ಕಾಚಿಗುಡ-ಯಶವಂತಪುರ ಮಧ್ಯೆ ವಂದೇ ಭಾರತ್‌ ರೈಲು; ರಾಜಧಾನಿ ಎಕ್ಸ್ ಪ್ರೆಸ್ ಗಿಂತ ಅಗ್ಗ ಮತ್ತು ಫಾಸ್ಟ್!

ರಾಜ್ಯದ ಮೂರನೇ ವಂದೇ ಭಾರತ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಭಾನುವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದ್ದು, ಸೋಮವಾರದಿಂದ ವಾಣಿಜ್ಯ ಸಂಚಾರ ಆರಂಭವಾಗಿದೆ.
ವಂದೇ ಭಾರತ್ ಎಕ್ಸ್ ಪ್ರೆಸ್
ವಂದೇ ಭಾರತ್ ಎಕ್ಸ್ ಪ್ರೆಸ್

ಬೆಂಗಳೂರು: ರಾಜ್ಯದ ಮೂರನೇ ವಂದೇ ಭಾರತ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಭಾನುವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದ್ದು, ಸೋಮವಾರದಿಂದ ವಾಣಿಜ್ಯ ಸಂಚಾರ ಆರಂಭವಾಗಿದೆ.

ಈ ವಂದೇ ಭಾರತ್ ರೈಲು ಯಶವಂತಪುರ ಮತ್ತು ಕಾಚಿಗುಡ ನಡುವಿನ 609 ಕಿಮೀ ದೂರವನ್ನು ಕ್ರಮಿಸಲು ಎಂಟೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಈ ಎರಡು ನಗರಗಳನ್ನು ಸಂಪರ್ಕಿಸುವ ರಾಜಧಾನಿ ಎಕ್ಸ್ ಪ್ರೆಸ್ ರೈಲಿಗಿಂತ 2 ಗಂಟೆ 35 ನಿಮಿಷ ಮುಂಚಿತವಾಗಿಯೇ ವಂದೇ ಭಾರತ್ ರೈಲು ಗಮ್ಯ ಸ್ಥಾನವನ್ನು ತಲುಪುತ್ತದೆ. ದರದ ವಿಚಾರದಲ್ಲಿಯೂ ರಾಜಧಾನಿ ಎಕ್ಸ್ ಪ್ರೆಸ್ ಗಿಂತ ವಂದೇ ಭಾರತ್ ಟಿಕೆಟ್ ಬೆಲೆ ಕಡಿಮೆ ಇದೆ.

ಬೆಂಗಳೂರಿನಿಂದ ಸಿಕಂದರಾಬಾದ್/ಕಾಚಿಗುಡಕ್ಕೆ ಸರಾಸರಿ 20 ರೈಲುಗಳು ಸಂಚರಿಸುತ್ತಿದ್ದು, ಧೋನೆ ಮೂಲಕ 110 ಕಿ.ಮೀ ವೇಗದಲ್ಲಿ ಸಂಚರಿಸುವ ಮೂಲಕ ವಂದೇ ಭಾರತ್ ರೈಲು ಉಳಿದ ರೈಲುಗಳಿಗಿಂತ ಬೇಗ ತಲುಪುತ್ತದೆ.

