚಾಮುಂಡಿ ಇದ್ದಾಳೆ. ನಂಬಿಕೆ ಇಲ್ಲದವರಿಗೆ ಬೇರೆ ಇನ್ಯಾರೋ ಇರಬಹುದು. ಇದನ್ನು ಚಾಮುಂಡಿ ಬೆಟ್ಟ ಎನ್ನುತ್ತಾರೆಯೇ ಹೊರತು ಮಹಿಷ ಬೆಟ್ಟ ಎಂದು ಕರೆಯುವುದಿಲ್ಲ. ಮಹಿಷನ ಮೇಲೆ ಪ್ರೀತಿ ಇರುವವರು ಮನೆಯಲ್ಲಿ ಫೋಟೊ ಇಟ್ಟುಕೊಂಡು ಪೂಜಿಸಲಿ. ನಿನ್ನಂತಹ ಮಗ ನನಗೂ ಹುಟ್ಟಲೆಂದು ಕೇಳಿಕೊಳ್ಳಲಿ. ಆದರೆ, ಮಹಿಷ ದಸರಾ ಎಂಬ ಅನಾಚಾರಕ್ಕೆ ಚಾಮುಂಡಿಬೆಟ್ಟ ಸೂಕ್ತವಲ್ಲ. ಅಲ್ಲಿ ನಡೆಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇಂಥಹ ಅನಾಚಾರಗಳನ್ನು ಬಿಜೆಪಿ ಸರ್ಕಾರದಲ್ಲಿ ನಿಲ್ಲಿಸಿದ್ದೆವು. ಮತ್ತೆ ಮುಂದುವರಿಸಲು ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರು ಅವಕಾಶ ಕೊಡಬಾರದು ಎಂದು ಎಚ್ಚರಿಕೆ ನೀಡಿದರು.

‘ಕೆಲವರು ಯಾವಾಗ ಮಹಿಷ ದಸರಾ ಆಚರಿಸುತ್ತೇವೆ ಎಂದು ಹೇಳಿದ್ದಾರೆಯೋ ಆ ದಿನಾಂಕದಂದೇ ನಾನೂ ಸೇರಿದಂತೆ ಬಿಜೆಪಿಯ ಮುಖಂಡರೆಲ್ಲರೂ ಮಹಿಷ ಪ್ರತಿಮೆಯ ಬಳಿಗೇ ಬರುತ್ತೇವೆ. ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿರುವ ನಾವು ಚಾಮುಂಡಿಗೆ ಅವಮಾನವಾಗಲು ಅವಕಾಶ ಕೊಡುವುದಿಲ್ಲ. ಅನಾಚಾರವನ್ನು ತಡೆದೇ ತಡೆಯುತ್ತೇವೆ. ಹೇಗೆ ನಡೆಸುತ್ತಾರೋ ನೋಡೋಣ. ಅನಾಚಾರ ಮರುಕಳಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೋಡಿಕೊಳ್ಳಬೇಕು. ಮುಖ್ಯಮಂತ್ರಿಗಳೇ ನಿಮಗೆ ದೇವರ ಬಗ್ಗೆ ನಿಮಗೆ ನಂಬಿಕೆ ಇಲ್ಲದಿದ್ದರೆ ಪರವಾಗಿಲ್ಲ. ಆದರೆ, ಮೈಸೂರಿಗರು ಮತ್ತು ಚಾಮುಂಡಿ ತಾಯಿಯ ಭಕ್ತರ ನಂಬಿಕೆ ಒಡೆಯಲು ಹೋಗಬೇಡಿ. ಮಹಿಷ ದಸರಾ ಮಾಡಲು ಹೊರಟಿರುವ ಮನೆಯವರ ಮಹಿಳೆಯರೂ ಚಾಮುಂಡಿಯ ಭಕ್ತೆಯರೇ ಆಗಿರುತ್ತಾರೆ. ಅಧಿಕಾರದಲ್ಲಿ ಯಾರೇ ಇರಲಿ. ಆದರೆ, ಅನಾಚಾರಕ್ಕೆ ನಾವು ಬಿಡುವುದಿಲ್ಲ’ ಎಂದು ಪ್ರತಾಪ್ ಸಿಂಹ ಹೇಳಿದರು.

'ಕಾಂಗ್ರೆಸ್ ಆಡಳಿತದಲ್ಲಿ ಧರ್ಮ ವಿರೋಧಿಗಳಿಗೆ ಶಕ್ತಿ ಬರುತ್ತದೆ'
‘ಸಿದ್ದರಾಮಯ್ಯ ಸರ್ಕಾರವಿದ್ದಾಗ ಮಹಿಷ ದಸರೆಗೆ ಅನುಮತಿ ನೀಡಿದ್ದರು. ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನಾವು ಮಟ್ಟ ಹಾಕಿದ್ದೆವು. ಅದೇನೋ ಗೊತ್ತಿಲ್ಲ, ಸಿದ್ದರಾಮಯ್ಯ ಸರ್ಕಾರ ಬಂದಾಗ ಧರ್ಮ ವಿರೋಧಿಗಳಿಗೆ ಶಕ್ತಿ ಬರುತ್ತದೆ. ಅದನ್ನೇ ಮಹಿಷ ದಸರಾ ರೂಪದಲ್ಲಿ ನೋಡುತ್ತಿದ್ದೇವೆ ಎಂದರು.

‘ಅ. 13ರಂದು ಮಹಿಷ ದಸರಾ ಆಚರಿಸಲಾಗುವುದು. ಮಹಿಷ ಪ್ರತಿಮೆ ಬಳಿ ಸ್ಥಳದ ಕೊರತೆ ಇರುವುದರಿಂದಾಗಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾರ್ಯಕ್ರಮ ಆಯೋಜಿಸಲಿದ್ದೇವೆ. ಮಹಿಷನ ಪ್ರತಿಮೆಗೆ ನೂರಾರು ಮಂದಿ ಸಮ್ಮುಖದಲ್ಲಿ ಪುಷ್ಪಾರ್ಚನೆ ಮಾಡಲಾಗುವುದು. ಆಚರಣೆಗೆ ಅನುಮತಿಯ ಅವಶ್ಯಕತೆ ಇಲ್ಲ’ ಎಂದು ಮಹಿಷ ದಸರಾ ಆಚರಣೆ ಸಮಿತಿಯವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com