ಬೆಂಗಳೂರು: ಭೂಕಬಳಿಕೆ, ಹಲ್ಲೆ, ಜಾತಿ ನಿಂದನೆ ಆರೋಪದ ಅಡಿಯಲ್ಲಿ ಯೋಜನೆ ಹಾಗೂ ಸಾಂಖ್ಯಿಕ ಸಚಿವ ಡಿ.ಸುಧಾಕರ್ ಮೇಲೆ ಎಫ್ಐಆರ್ ದಾಖಲಾಗಿದ್ದು ಈ ನಡುವೆ ಡಿ.ಸುಧಾಕರ್ ಬ್ರಾಹ್ಮಣರ ಬಗ್ಗೆ ಅಶ್ಲೀಲ ಪದ ಬಳಸಿ ಮಾತನಾಡಿರುವ ವೀಡಿಯೋ ವೈರಲ್ ಆಗತೊಡಗಿದೆ.
ಸಚಿವರು ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಖಂಡಿಸಿದೆ.
ಸಚಿವರ ಹೇಳಿಕೆಯನ್ನು ಖಂಡಿಸಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ, ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದು, ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
"ಜಮೀನು ವ್ಯವಹಾರದ ವಿಷಯದಲ್ಲಿ ಸಚಿವ ಸುಧಾಕರ್ ಬ್ರಾಹ್ಮಣರನ್ನು ಅವಹೇಳನ ಮಾಡಿದ್ದು, ಇದು ಅವರ ಸಂವಿಧಾನ ವಿರೋಧಿ ನೀತಿಯಾಗಿದೆ ಎಂದು ಅಶೋಕ್ ಹಾರನಹಳ್ಳಿ ಸಿಎಂ, ಡಿಸಿಎಂಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ತೆಗೆದುಕೊಂಡ ಪ್ರತಿಜ್ಞಾವಿಧಿಯನ್ನು ಸಚಿವ ಸುಧಾಕರ್ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಒಂದು ಕ್ಷಣ ಸಹ ಸಚಿವ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಹೊಂದಿಲ್ಲ ಎಂದು ಅಶೋಕ್ ಹಾರನಹಳ್ಳಿ ಹೇಳಿದ್ದಾರೆ. ಪ್ರತಿಜ್ಞಾವಿಧಿಗೆ ತದ್ವಿರುದ್ಧವಾಗಿ ನಡೆದುಕೊಂಡಿರುವ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕೆಂದು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರು ಒತ್ತಾಯಿಸಿದ್ದಾರೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ರಾಘವೇಂದ್ರ ಭಟ್ ಮಾತನಾಡಿ ಸಚಿವ ಡಿ.ಸುಧಾಕರ್ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಬ್ರಾಹ್ಮಣ ಸಮುದಾಯವಷ್ಟೇ ಅಲ್ಲದೇ ಯಾವುದೇ ಸಮುದಾಯದ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಬಾರದು, ಸಚಿವರ ಬ್ರಾಹ್ಮಣ ಸಮುದಾಯದ ನಿಂದನೆಯನ್ನು ಬ್ರಾಹ್ಮಣ ಮಹಾಸಭಾ ಖಂಡಿಸುತ್ತದೆ. ಕೂಡಲೇ ಸಚಿವರು ಸಮುದಾಯದ ಕ್ಷಮೆ ಕೋರಬೇಕು ಇಲ್ಲದೇ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಣ್ಣಪುಟ್ಟ ಸಮುದಾಯವನ್ನು ಪ್ರೀತಿಯಿಂದ ಕಂಡಿದ್ದೇನೆ ಜಾತಿ ನಿಂದನೆ ಮಾಡಿಲ್ಲ: ಸುಧಾಕರ್
ಈ ನಡುವೆ ಸಚಿವ ಡಿ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಬ್ರಾಹ್ಮಣ ಸಂಸ್ಕೃತಿ, ಜೈನ ಸಂಸ್ಕೃತಿ ಒಂದೇ. ಬ್ರಾಹ್ಮಣರಂತೆ ಜೈನರೂ ಜನಿವಾರ ಧರಿಸುತ್ತಾರೆ. ನಾನು ಬ್ರಾಹ್ಮಣ ಸಮುದಾಯವನ್ನು ನಿಂದನೆ ಮಾಡಿಲ್ಲ. ಸಣ್ಣಪುಟ್ಟ ಸಮುದಾಯವನ್ನು ಪ್ರೀತಿಯಿಂದ ಕಂಡಿದ್ದೇನೆ ಅವರ ಆಚಾರ ವಿಚಾರಗಳಂತೆ ನಮ್ಮ ವಿಚಾರಗಳೂ ಇವೆ. ನಾನು ಸಚಿವ ಎಂಬ ಕಾರಣಕ್ಕಾಗಿ ನನ್ನ ವಿರುದ್ಧ ಪಿತೂರಿ ಮಾಡಲಾಗುತ್ತಿದೆ, ಭೂಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ತಪ್ಪು ಮಾಡಿದ್ದರೆ ರಾಜೀನಾಮೆ ತಪ್ಪು ಮಾಡದೇ ಇದ್ದಾಗ ಏಕೆ ರಾಜೀನಾಮೆ ನೀಡಲಿ, ಸಿಎಂ, ಡಿಸಿಎಂ ಗೆ ಏನು ದಾಖಲೆ ಕೊಡಬೇಕೋ ಕೊಟ್ಟಿದ್ದೇನೆ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಕೇಳಿದ್ದೇನೆ ಎಂದು ಸಚಿವರು ಹೇಳಿದ್ದಾರೆ.
