ದಕ್ಷಿಣ ಕನ್ನಡದಲ್ಲಿ ಮತ್ತೆ ನೈತಿಕ ಪೊಲೀಸ್‌ಗಿರಿ: ಅನ್ಯ ಧರ್ಮದ ಮಹಿಳೆಯನ್ನು ಡ್ರಾಪ್ ಮಾಡಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ
ಸುಳ್ಯದಲ್ಲಿ ಕೇರಳದ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದಕ್ಷಿಣ ಕನ್ನಡ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಸಂತ್ರಸ್ತ ಮೊಹಮ್ಮದ್ ಜಲೀಲ್ (39) ಎಂಬಾತ ತನ್ನ ಕಾರಿನಲ್ಲಿ ಮಹಿಳೆಯನ್ನು ಸುಳ್ಯಕ್ಕೆ ಇಳಿಸಿ ಹಿಂತಿರುಗುತ್ತಿದ್ದಾಗ ಶನಿವಾರ ಈ ಘಟನೆ ಸಂಭವಿಸಿದೆ.
Published: 14th August 2023 10:03 AM | Last Updated: 14th August 2023 03:08 PM | A+A A-

ಸಾಂದರ್ಭಿಕ ಚಿತ್ರ
ಮಂಗಳೂರು: ಸುಳ್ಯದಲ್ಲಿ ಕೇರಳದ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದಕ್ಷಿಣ ಕನ್ನಡ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಸಂತ್ರಸ್ತ ಮೊಹಮ್ಮದ್ ಜಲೀಲ್ (39) ಎಂಬಾತ ತನ್ನ ಕಾರಿನಲ್ಲಿ ಮಹಿಳೆಯನ್ನು ಸುಳ್ಯಕ್ಕೆ ಇಳಿಸಿ ಹಿಂತಿರುಗುತ್ತಿದ್ದಾಗ ಶನಿವಾರ ಈ ಘಟನೆ ಸಂಭವಿಸಿದೆ.
ಮಲಪ್ಪುರಂ ಮೂಲದ ಜಲೀಲ್ ಸದ್ಯ ಅರಂತೋಡು ಎಂಬಲ್ಲಿ ನೆಲೆಸಿದ್ದಾರೆ. ಮೂರು ತಿಂಗಳ ಹಿಂದೆ ರಬ್ಬರ್ ತೋಟವನ್ನು ಗುತ್ತಿಗೆ ಪಡೆದು ಅಲ್ಲಿ ತೋಟ ನೋಡಿಕೊಳ್ಳುತ್ತಿದ್ದರು. ಶನಿವಾರ ಪರಿಚಿತ ಮಹಿಳೆಯೊಬ್ಬರು ಮಡಿಕೇರಿಯಿಂದ ಸುಳ್ಯಕ್ಕೆ ಬರುತ್ತಿದ್ದು, ಸುಳ್ಯದಲ್ಲಿ ತಂಗಲು ಕೊಠಡಿ ಬೇಕು ಎಂದು ತಿಳಿಸಿದ್ದಾಗಿ ಎಂದು ಸುಳ್ಯ ಪೊಲೀಸರು ತಿಳಿಸಿದ್ದಾರೆ.
ಮಹಿಳೆಗೆ ಸುಳ್ಯದಲ್ಲಿ ರೂಂ ವ್ಯವಸ್ಥೆ ಮಾಡಿ, ಅವರನ್ನು ಅಲ್ಲಿಗೆ ಬಿಟ್ಟು ತೊಡಿಕಾನದಲ್ಲಿ ತಮ್ಮ ವೈಯಕ್ತಿಕ ಕೆಲಸಕ್ಕಾಗಿ ವಾಪಸ್ಸಾಗುತ್ತಿದ್ದಾಗ ಐವರು ಆರೋಪಿಗಳು ಆತನನ್ನು ಅಡ್ಡಗಟ್ಟಿ ನಿಂದಿಸಿದ್ದಾರೆ. ಅನ್ಯ ಧರ್ಮದ ಮಹಿಳೆ ಜೊತೆಯಲ್ಲಿದ್ದ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ನೈತಿಕ ಪೊಲೀಸ್‌ಗಿರಿ: ಧರ್ಮಸ್ಥಳದಲ್ಲಿ ಮುಸ್ಲಿಂ ಆಟೋ ಚಾಲಕನ ಮೇಲೆ ಹಲ್ಲೆ; ಮೂವರ ಬಂಧನ
ಐವರು ಆರೋಪಿಗಳ ಪೈಕಿ ಮೂವರನ್ನು ಲತೀಶ್ ಗುಂಡ್ಯ, ವರ್ಷಿತ್ ಮತ್ತು ಪುನೀತ್ ಎಂದು ಗುರುತಿಸಲಾಗಿದ್ದು, ಇನ್ನಿಬ್ಬರ ಗುರುತು ಪತ್ತೆಯಾಗಬೇಕಿದೆ. ಆರೋಪಿಗಳ ವಿರುದ್ಧ ಸೆಕ್ಷನ್ 143, 147, 341, 323, 504, 506, 153 (ಎ) (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುಳ್ಯದ ಸೋಣಂಗೇರಿ ನಿವಾಸಿ ಪುನೀತ್ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದ 3 ಸುದ್ದಿ ವೆಬ್‌ಸೈಟ್‌ಗಳ ವಿರುದ್ಧ ಪ್ರಕರಣ
ಈ ಮಧ್ಯೆ, ಪುತ್ತೂರಿನ ರಾಜಕೀಯ ಮುಖಂಡರೊಬ್ಬರ ಒತ್ತಡದಿಂದ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕಾಗಿ ಮೂರು ಸುದ್ದಿ ವೆಬ್‌ಸೈಟ್‌ಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಡಿಕೆ ರಿಶ್ಯಂತ್ ಹೇಳಿದ್ದಾರೆ.
ಇದನ್ನೂ ಓದಿ: ಕಾರ್ಕಳ: ನೈತಿಕ ಪೊಲೀಸ್ ಗಿರಿ ಪ್ರಕರಣ 5 ಮಂದಿ ಬಂಧನ
ಕಹಳೆ ನ್ಯೂಸ್, ಜೂಮ್ ಇನ್ ಟಿವಿ ಮತ್ತು ನ್ಯೂ ಕನ್ನಡ ಡಾಟ್ ಕಾಮ್ ಸುದ್ದಿ ವೆಬ್‌ಸೈಟ್‌ಗಳು ಘಟನೆಯನ್ನು ತಿರುಚಿ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ಮತ್ತು ಪೊಲೀಸರ ಬಗ್ಗೆ ಸುಳ್ಳು ಮಾಹಿತಿ ಹರಡಿ ಆ ಮೂಲಕ ಕೋಮು ಶಾಂತಿ ಕದಡುವ ಪ್ರಯತ್ನಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.