ಕರ್ನಾಟಕ ಬಂದ್ ಹಿಂಪಡೆಯುವುದಿಲ್ಲ- ಕನ್ನಡಪರ ಹೋರಾಟಗಾರರು; ಇಂದು ಬಿಜೆಪಿ-ಜೆಡಿಎಸ್ ಜಂಟಿ ಪ್ರತಿಭಟನೆ

ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ಮಾಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಹಿರಿಯ ಚಳವಳಿಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಾಡಿದ್ದು ಅಂದರೆ ಸೆಪ್ಟೆಂಬರ್ 29ರಂದು ಶುಕ್ರವಾರ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು ಬಂದ್ ವೇಳೆ ಕಂಡುಬಂದ ದೃಶ್ಯ
ಬೆಂಗಳೂರು ಬಂದ್ ವೇಳೆ ಕಂಡುಬಂದ ದೃಶ್ಯ
Updated on

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೊರತೆಯಿಂದ ತೀವ್ರ ಬರಗಾಲ ಉಂಟಾಗಿರುವಾಗ ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ಮಾಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಹಿರಿಯ ಚಳವಳಿಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಾಡಿದ್ದು ಅಂದರೆ ಸೆಪ್ಟೆಂಬರ್ 29ರಂದು ಶುಕ್ರವಾರ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ನಿನ್ನೆ ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆ ನಡೆಸಿ ತಮಿಳುನಾಡಿಗೆ ಮತ್ತೆ 18 ದಿನ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ CWRC ಆದೇಶ ನೀಡಿದೆ. ನಾಳೆ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15ರವರೆಗೆ ಪ್ರತಿನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚಿಸಿದೆ. ಇದರಿಂದ ರೈತರು ಮತ್ತಷ್ಟು ಆಕ್ರೋಶಗೊಂಡಿದ್ದು ಪ್ರತಿಭಟನೆ ಮುಂದುವರೆಸಿದ್ದಾರೆ. 

ಇಂದು ಬಿಜೆಪಿ, ಜೆಡಿಎಸ್ ಜಂಟಿಯಾಗಿ ಪ್ರತಿಭಟನೆ: ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ, ಜೆಡಿಎಸ್​​ ಪ್ರತಿಭಟನೆ ನಡೆಸಲು ಮುಂದಾಗಿದೆ. ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಹೆಚ್ ಡಿ ಕುಮಾರಸ್ವಾಮಿ, ಸದಾನಂದಗೌಡ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ. ಮಂಡ್ಯ, ರಾಮನಗರ, ಮೈಸೂರು ಸೇರಿದಂತೆ ಅನೇಕ ಕಡೆ ಪ್ರತಿಭಟನೆ ಮುಂದುವರೆಯಲಿದೆ. 

ಬೆಂಗಳೂರು ಬಂದ್ ಬೇಡ ಎಂದಿದ್ದ ವಾಟಾಳ್: ನಿನ್ನೆ ಅಂದರೆ ಸೆಪ್ಟೆಂಬರ್ 26ರಂದು ಮಂಗಳವಾರ ಬೆಂಗಳೂರು ಬಂದ್ ಮಾಡಲಾಗಿತ್ತು. ಆದರೆ, ಈ ನಿರ್ಧಾರವನ್ನು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರಿಗೆ ತಿಳಿಸಿ, ಅವರ ನೇತೃತ್ವದಲ್ಲಿರುವ ಕೆಲವು ಕನ್ನಡ ಪರ ಸಂಘಟನೆಗಳ ಬೆಂಬಲವನ್ನು ಬೆಂಗಳೂರು ಬಂದ್ ಗೆ ಸಿಗುವಂತೆ ಮಾಡಲು ಪ್ರಯತ್ನ ಮಾಡಿದಾಗ, ವಾಟಾಳ್ ನಾಗರಾಜ್ ಅವರು ಬೆಂಗಳೂರು ಬಂದ್ ಗೆ ಒಪ್ಪಿರಲಿಲ್ಲ.

ಕನ್ನಡಪರ ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಪ್ರತಿಭಟನೆ: ಕನ್ನಡಪರ ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಿಎಂ ಮನೆಗೆ ಮುತ್ತಿಗೆ ಹಾಕಲು ತಯಾರಿ ನಡೆದಿದೆ. ನಿನ್ನೆ ಧರಣಿನಿರತ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹೋರಾಟವನ್ನು ಹತ್ತಿಕ್ಕುವ ಪೊಲೀಸ್ ನಡೆ ಖಂಡಿಸಿ ಇಂದು ಪ್ರತಿಭಟನೆ ನಡೆಯಲಿದೆ.

ಇನ್ನು ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕನ್ನಡ ಪರ ಹೋರಾಟಗಾರ ಪ್ರವೀಣ್ ಶೆಟ್ಟಿ ರೈತ ಸಂಘಟನೆಯವರು ಬೆಂಗಳೂರು ಬಂದ್ (Bengaluru Bandh)​ ನಿರ್ಧಾರವನ್ನು ಆತುರದಿಂದ ತೆಗೆದುಕೊಂಡಿದ್ದರಿಂದ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ನಾವು ವಾಟಾಳ್ ನಾಗರಾಜ್ (Vatal Nagaraj) ಅವರ ನೇತೃತ್ವದಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕ್ತೀವಿ. ನಮ್ಮ ಕಾವೇರಿ ಹೋರಾಟ ಮುಂದುವರಿಯುತ್ತೆ, ಕರ್ನಾಟಕ ಬಂದ್ ನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ. 

ಸೆಪ್ಟೆಂಬರ್ 29ರಂದು ನಡೆಯುವ ಕರ್ನಾಟಕ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಲಿದೆ. ಕನ್ನಡ ಪರ ಹೋರಾಟಗಾರು ಕಾವೇರಿಗಾಗಿ ಸದಾ ಸಿದ್ಧರಾಗುತ್ತಾರೆ ಎಂದು ಹೇಳಿದರು.

ಪ್ರಾಣ ಬಿಟ್ಟೇವು ,ಕಾವೇರಿ ಬಿಡೇವು. ಸರ್ಕಾರ ,ಪಕ್ಷಗಳು ಕಾವೇರಿ ದ್ರೋಹ ಮಾಡಿದ್ದಾರೆ. ನಾವು ಯಾವ ಪಕ್ಷದ ಪರವಾಗಿ ಇಲ್ಲ, ನಮ್ಮದು ಕಾವೇರಿಗಾಗಿ ಹೋರಾಟ. ಜೈಲು, ಬಂಧನ ನಮಗೆ ಹೊಸ ವಿಷಯ ಅಲ್ಲ. ನಾಡಿದ್ದು ಅಖಂಡ ಕರ್ನಾಟಕ ಬಂದ್ ಮಾಡಲಾಗುವುದು ಎಂದು ಸಾರಾ ಗೋವಿಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com