ಸುಡಾನ್ ಬಿಕ್ಕಟ್ಟು: ನೀವು ಬ್ಯುಸಿಯಿದ್ದರೆ, ನಮ್ಮ ಜನರನ್ನು ಮರಳಿ ಕರೆತರಬಲ್ಲ ವ್ಯಕ್ತಿಯನ್ನು ತಿಳಿಸಿ- ಜೈಶಂಕರ್‌ಗೆ ಸಿದ್ದರಾಮಯ್ಯ ಟಾಂಗ್

ಕರ್ನಾಟಕದ 31 ಬುಡಕಟ್ಟು ಜನಾಂಗದವರು ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಅವರನ್ನು ಮರಳಿ ಕರೆತರುವಲ್ಲಿ ಸರ್ಕಾರದ ನಿಷ್ಕ್ರಿಯತೆಯ ಆರೋಪದ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ನಡುವಿನ ಟ್ವಿಟರ್ ವಾರ್ ಸ್ಫೋಟಗೊಂಡಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದ 31 ಬುಡಕಟ್ಟು ಜನಾಂಗದವರು ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಅವರನ್ನು ಮರಳಿ ಕರೆತರುವಲ್ಲಿ ಸರ್ಕಾರದ ನಿಷ್ಕ್ರಿಯತೆಯ ಆರೋಪದ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ನಡುವಿನ ಟ್ವಿಟರ್ ವಾರ್ ಸ್ಫೋಟಗೊಂಡಿದೆ.

ಸುಡಾನ್ ಬಿಕ್ಕಟ್ಟಿನಲ್ಲಿ ಸಿಲುಕಿರುವ ಕರ್ನಾಟಕದ ಆದಿವಾಸಿಗಳನ್ನು ರಕ್ಷಿಸುವಂತೆ ಮಂಗಳವಾರ ಸಿದ್ದರಾಮಯ್ಯ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಮಾಡಿದ್ದು, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಜೈಶಂಕರ್, 'ನಿಮ್ಮ ಟ್ವೀಟ್‌ನಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ! ಅಲ್ಲಿ ಜೀವಗಳು ಅಪಾಯಕ್ಕೆ ಸಿಲುಕಿವೆ, ನೀವಿಲ್ಲಿ ರಾಜಕೀಯ ಮಾಡಬೇಡಿ' ಎಂದಿದ್ದರು.

ಏಪ್ರಿಲ್ 14 ರಂದು ಸಂಘರ್ಷ ಪ್ರಾರಂಭವಾದಾಗಿನಿಂದ, ಖಾರ್ಟೂಮ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಸುಡಾನ್‌ನಲ್ಲಿರುವ ಹೆಚ್ಚಿನ ಭಾರತೀಯ ಪ್ರಜೆಗಳು ಮತ್ತು ಪಿಐಒಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.

ಇದಕ್ಕೆ ಮಂಗಳವಾರ ತಡರಾತ್ರಿ ಟ್ವೀಟ್ ಮಾಡಿ ಮತ್ತೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, 'ನೀವು (ಜೈಶಂಕರ್) ವಿದೇಶಾಂಗ ಸಚಿವರಾಗಿರುವುದರಿಂದ ಸಹಾಯಕ್ಕಾಗಿ ನಿಮ್ಮ ಬಳಿ ಮನವಿ ಮಾಡಿದ್ದೇನೆ. ನೀವು ದಿಗಿಲುಗೊಳ್ಳುವಲ್ಲಿ ನಿರತರಾಗಿದ್ದರೆ, ದಯವಿಟ್ಟು ನಮ್ಮ ಜನರನ್ನು ಮರಳಿ ಕರೆತರಲು ಸಹಾಯ ಮಾಡುವ ವ್ಯಕ್ತಿಯನ್ನು ನಮಗೆ ಸೂಚಿಸಿ' ಎಂದು ತಿರುಗೇಟು ನೀಡಿದ್ದಾರೆ.

ಇದು ಸಿದ್ದರಾಮಯ್ಯ ಅವರಿಗೆ ಕೇಂದ್ರ ವಿದೇಶಾಂಗ ಸಚಿವರಿಂದ ಅತ್ಯಂತ ಭಯಾನಕ ಪ್ರತಿಕ್ರಿಯೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಮಧ್ಯಪ್ರವೇಶಿಸಿ ಸುಡಾನ್‌ನಲ್ಲಿ ಸಿಲುಕಿರುವ ನಮ್ಮವರು ಸುರಕ್ಷಿತವಾಗಿ ವಾಪಸಾಗುವಂತೆ ನೋಡಿಕೊಳ್ಳಬೇಕು’ ಎಂದು ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದರು.

'ಸುಡಾನ್‌ನಲ್ಲಿ ಕಳೆದ ಕೆಲವು ದಿನಗಳಿಂದ ಕರ್ನಾಟಕದ ಹಕ್ಕಿ ಪಿಕ್ಕಿ ಬುಡಕಟ್ಟು ಸಮುದಾಯದ 31 ಮಂದಿ ಆಹಾರವಿಲ್ಲದೆ ಪರದಾಡುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ, ಕೇಂದ್ರ ಸರ್ಕಾರ ಅವರನ್ನು ಮರಳಿ ಕರೆತರಲು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ಸರ್ಕಾರ ರಾಜತಾಂತ್ರಿಕ ಮಾತುಕತೆ ನಡೆಸಬೇಕು ಮತ್ತು ಅವರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಬೇಕು' ಎಂದು ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದರು.

'ಸುಡಾನ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಲ್ಲಿ ನಾವು ಒಬ್ಬ ಭಾರತೀಯ ಮತ್ತು ಇತರ 60 ಜನರನ್ನು ಕಳೆದುಕೊಂಡಿರುವುದು ದುರದೃಷ್ಟಕರ. ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪ ಮತ್ತು ಈ ಪ್ರದೇಶದಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಮತ್ತೊಂದು ಟ್ವೀಟ್ ಮಾಡಿದ್ದರು.

ರಾಜ್ಯದ ಆದಿವಾಸಿಗಳು ವ್ಯಾಪಾರಕ್ಕಾಗಿ ಅಲ್ಲಿಗೆ ಹೋಗಿದ್ದರು. ಚನ್ನಗಿರಿಯ ಐದು, ಶಿವಮೊಗ್ಗದ ಏಳು, ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದ 19 ಬುಡಕಟ್ಟು ಜನಾಂಗದವರು ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿವಮೊಗ್ಗ ಹಕ್ಕಿ ಪಿಕ್ಕಿ ಶಿಬಿರದಿಂದ ಪ್ರಭು ಅವರು ತಮ್ಮನ್ನು ರಕ್ಷಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮೂಲಗಳ ಪ್ರಕಾರ, ಸುಡಾನ್‌ನ ಅಲ್ಪಶೀರ್ ನಗರದಲ್ಲಿ 10 ದಿನಗಳ ಕಾಲ ಭಾರತೀಯರು ಸಿಲುಕಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com