ಮೂಡಲಗಿ, ಗೋಕಾಕ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ: ಸರ್ಕಾರಕ್ಕೆ ಶಾಸಕರ ಆಗ್ರಹ
ಸತತ ಒಣಹವೆಯಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕಿನಾದ್ಯಂತ ಬೆಳೆಗಳು ಒಣಗುತ್ತಿರುವುದ್ದು, ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಎರಡೂ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
Published: 21st August 2023 08:24 AM | Last Updated: 21st August 2023 12:33 PM | A+A A-

ಶಾಸಕ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ: ಸತತ ಒಣಹವೆಯಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕಿನಾದ್ಯಂತ ಬೆಳೆಗಳು ಒಣಗುತ್ತಿರುವುದ್ದು, ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಎರಡೂ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಶುಕ್ರವಾರ ಅರಭಾವಿಯಲ್ಲಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗೋಕಾಕದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ, ಮೂಡಲಗಿಯಲ್ಲಿ ಈ ಬಾರಿಯ ಮುಂಗಾರು ಮಳೆಯಲ್ಲಿ ಶೇ.40ರಷ್ಟು ಕೊರತೆಯಾಗಿದೆ ಎಂದು ಹೇಳಿದರು.
ಮುಂಗಾರು ವೈಫಲ್ಯದಿಂದ ಉಭಯ ತಾಲೂಕುಗಳ ಕೃಷಿ ಪ್ರದೇಶದಲ್ಲಿ ಬಿತ್ತಿದ್ದ ಬೆಳೆಗಳು ಒಣಗಿ ನಾಶವಾಗಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ ಒಂದು ವಾರ ಒಣಹವೆ ಮುಂದುವರಿದರೆ ರೈತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಸರಕಾರ ಒಣ ಪ್ರದೇಶಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ಸಂತ್ರಸ್ತ ರೈತರಿಗೆ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಬರಪೀಡಿತ ಗ್ರಾಮಗಳಾಗಿ ಘೋಷಿಸಲು ಸರ್ಕಾರಕ್ಕೆ ರೈತರ ಒತ್ತಾಯ, ಮಹಾರಾಷ್ಟ್ರಕ್ಕೆ ವಲಸೆ ಹೋಗುವ ಬೆದರಿಕೆ!
ಇಲ್ಲಿನ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಕಬ್ಬು ಮತ್ತು ಸೂರ್ಯಕಾಂತಿ. ಸೋಯಾಬಿನ್ ಬೆಳೆಗಳು ಮಳೆಯ ಅಭಾವದಿಂದ ಬಿತ್ತನೆ ಆಗಿರುವುದಿಲ್ಲ. ಬೆಳೆಗಳಿಗೆ ಕೊಳವೆ ಬಾವಿ ಮತ್ತು ಬಾವಿಗಳಲ್ಲಿ ಸಹ ನೀರು ಸಿಗುತ್ತಿಲ್ಲ. ಅಂತರ್ಜಲ ಮಟ್ಟ ಕುಸಿತಗೊಂಡಿದ್ದರಿಂದ ನದಿ, ಕಾಲುವೆ, ಹಳ್ಳಗಳಲ್ಲಿ ಸಹ ನೀರಿಲ್ಲ. ಕಬ್ಬಿನ ಬೆಳೆಗಳು ತೇವಾಂಶದ ಕೊರತೆಯಿಂದ ಬಾಡುತ್ತಿವೆ. ಕೌಜಲಗಿ, ಅರಭಾವಿ ಮತ್ತು ಗೋಕಾಕ ಹೋಬಳಿಗಳಲ್ಲಿ ಬೆಳೆಗಳು ಸಂಪೂರ್ಣವಾಗಿ ಬಾಡಿ ರೈತನು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾನೆ. ಕೂಡಲೇ ಸರ್ಕಾರ ಮೂಡಲಗಿ ಮತ್ತು ಗೋಕಾಕ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವಂತೆ ಆಗ್ರಹಿಸಿದರು.
ಇದೇ ವೇಳೆ ತಮ್ಮ ಕ್ಷೇತ್ರದಲ್ಲಿ ಕೈಗೊಂಡಿರುವ ಎಲ್ಲ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಈ ಭಾಗದ ಹಲವಾರು ಪ್ರಮುಖ ಬಾಕಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಅವರು, ಸಂಬಂಧಿಸಿದ ಗ್ರಾಮಗಳಲ್ಲಿ ನೀರಿನ ಅಭಾವವನ್ನು ತಪ್ಪಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಜಾರಿಗೊಳಿಸಬೇಕು ಎಂದು ಸೂಚನೆ ನೀಡದರು.