ಸೋಮವಾರ ಮಧ್ಯಾಹ್ನ 2.45ಕ್ಕೆ ಯಶವಂತಪುರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಿಂದ ಸಂಚಾರ ಆರಂಭಿಸಿದ ವಂದೇ ಭಾರತ್ ರೈಲಿನಲ್ಲಿ ಲಭ್ಯವಿರುವ 526 ಟಿಕೆಟ್‌ಗಳಲ್ಲಿ ಒಟ್ಟು 186 ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿತ್ತು ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾನು ಕೆಲಸಕ್ಕಾಗಿ ಹೈದರಾಬಾದ್ ಮತ್ತು ಬೆಂಗಳೂರಿನ ನಡುವೆ ಆಗಾಗ್ಗೆ ಪ್ರಯಾಣಿಸುತ್ತೇನೆ ಮತ್ತು ಈ ರೈಲು ನನಗೆ ಸೂಕ್ತವಾಗಿದೆ. ನನ್ನ ಪ್ರಯಾಣಕ್ಕಾಗಿ ನಾನು ಖಂಡಿತವಾಗಿಯೂ ವಂದೇ ಭಾರತ್ ಅನ್ನು ಬಳಸುತ್ತೇನೆ ಎಂದು ರೈಲಿನಲ್ಲಿ ಪ್ರಯಾಣಿಸಿದ ಅಪೊಲೊ ಗ್ರೂಪ್‌ ಉದ್ಯೋಗಿ ಮನೋಜ್ ಎಸ್ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ನಾನು ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿರುವುದು ಇದೇ ಮೊದಲು. ನನ್ನ ಮೊದಲ ಅನಿಸಿಕೆ ಏನೆಂದರೆ ಎಲ್ಲವೂ ಚೆನ್ನಾಗಿದೆ. ನನ್ನ ಟಿಕೆಟ್ ಗಾಗಿ ನಾನು 1500 ರೂಪಾಯಿ ಪಾವತಿಸಿದ್ದೇನೆ ಮತ್ತು ಅದು ನಿಜವಾಗಿಯೂ ಉತ್ತಮ ಬೆಲೆ ಎಂದು ಸಿಕಂದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಶೈಲೇಶ್ ತಿಳಿಸಿದ್ದಾರೆ.

ವಂದೇ ಭಾರತ್ ಹಾಗೂ ಇತರ ಎಕ್ಸ್‌ಪ್ರೆಸ್‌ ರೈಲಿನ ದರಗಳು:
ವಂದೇ ಭಾರತ್, YPR ನಿಂದ KCG(Tr ನಂ. 20704): ಚೇರ್ ಕಾರ್ 1540 ರೂ. ಮತ್ತು ಎಕ್ಸಿಕ್ಯೂಟಿವ್ ಚೇರ್ ಬೆಲೆ 2865 ರೂಪಾಯಿ ಇದೆ.

ಅದೇ ರೀತಿ ಕಾಚಿಗುಡದಿಂದ ಯಶವಂತಪುರಕ್ಕೆ(Tr ನಂ. 20703): ಚೇರ್ ಕಾರ್: ರೂ 1600 ಮತ್ತು ಎಕ್ಸಿಕ್ಯೂಟಿವ್ ಚೇರ್: 2915 ರೂ. ಇದೆ.

ಎರಡು ನಗರಗಳ ನಡುವಿನ ಟಿಕೆಟ್ ದರ ಇತರ ಪ್ರಮುಖ ರೈಲುಗಳೊಂದಿಗೆ ಹೋಲಿಸಿದಾಗ ಸಮಯ ಮತ್ತು ವೆಚ್ಚದಲ್ಲಿ ಸಾಕಷ್ಟು ವ್ಯತ್ಯಾಸ ಇದೆ. 

ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ AC 3 ಟೈರ್ ಗೆ1905; ಎಸಿ 2 ಟೈರ್ ಗೆ : ರೂ 2585 ಮತ್ತು ಫಸ್ಟ್ ಎಸಿ: 3190.ರೂ. ಇದೆ. ರಾಜಧಾನಿ ಬೆಂಗಳೂರಿನಿಂದ ಹೈದರಾಬಾದ್ ಗೆ 11 ಗಂಟೆ 5 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಅದು ಬೇರೆ ಮಾರ್ಗದಲ್ಲಿ ಸಂಚರಿಸುತ್ತದೆ.

ಇನ್ನು ಕಾಚಿಗುಡ ಎಕ್ಸ್‌ಪ್ರೆಸ್ 11 ಗಂಟೆ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ: ಈ ರೈಲಿನಲ್ಲಿ ಫಸ್ಟ್ ಎಸಿ: 2380 ರೂ.; ಟೈರ್ 2 ಟಿಕೆಟ್ ಬೆಲೆ ರೂ. 1415 ಮತ್ತು ಟೈರ್ 3 ಟಿಕೆಟ್ ದರ ರೂ 1005. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com