ದಾವಣಗೆರೆ: ಎರಡು ವರ್ಷಗಳಿಂದ ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ; ಹಿಂದೂ ಸಂಘಟನೆ ಕಾರ್ಯಕರ್ತನ ಬಂಧನ

ಸಾಹಿತಿಗಳಿಗೆ ಅನಾಮಧೇಯ ಪತ್ರದ ಮೂಲಕ ಜೀವ ಬೆದರಿಕೆ ಪತ್ರ ಕಳುಹಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ದಾವಣಗೆರೆಯ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ
ಬಂಧಿತ ಆರೋಪಿ
Updated on

ದಾವಣಗೆರೆ: ಸಾಹಿತಿಗಳಿಗೆ ಅನಾಮಧೇಯ ಪತ್ರದ ಮೂಲಕ ಜೀವ ಬೆದರಿಕೆ ಪತ್ರ ಕಳುಹಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ದಾವಣಗೆರೆಯ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಪತ್ರ ಬರೆಯುತ್ತಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಶಿವಾಜಿ ರಾವ್‌ ಜಾಧವ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಸುಮಾರು ಎರಡು ವರ್ಷಗಳಿಂದ ಕೊಲೆ ಬೆದರಿಕೆ ಪತ್ರ ಬರೆಯುತ್ತಿದ್ದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಸಿಸಿಬಿ ಎಸಿಪಿ ನವೀನ್ ಕುಲಕರ್ಣಿ ಮತ್ತು ತಂಡ ದಾವಣಗೆರೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ದಾವಣಗೆರೆ ಸೇರಿದಂತೆ ಕೆಲವೆಡೆ ಕಾರ್ಯಾಚರಣೆ ನಡೆಸಿದ ಸಿಸಿಬಿ, ಪತ್ರ ಬರೆದಿರುವ ಶಂಕೆಯ ಮೇರೆಗೆ 8 ಮಂದಿಯನ್ನು ವಶಕ್ಕೆ ಪಡೆದಿತ್ತು. ಈ ಪೈಕಿ ಶಿವಾಜಿ ರಾವ್‌ ಜಾಧವ್ ಮೇಲೆ ಸಿಸಿಬಿಗೆ ಪ್ರಬಲ ಗುಮಾನಿ ವ್ಯಕ್ತವಾಗಿತ್ತು. 41 ವರ್ಷ ವಯಸ್ಸಿನ ಆತ (ಆರೋಪಿ) ಎಂಟನೇ ತರಗತಿ ಪಾಸ್ ಆಗಿದ್ದು, ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನಿಂದ ಹೆಚ್ಚಿನ ಮಾಹಿತಿ ಪಡೆಯಲು ಸಿಸಿಬಿ 10 ದಿನಗಳ ಪೊಲೀಸ್ ಕಸ್ಟಡಿ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಸಿಕ್ಕಿರುವ ಮಾಹಿತಿಯ ಪ್ರಕಾರ, ರಾಜ್ಯದ 15 ಕ್ಕೂ ಹೆಚ್ಚು ಸಾಹಿತಿಗಳು ಮತ್ತು ಬುದ್ಧಿಜೀವಿಗಳು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಅವರನ್ನು ಭೇಟಿ ಮಾಡಿ, ಕಳೆದ ಒಂದು ವರ್ಷದಿಂದ ತಮಗೆ ಬೆದರಿಕೆ ಪತ್ರಗಳು ಬರುತ್ತಿವೆ ಎಂದು ತಿಳಿಸಿದ್ದರು.

ಖ್ಯಾತ ಸಾಹಿತಿಗಳಾದ ಕುಂ.ವೀರಭದ್ರಪ್ಪ, ಬಂಜಗೆರೆ ಜಯಪ್ರಕಾಶ್, ಬಿ.ಎಲ್.ವೇಣು, ಬಿ.ಟಿ.ಲಲಿತಾ ನಾಯಕ್‌, ವಸುಂಧರ ಭೂಪತಿ ಸೇರಿದಂತೆ ಕೆಲವು ಸ್ವಾಮೀಜಿಗಳಿಗೆ ಅನಾಮಧೇಯ ಹೆಸರಿನಲ್ಲಿ ಜೀವ ಬೆದರಿಕೆ ಪತ್ರಗಳು ಬಂದಿದ್ದವು. ಈ ಪತ್ರಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು, ಇದರ ಹಿಂದಿರುವವರನ್ನು ಪತ್ತೆ ಹಚ್ಚಲು ಸಿಸಿಬಿಗೆ ತನಿಖೆಗೆ ವಹಿಸಿತ್ತು. ಪತ್ರಗಳು ನಿರಂತರವಾಗಿ ಬರುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಏಳು ಕಡೆಗಳಲ್ಲಿ ಎಫ್‌ಐಆರ್ ದಾಖಲಾಗಿತ್ತು.

ನಿಮ್ಮನ್ನು ಯಾಕೆ ಕೊಲೆ ಮಾಡಬಾರದು? ನಿಮ್ಮನ್ನು ಯಾಕೆ ಗುಂಡಿಟ್ಟು ಕೊಲ್ಲಬಾರದು? ನೀವು ನಿಮ್ಮ ಕೊನೆ ದಿನಗಳನ್ನು ಎಣಿಸುತ್ತಿದ್ದೀರಿ ಎಂದು ಶಿವಾಜಿ ರಾವ್ ಪತ್ರ ಬರೆಯುತ್ತಿದ್ದ. ಪ್ರತಿ ಬೆದರಿಕೆ ಪತ್ರದಲ್ಲೂ ಒಂದೇ ರೀತಿಯ ಕೈ ಬರಹ ಇತ್ತು. ದಾವಣಗೆರೆಯಿಂದಲೇ ಈ ಪತ್ರಗಳು ಪೋಸ್ಟ್ ಆಗುತ್ತಿದ್ದವು. ಎರಡು ವರ್ಷಗಳಿಂದ ಬರುತ್ತಿದ್ದ ಅನಾಮಧೇಯ ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಏಳು ಎಫ್‌ಐಆರ್ ದಾಖಲಾಗಿತ್ತು. ನಂತರ ಪ್ರಕರಣವನ್ನು ರಾಜ್ಯ ಸರ್ಕಾರ ಸಿಸಿಬಿಗೆ ವರ್ಗಾಯಿಸಿತ್ತು.

ಒಂದೇ ಒಂದು ಕೈಬರಹದಿಂದ ಕೊಲೆ ಬೆದರಿಕೆ ಬಂದಿದೆ ಎನ್ನುವುದು ವಿಧಿ ವಿಜ್ಞಾನ ಪ್ರಯೋಗಾಲಯದ (FSL) ಪರೀಕ್ಷೆಯಿಂದ ದೃಢಪಟ್ಟಿತ್ತು. ತನಿಖೆಯಿಂದ ದಾವಣಗೆರೆ ಮೂಲದಿಂದ ಪತ್ರ ಬಂದಿದ್ದರೂ ಬೇರೆ ಬೇರೆ ತಾಲೂಕು, ಜಿಲ್ಲೆಗಳಿಗೆ ಹೋಗಿ ಪೋಸ್ಟ್‌ ಮಾಡಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com