ಇನ್ನು 5 ವರ್ಷಗಳಲ್ಲಿ ಬಳ್ಳಾರಿ 'ಜೀನ್ಸ್ ಕ್ಯಾಪಿಟಲ್'- ರಾಹುಲ್ ಗಾಂಧಿ ಭರವಸೆ
ಬಳ್ಳಾರಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳ್ಳಾರಿಯಲ್ಲಿ ಶುಕ್ರವಾರ ಭರ್ಜರಿ ರೋಡ್ ಶೋ ನಡೆಸಿ, ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಿದರು.
ಬಳ್ಳಾರಿಯ ಟಿ ಬಿ ಸ್ಯಾನಿಟೋರಿಯಂ ಗೇಟ್ ನಿಂದ ತೆರದ ವಾಹನದಲ್ಲಿ ಕೌಲ್ ಬಜಾರ್ ಮಾರ್ಗವಾಗಿ ಮೋತಿ ಸರ್ಕಲ್ ವರೆಗೆ ರೋಡ್ ಶೋ ನಡೆಸಿದರು. ಬಳ್ಳಾರಿ ಗ್ರಾಮೀಣ ಅಭ್ಯರ್ಥಿ ಬಿ. ನಾಗೇಂದ್ರ ಮತ್ತು ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ನಾರಾ ಭರತ್ ರೆಡ್ಡಿ ರಾಹುಲ್ ಗಾಂಧಿಗೆ ಜೊತೆಯಲ್ಲಿದ್ದರು.
ನಂತರ ಬಹಿರಂಗ ವೇದಿಕೆ ಕಾರ್ಯಕ್ರಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಳ್ಳಾರಿಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸುವ ಮೂಲಕ 'ಜೀನ್ಸ್ ರಾಜಧಾನಿ' ಮಾಡುತ್ತೇವೆ. ಇದು ನನ್ನ ವೈಯಕ್ತಿಕ ಭರವಸೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಹೋದಲ್ಲೆಲ್ಲಾ ಸುಳ್ಳು ಭರವಸೆಗಳನ್ನು ನೀಡುತ್ತಾರೆ, ಆದರೆ ನಾವು ಎಂದಿಗೂ ಸುಳ್ಳು ಭರವಸೆ ನೀಡುವುದಿಲ್ಲ. ಇನ್ನು 5 ವರ್ಷಗಳಲ್ಲಿ ಬಳ್ಳಾರಿ 'ಜೀನ್ಸ್ ಕ್ಯಾಪಿಟಲ್' ಆಗಲಿದೆ. ಇದಕ್ಕೆ ಎಷ್ಟು ಅನುದಾನ ಬೇಕೋ ಅದನ್ನು ಬಳ್ಳಾರಿಗೆ ಒದಗಿಸಿ ಎಂದು ಪಕ್ಷದ ಹಿರಿಯ ನಾಯಕರಿಗೆ ಹೇಳುತ್ತೇನೆ ಎಂದರು.
ಇದಕ್ಕೂ ಮುನ್ನಾ ಜೇವರ್ಗಿಯಲ್ಲಿ ಮಳೆಯಲ್ಲಿಯೇ ನೆನೆಯುತ್ತಾ ರಾಹುಲ್ ಗಾಂಧಿ ಭಾಷಣ ಮಾಡಿದರು. ನೂರಾರು ಜನ ತಲೆ ಮೇಲೆ ಕುರ್ಚಿ ಹೊತ್ತು ರಾಹುಲ್ ಗಾಂಧಿ ಭಾಷಣ ಕೇಳಿದರು.
ಕಾಂಗ್ರೆಸ್ ಸರ್ಕಾರ ಬಡವರ, ಸಣ್ಣ ವ್ಯಾಪಾರಿಗಳ, ರೈತರ, ಕೂಲಿಕಾರರ ಸರ್ಕಾರವಾಗಲಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ವಿಶೇಷ ಶಿಕ್ಷಣ ನೀತಿ ಜಾರಿ ತರಲಾಗುವುದು, ಖಾಲಿ ಇರುವ 50,000 ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