ಕರ್ನಾಟಕ ಸರ್ಕಾರಕ್ಕೆ ರಾಹುಲ್ ಗಾಂಧಿ ಪತ್ರ; ಬಳ್ಳಾರಿ ಜೀನ್ಸ್ ಘಟಕಗಳಿಗೆ ಶಕ್ತಿ ತುಂಬುವಂತೆ ಒತ್ತಾಯ!

ಕಾಂಗ್ರೆಸ್ ನಾಯಕ ಮಾಜಿ ಸಂಸದ ರಾಹುಲ್ ಗಾಂಧಿ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೇ. 10 ರಂದು ನೀಡಿದ್ದ ಭರವಸೆಗೆ ಸಂಬಂಧಿಸಿದ ಪತ್ರ ಇದಾಗಿದೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ಮಾಜಿ ಸಂಸದ ರಾಹುಲ್ ಗಾಂಧಿ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.  ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೇ. 10 ರಂದು ನೀಡಿದ್ದ ಭರವಸೆಗೆ ಸಂಬಂಧಿಸಿದ ಪತ್ರ ಇದಾಗಿದೆ. 

ಬಳ್ಳಾರಿಯ ಜೀನ್ಸ್ ಉತ್ಪಾದನಾ ಘಟಕಗಳ ಸುಧಾರಣೆ ಮಾಡುವಂತೆ ಪತ್ರದಲ್ಲಿ ರಾಹುಲ್ ಗಾಂಧಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪತ್ರ ಬಂದ ಬೆನ್ನಲ್ಲೇ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹಾಗೂ ತಂಡದವರು ಉತ್ಪಾದಕರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ 300 ಸಣ್ಣ ಹಾಗೂ ಮಧ್ಯಮ ಜೀನ್ಸ್ ಉತ್ಪಾದಕ ಘಟಕಗಳಿದ್ದು, ಮೇ.10 ರಂದು ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ರಾಹುಲ್ ಗಾಂಧಿ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ನ್ನು ಸ್ಥಾಪಿಸಿ ಜಿಲ್ಲೆಯನ್ನು ಜೀನ್ಸ್ ರಾಜಧಾನಿ ಮಾಡುವ ಭರವಸೆ ನೀಡಿದ್ದರು.

ಈ ವಿಷಯವಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ, ಇತ್ತೀಚೆಗೆ ಬಳ್ಳಾರಿಯಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿರುವ ಜೀನ್ ಉತ್ಪಾದಕ ಭರತ್ ಮುತಾ, ಈ ವಲಯದಲ್ಲಿ ಎದುರಾಗುತ್ತಿರುವ ಸಮಸ್ಯೆಗಳೆಡೆಗೆ ಗಮನ ಕೊಡಬೇಕೆಂದು ಹೇಳಿದ್ದಾರೆ. 

“ನಾವು ಬಳ್ಳಾರಿಯಲ್ಲಿ ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅತ್ಯಂತ ಹಳೆಯ ಡೆನಿಮ್ ತಯಾರಕರು. ಬಳ್ಳಾರಿಯಲ್ಲಿ ಉತ್ತಮ ಸಂಪರ್ಕದ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ನಮ್ಮ ಉತ್ಪನ್ನಗಳು ಚೆನ್ನೈ, ಮುಂಬೈ ಮತ್ತು ಇತರ ನಗರಗಳಲ್ಲಿನ ಮಾರುಕಟ್ಟೆಗಳನ್ನು ತಲುಪಬೇಕಾಗಿದೆ. ಆಂಧ್ರ ಪ್ರದೇಶದ ಗುಂತಕಲ್‌ನಂತಹ ನಗರಗಳಲ್ಲಿನ ರೈಲ್ವೆ ನಿಲ್ದಾಣಗಳನ್ನು ನಾವು ಅವಲಂಬಿಸದೆ ಇರಲು ಉತ್ತಮ ರೈಲ್ವೆ ಸಂಪರ್ಕ ಮತ್ತು ಮೂಲಸೌಕರ್ಯ ಅತ್ಯಗತ್ಯವಾಗಿದೆ. 

ಅಲ್ಲದೆ, ಡೆನಿಮ್ ತಯಾರಕರು ಉತ್ಪನ್ನವನ್ನು ತೊಳೆಯಲು ರಾಸಾಯನಿಕಗಳನ್ನು ಬಳಸುತ್ತಾರೆ. ಆದರೆ ಮಾಲಿನ್ಯವನ್ನು ಉಂಟುಮಾಡುತ್ತಾರೆ ಎಂದು ಆರೋಪಿಸಿ ಅವರಿಗೆ ನೋಟಿಸ್‌ಗಳನ್ನು ನೀಡಲಾಗುತ್ತಿದೆ.

