ತೆರಿಗೆ ವಂಚನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ತೆರಿಗೆ ವಂಚನೆ, ತೆರಿಗೆ ಸೋರಿಕೆ, ತೆರಿಗೆ ಕಳ್ಳತನ ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದರು.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: ತೆರಿಗೆ ವಂಚನೆ, ತೆರಿಗೆ ಸೋರಿಕೆ, ತೆರಿಗೆ ಕಳ್ಳತನ ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಪ್ರಗತಿ ಪರಿಶೀಲನೆ ಗುರುವಾರ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ,  ತೆರಿಗೆ ವಂಚಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಇನ್ನಷ್ಟು ತೀವ್ರವಾಗಿ ಜಾರಿಗೊಳಿಸುವ ಮೂಲಕ ತೆರಿಗೆ ವಂಚನೆ ತಡೆಗಟ್ಟುವ ಕಡೆಗೆ ಹೆಚ್ಚು ಆಸಕ್ತಿ ಕೊಡಬೇಕು. ತೆರಿಗೆ ವಂಚನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ವಾಣಿಜ್ಯ ತೆರಿಗೆ ಸಂಗ್ರಹದ ಬೆಳವಣಿಗೆ ದರ ಶೇ 19.2ರಷ್ಟಿದ್ದು, ಈ ಬೆಳವಣಿಗೆ ದರ ಇಡೀ ದೇಶದಲ್ಲಿಯೇ ಅತಿ ಹೆಚ್ಚು. ಆ ಮೂಲಕ, ಸರಕು ಮತ್ತು ಸೇವಾ ತೆರಿಗೆ ಮತ್ತು ಮಾರಾಟ ತೆರಿಗೆ ಸಂಗ್ರಹದ ಸಾಧನೆಯಲ್ಲಿ ಕರ್ನಾಟಕವು ದೇಶಕ್ಕೆ ನಂಬರ್‌ ಒನ್‌ ಎನಿಸಿಕೊಂಡಿದೆ ಎಂದು ರಾಜ್ಯದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶದ ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ರಾಜ್ಯದ ಪಾಲು ಶೇ 9.4ರಷ್ಟಿದೆ. ಕಳೆದ ಬಾರಿಗಿಂತ ಈ ಬಾರಿ ರಾಜ್ಯದ ಪಾಲು ಹೆಚ್ಚಾಗಿದೆಎಂದು ಅಧಿಕಾರಿಗಳು ಮುಖ್ಯಮಂತ್ರಿ ಅವರಿಗೆ ವಿವರಿಸಿದರು. ದೇಶದ ಸರಾಸರಿ ತೆರಿಗೆ ಸಂಗ್ರಹ ಬೆಳವಣಿಗೆ ದರ ಶೇ 15ರಷ್ಟು ಮಾತ್ರ ಇದೆ. ಅದಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹ ವಿಚಾರದಲ್ಲಿ ಗಮನಾರ್ಹ ಸಾಧನೆ ಆಗಿದೆ. ಹಾಗೆಂದು, ಇಷ್ಟಕ್ಕೆ ಸಮಾಧಾನಪಟ್ಟುಕೊಳ್ಳದೆ ತೆರಿಗೆ ವಂಚನೆ ಪ್ರಕರಣಗಳನ್ನು ಹೆಚ್ಚೆಚ್ಚು ಪತ್ತೆ ಹಚ್ಚಿ ತೆರಿಗೆ ಸಂಗ್ರಹ ಗುರಿಯನ್ನು ದಾಟಿ ಸಾಧನೆ ಮಾಡುವ ಅವಕಾಶಗಳಿವೆ. ಅದನ್ನು ಸಾಧಿಸಿ ತೋರಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಕಿವಿಮಾತು ಹೇಳಿದರು.

ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ ಶೇ 24ರ ಬೆಳವಣಿಗೆ ಗುರಿ ನೀಡಲಾಗಿದೆ. ಈ ಗುರಿ ಮೀರಬೇಕು. ಕಾರ್ಯಚಟುವಟಿಕೆಯಲ್ಲಿ ಹಿಂದೆ ಉಳಿದವರು ಎಲ್ಲ ಪ್ರಯತ್ನಗಳನ್ನೂ ಮಾಡಬೇಕು. ಜಾಗೃತ ದಳದವರೂ ಸಹಕರಿಸಬೇಕು. ಎರಡು ತಿಂಗಳ ನಂತರ ಮತ್ತೆ ಪ್ರಗತಿ ಪರಿಶೀಲಿಸಲಾಗುವುದು. ಆ ವೇಳೆಗೆ ಇನ್ನಷ್ಟು ಪ್ರಗತಿಯ ವರದಿ ನೀಡಿ. ಮುಂದಿನ ಸಭೆ ವೇಳೆಗೆ ಒಟ್ಟಾರೆ ಪರಿಸ್ಥಿತಿ ಈಗಿರುವುದಕ್ಕಿಂತ ಹೆಚ್ವು ಆಶಾದಾಯಕ ಆಗಿರುವಂತೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

ಅಬಕಾರಿ ಇಲಾಖೆ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಸಿಎಂ, ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಲು, ಅಕ್ರಮ ಮದ್ಯ ಸಾಗಾಟ ತಡೆಯಲು, ತೆರಿಗೆ ಬಾಕಿ ವಸೂಲಿ ಹಾಗೂ ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗಡಿ ಪ್ರದೇಶಗಳಲ್ಲಿ ಅದರಲ್ಲೂ ಗೋವಾದಿಂದ ಅಕ್ರಮ ಮದ್ಯ ಸಾಗಾಟದ ಮೇಲೆ ಜಾರಿ ಸಂಸ್ಥೆಗಳು ತೀವ್ರ ನಿಗಾ ಇಡಬೇಕು ಎಂದರು. ಅಕ್ರಮ ಮದ್ಯ ಉತ್ಪಾದನೆ ಮತ್ತು ಮಾರಾಟವು ಬಡವರ ಆದಾಯ ಮತ್ತು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ಕಂದಾಯ ವಸೂಲಾತಿ ಹೆಚ್ಚಳಕ್ಕೆ ಆದ್ಯತೆ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com