
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬೆಂಗಳೂರು ಬಂದ್ ಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಬೆಂಬಲ ನೀಡಿದ್ದು, ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, 'ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ಸರ್ಕಾರ ಕಟಿಬದ್ಧವಾಗಿದೆ. ಕರ್ನಾಟಕದ ರೈತರ ಹಿತ ಕಾಪಾಡಲು ನಾವಿದ್ದೇವೆ, ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಮನವಿ ಮಾಡಿದ್ದೇವೆ. ಯಾವುದೇ 'ಬಂದ್' ಮಾಡಬೇಡಿ ಎಂದು ನಾನು ಅವರಿಗೆ ಮನವಿ ಮಾಡುತ್ತೇನೆ.. .ಕರ್ನಾಟಕದ ಹಿತಾಸಕ್ತಿಯನ್ನು ಬೆಂಬಲಿಸಲು ನಾವಿದ್ದೇವೆ. ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಹೇಳಿದರು.
'ಕಾವೇರಿ' ಬಂದ್ ಗೆ ಜೆಡಿಎಸ್-ಬಿಜೆಪಿ ಬೆಂಬಲ
ಇನ್ನು ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಬೆಂಬಲ ಘೋಷಣೆ ಮಾಡಿದ್ದು, ಈ ಕುರಿತು ಮಾತನಾಡಿದ ಬಿಜೆಪಿ ಹಿರಿಯ ನಾಯಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, 'ಕಾವೇರಿ ಸಮಸ್ಯೆ ತೀರಾ ವಿಶೇಷವಾದದ್ದು, ಸುಪ್ರೀಂಕೋರ್ಟ್ ತೀರ್ಪು ನೀಡದೇ ನೀರು ಬಿಡುತ್ತಿದ್ದಾರೆ ಅದಕ್ಕಾಗಿ ನೀರು ಬಿಟ್ಟಿದ್ದೇವೆ ಎಂದು ರಾಜ್ಯಾದ್ಯಂತ ಅದರಲ್ಲೂ ಮಂಡ್ಯದಲ್ಲಿ ಆಂದೋಲನ ನಡೆಸುತ್ತಿದ್ದೇವೆ, ಇಂದು ಕೂಡ ಬಂದ್‌ಗೆ ಕರೆ ನೀಡಿದ್ದೇವೆ. ನಾವು ರಾಜ್ಯದಾದ್ಯಂತ, ವಿಶೇಷವಾಗಿ ಬೆಂಗಳೂರಿನಲ್ಲಿ ಆಂದೋಲನವನ್ನು ಪ್ರಾರಂಭಿಸಬಹುದು. ಮೈಸೂರು ಮತ್ತು ಬೆಂಗಳೂರಿಗೆ ಕುಡಿಯಲು ನೀರಿಲ್ಲ ಅದಕ್ಕಾಗಿಯೇ ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ ಪ್ರತಿಭಟನೆ
ಇನ್ನು ಇದೇ ವಿಚಾರವಾಗಿ ಮಂಡ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ, 'ಕೆಆರ್ ಎಸ್ ಜಲಾಶಯದಲ್ಲಿ ಪ್ರತಿದಿನ ನೀರಿನ ಮಟ್ಟ ಕಡಿಮೆಯಾಗುತ್ತಿದೆ, ಬೆಳೆದ ಬೆಳೆಗೆ ಎರಡು ಬಾರಿ ನೀರು ಬಿಡಬೇಕು, ನಮ್ಮ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಭವಿಷ್ಯಕ್ಕಾಗಿ, ಕುಡಿಯುವ ನೀರಿಗಾಗಿ ಮತ್ತು ಬೆಳೆದ ಬೆಳೆಯನ್ನು ಉಳಿಸುವುದು ಇಲ್ಲಿ ಅಸಾಧ್ಯವಾದ ಪರಿಸ್ಥಿತಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಗೆ ಮನವರಿಕೆ ಮಾಡುವಲ್ಲಿ ಈ ಸರ್ಕಾರ ಮೊದಲ ದಿನದಿಂದ ವಿಫಲವಾಗಿದೆ, ಅವರು ಅದನ್ನು ಅತ್ಯಂತ ಲಘುವಾಗಿ ತೆಗೆದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
Advertisement