<em><strong>2023ರ ವಿಧಾನಸಭಾ ಚುನಾವಣೆ ವೇಳೆ ಬಳ್ಳಾರಿಯ ಜೀನ್ಸ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ</strong></em>
2023ರ ವಿಧಾನಸಭಾ ಚುನಾವಣೆ ವೇಳೆ ಬಳ್ಳಾರಿಯ ಜೀನ್ಸ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ

ಆದ್ದರಿಂದ ಸರಕಾರದಿಂದ ಕಡ್ಡಾಯವಾಗಿ ಬಳ್ಳಾರಿಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಬೇಕು. ಬಳ್ಳಾರಿಗೂ ಉತ್ತಮ ವಿಮಾನ ಸಂಪರ್ಕದ ಅಗತ್ಯವಿದೆ,'' ಎಂದು ವಿವರಿಸಿದರು. ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆ ಅವ್ಯವಸ್ಥಿತವಾಗಿದ್ದು, ಈ ಬಗ್ಗೆ ಗಮನಹರಿಸಬೇಕು ಎಂದು ಭರತ್ ಹೇಳಿದ್ದಾರೆ. 10-15 ಡೆನಿಮ್ ಘಟಕಗಳು ಅಹಮದಾಬಾದ್‌ಗೆ ಮತ್ತು 4-5 ಬೆಂಗಳೂರಿಗೆ ಸ್ಥಳಾಂತರಗೊಂಡಿವೆ. ಅಲ್ಲದೆ, 10-15 ಮಂದಿ ಅಂಗಡಿಗಳನ್ನು ಮುಚ್ಚಿದ್ದಾರೆ. ಗಂಭೀರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿದರೆ ಯಾರಾದರೂ ಬಳ್ಳಾರಿಯಿಂದ ಏಕೆ ಹೋಗುತ್ತಾರೆ? ಎಂದು ಅವರು ಪ್ರಶ್ನಿಸಿದರು.

ಈ ಹಿಂದೆ ಕೈಗಾರಿಕಾ ಸಚಿವರಾಗಿದ್ದ, ಇಂದಿನ ಕಾಂಗ್ರೆಸ್ ಮುಖಂಡ, ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಜೀನ್ಸ್ ತಯಾರಕರಿಗೆ ಉತ್ತಮ ಸೌಲಭ್ಯ ಮತ್ತು ರಿಯಾಯಿತಿ ನೀಡಿದರೆ ಅವರಿಗೆ ಉತ್ತೇಜನ ನೀಡಿದಂತಾಗುತ್ತದೆ ಮತ್ತು ಜಿಲ್ಲೆಯಲ್ಲಿ ಹೂಡಿಕೆ ಮಾಡಲು ನಾವು ಕೆಲವು ಅಂತರರಾಷ್ಟ್ರೀಯ ಬ್ರಾಂಡ್‌ಗಳನ್ನು ಆಕರ್ಷಿಸಬಹುದು. ಇದು ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ' ಎಂದು ಹೇಳಿದ್ದಾರೆ. 

ಬಿಜೆಪಿ ಬಳ್ಳಾರಿ ಘಟಕದ ಅಧ್ಯಕ್ಷ ಮುರಹರಿಗೌಡ ಗೋನಾಳ್ ಮಾತನಾಡಿ, ಜಿಲ್ಲೆಯಲ್ಲಿ ಜೀನ್ಸ್ ಘಟಕಗಳು ಜವಳಿ ಪಾರ್ಕ್ ನಂತೆ ಉತ್ತಮ ಸಂಘಟಿತವಾಗಿ ಸ್ಥಾಪನೆಯಾಗಬೇಕಿದೆ. "ಅವರಿಗೆ ಉತ್ತಮ ಮಾರುಕಟ್ಟೆಗಳಿಗೆ ಪ್ರವೇಶ ಬೇಕು" ಎಂದು ಹೇಳಿದ್ದಾರೆ.

ಎಂ.ಬಿ.ಪಾಟೀಲರನ್ನು ಸಂಪರ್ಕಿಸಿದಾಗ, "ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲಾಗುವುದು ಮತ್ತು ಅವರ ಕುಂದುಕೊರತೆಗಳನ್ನು ಪರಿಹರಿಸುದರತ್ತ ಗಮನ ಹರಿಸುತ್ತೇವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com