ಸಚಿವ ಸುಧಾಕರ್ ವಿರುದ್ಧ ಸುಳ್ಳು ಕೇಸ್ ದಾಖಲು, ರಾಜೀನಾಮೆ ನೀಡುವ ಅಗತ್ಯವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
“ಸಚಿವ ಸುಧಾಕರ್ ಅವರ ವಿರುದ್ಧ ದಾಖಲಾಗಿರುವ ದೂರು ಸಿವಿಲ್ ಪ್ರಕರಣ. ಧಮಕಿಗೂ ಪಿಸಿಆರ್ ದೂರಿಗೂ ಬಹಳ ವ್ಯತ್ಯಾಸವಿದೆ. ಈ ವಿಚಾರವಾಗಿ ನಾನು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಇದೊಂದು ಸುಳ್ಳು ಕೇಸ್ ಎಂದು ತಿಳಿದು ಬಂದಿದೆ. ಹೀಗಾಗಿ ಸುಧಾಕರ್ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, “ಬಿಜೆಪಿ ಏನಾದರೂ ಕುತಂತ್ರ ಮಾಡಲಿ. ಡಿ. ಸುಧಾಕರ್ ಅವರದು ಸಿವಿಲ್ ಪ್ರಕರಣವಾಗಿದೆ. ಪಕ್ಷದ ಅಧ್ಯಕ್ಷನಾಗಿ ನಾನು ಪ್ರಕರಣದ ಬಗ್ಗೆ ಸಂಪೂರ್ಣ ವರದಿ ಪಡೆದಿದ್ದೇನೆ. ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ. ಸುಧಾಕರ್ ಅವರು ಅನುಮತಿ ಮೇರೆಗೆ ಖಾಸಗಿ ಜಮೀನು ಖರೀದಿ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಬೇರೆಯವರು ಕಾಂಪೌಂಡ್ ಹಾಕಿದ್ದಾರೆ. ಹೀಗಾಗಿ ಇವರ ಕಡೆಯವರು ಜಾಗ ಭದ್ರ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ವಿಚಾರವಾಗಿ ಪರಿಶಿಷ್ಟ ಜಾತಿಯವರು ದೂರು ನೀಡಿದ್ದು, ಪಿಸಿಆರ್ ಪ್ರಕಾರ ದೂರು ದಾಖಲಿಸಲಾಗಿದೆ.
ಈ ದೂರು ನೀಡುವ ಸಂದರ್ಭದಲ್ಲಿ ಸುಧಾಕರ್ ಅವರು ಚಿತ್ರದುರ್ಗದಲ್ಲಿ ಇದ್ದರು. ಹೀಗಾಗಿ ಇದು ಸುಳ್ಳು ಕೇಸು ಎಂದು ನನಗೆ ಗೊತ್ತಿದೆ. ಎಲ್ಲ ಮಾಹಿತಿ ನಮ್ಮ ಬಳಿ ಇದೆ. ನಾಳೆ ಬೆಳಗ್ಗೆ ನನ್ನ ಮೇಲೂ ಸುಳ್ಳು ದೂರು ನೀಡಬಹುದು. ಬಿಜೆಪಿಯವರು ಸುಧಾಕರ್ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಕನಸು ಕಾಣುವ ಅಗತ್ಯವಿಲ್ಲ. ಯಾರಾದರೂ ತಪ್ಪು ಮಾಡಿದ್ದರೆ, ಕಾನೂನು ಮುಂದೆ ಯಾರೂ ದೊಡ್ಡವರಿಲ್ಲ. ಕಾನೂನಿಗೆ ಎಲ್ಲರೂ ಗೌರವ ನೀಡಬೇಕು.”
ವಿಡಿಯೋ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ, “ಧಮಕಿ ಪ್ರಕರಣಕ್ಕೂ ಪಿಸಿಆರ್ ಪ್ರಕರಣಕ್ಕೂ ಬಹಳ ವ್ಯತ್ಯಾಸವಿದೆ” ಎಂದು ಹೇಳಿದರು.
Advertisement